ಬೆಂಗಳೂರು: ಸಾರ್ವಜನಿಕರನ್ನು ವಂಚಿಸಲು ಸೈಬರ್ ವಂಚಕರು ಒಂದಿಲ್ಲೊಂದು ಹೊಸ ಮಾರ್ಗವನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ಎಷ್ಟೇ ಅರಿವು ಮೂಡಿಸಿದರೂ ಸಾರ್ವಜನಿಕರು ಸೈಬರ್ ವಂಚನೆಗೆ ಒಳಗಾಗುತ್ತಲೇ ಇರುವುದು ಮತ್ತೊಂದು ವಿಪರ್ಯಾಸ. ಇದೀಗ ಬ್ಯಾಂಕ್ ಗಳ ಹೆಸರಿನಲ್ಲಿ ವಂಚನೆ ಮಾಡುವುದು ಹೊಸ ಸೇರ್ಪಡೆಯಾಗಿದೆ. ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿದ ಸೈಬರ್ ವಂಚಕರು ಮಹಿಳೆಯೊಬ್ಬರಿಗೆ 2 ಲಕ್ಷ ರೂ ವಂಚಿಸಿದ್ದಾರೆ.
ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುವ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಹಕರಿಗೆ ಇ-ಮೇಲ್ ಅಥವಾ ಸಂದೇಶ ಕಳುಹಿಸುವುದು ವಾಡಿಕೆ. ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಪ್ರತಿನಿಧಿಗಳ ಹೆಸರಿನಲ್ಲಿ ಸೈಬರ್ ವಂಚಕರು 58 ವರ್ಷದ ಮಹಿಳೆಯೊಬ್ಬರಿಗೆ ನಿಮ್ಮ ವಹಿವಾಟು ಖಚಿತಪಡಿಸಿ ಎಂದು ಕರೆಮಾಡಿ ಅವರ ಖಾತೆಯಿಂದ ಕೆಲವೇ ಸೆಕೆಂಡ್ ಗಳಲ್ಲಿ 2 ಲಕ್ಷ ರೂ ಹಣವನ್ನು ಎಗರಿಸಿದ್ದಾರೆ.
ಜನವರಿ.20 ರಂದು ಬ್ಯಾಂಕ್ ಪ್ರತಿನಿಧಿ ಎಂದು ಹೇಳಿಕೊಂಡು ಕರೆ ಮಾಡಿದ್ದ ಸೈಬರ್ ವಂಚಕ ನಿಮ್ಮ ಖಾತೆಯಿಂದ ಬೇರೆ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಈ ಹಣವನ್ನು ನೀವೇ ವರ್ಗಾಯಿಸಿದ್ದರೆ ಸಂಖ್ಯೆ ಮೂರನ್ನು ಒತ್ತಿ ಇಲ್ಲದಿದ್ದರೆ ಒಂದನ್ನು ಒತ್ತಿ ಎಂದು ಹೇಳಿದ್ದ. ಇದನ್ನು ನಂಬಿದ ಮಹಿಳೆ ಒಂದನ್ನು ಒತ್ತಿದ್ದರು. ಆಗ ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಸಂಪರ್ಕಿಸಿ ಎಂದು ತಿಳಿಸಿ ಕರೆಯನ್ನು ಸ್ಥಗಿತಗೊಳಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಂಪರ್ಕ ಕಡಿತಗೊಂಡ ನಂತರ ಅನುಮಾನಗೊಂಡ ಮಹಿಳೆ ತಾವು ಖಾತೆ ಹೊಂದಿದ್ದ ಬ್ಯಾಂಕ್‌ಗೆ ತೆರಳಿ ವಿಚಾರಿಸಿದ್ದರು. ತಮ್ಮ ಖಾತೆಯಿಂದ ರೂ.2 ಲಕ್ಷ ಹಣ ವರ್ಗಾವಣೆ ಆಗಿರುವುದು ತಿಳಿದು ಬಂದಿತ್ತು ಎಂದು ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.