ಸೈಬರ್‌ ವಂಚನೆ: ದುಪಟ್ಟು ಲಾಭದ ಆಮಿಷವೊಡ್ಡಿ 1.4 ಕೋಟಿ ರೂ ವಂಚನೆ

Most read



ಬೆಂಗಳೂರು: ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ದೊರಕಲಿದೆ ಎಂದು ನಂಬಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 1.4 ಕೋಟಿ ರೂ ವಂಚಿಸಿರುವ ಸೈಬರ್‌ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಜಿ.ಪಿ. ನಗರದ ಏಳನೇ ಹಂತದ ನಿವಾಸಿ ಎಂ.ಎಸ್.ದತ್ತರಾಮ್ ಎಂಬುವರು ದಕ್ಷಿಣ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ-2008 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ದತ್ತರಾಮ್ ಅವರು ಫೇಸ್‌ಬುಕ್‌ನಲ್ಲಿ ಬಂದಿದ್ದ ಜಾಹೀರಾತು ಗಮನಿಸಿ ಅದರ ಮೇಲೆ ಕ್ಲಿಕ್ ಮಾಡಿದ್ದರು. ಕೂಡಲೇ ‘ವಿಐಪಿ ಡಿ-519’ ಎಂಬ ಹೆಸರಿನ ವಾಟ್ಸ್ಆ್ಯಪ್ ಗುಂಪಿಗೆ ಅವರನ್ನು ಸೇರ್ಪಡೆ ಮಾಡಲಾಗಿತ್ತು. ಮೊದಲ ದಿನ ವಾಟ್ಸ್ ಆ್ಯಪ್ ಗುಂಪಿನಲ್ಲಿ ಹೂಡಿಕೆ  ಕುರಿತು ಚರ್ಚೆ ನಡೆದಿತ್ತು. ಎರಡನೇ ದಿನ ಸೈಬರ್ ವಂಚಕನೊಬ್ಬ ವಾಟ್ಸ್‌ಆ್ಯಪ್‌ ಮೂಲಕ ಮೆಸೇಜ್‌ ಕಳುಹಿಸಿ, ತಾವು ತಿಳಿಸಿದಂತೆ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ದೊರೆಯಲಿದೆ ಎಂದು ಆಮಿಷವೊಡ್ಡಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನಂತರ ಲಿಂಕ್‌ವೊಂದನ್ನು ಕಳುಹಿಸಿ ‘ಆರ್ಯನ್ ಫಿನ್’ ಎನ್ನುವ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದ. ಅಪ್ಲಿಕೇಷನ್ ಡೌನ್‌ಲೋಡ್ ಆದ ಮೇಲೆ ಹೂಡಿಕೆ ಮಾಡುವಂತೆ ಹೇಳಿದ್ದ. ವಂಚಕನ ಮಾತು ನಂಬಿದ ದೂರುದಾರ, ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ ರೂ.1.4 ಕೋಟಿ ಹೂಡಿಕೆ ಮಾಡಿದ್ದರು. ಆದರೆ ಯಾವುದೇ ಲಾಭ ಅಥವಾ ಅಸಲನ್ನು ನೀಡಿರಲಿಲ್ಲ. ನಂತರ ದತ್ತರಾಮ್‌ ಅವರಿಗೆ ತಾವು ವಂಚನೆಗೊಳಗಾಗಿರುವುದು ಅವರಿವಾಗಿ ದೂರು ನೀಡಿದ್ದರು.

More articles

Latest article