ಬೆಂಗಳೂರು: ಕಳೆದ 2 ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಬೆಂಗಳೂರಿನಲ್ಲಿ ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇ. 30ರಷ್ಟು ಇಳಿಕೆ ಕಂಡುಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಹೇಳಿದ್ದಾರೆ.
ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಶೇ.30ರಷ್ಟು ಇಳಿಕೆಯಾಗಿದ್ದು, ಇದರ ಜೊತೆಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ ಎಸ್) ಪ್ರಕರಣಗಳಲ್ಲಿ ಶೇಕಡಾ 12 ರಷ್ಟು ಮತ್ತು ಆಸ್ತಿ ಸಂಬಂಧಿತ ಅಪರಾಧಗಳಲ್ಲಿಯೂ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದರು.
2023 ರ ಮೊದಲ ಮೂರು ತಿಂಗಳಲ್ಲಿ ನಗರದಲ್ಲಿ 3,588 ಸೈಬರ್ ಅಪರಾಧ ಪ್ರಕರಣಗಳು, 2024 ರಲ್ಲಿ 4,679 ಪ್ರಕರಣಗಳು ದಾಖಲಾಗಿದ್ದವು. 2025 ರಲ್ಲಿ 2,838 ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ ಗಂಭೀರ ಅಪರಾಧ ಮತ್ತು ಆಸ್ತಿ ಅಪರಾಧಗಳೂ ಕಡಿಮೆಯಾಗಿವೆ, ದರೋಡೆ ಪ್ರಕರಣಗಳಲ್ಲಿ ಶೇಕಡಾ 73, ಡಕಾಯಿತಿಗಳಲ್ಲಿ ಶೇ.71 ಮತ್ತು ಸರಗಳ್ಳತನ ಪ್ರಕರಣಗಳಲ್ಲಿ ಶೇ. 57 ರಷ್ಟು ಇಳಿಕೆಯಾಗಿದೆ ಎಂದು ವಿವರ ನೀಡಿದರು.
ಪೊಲೀಸ್ ಇಲಾಖೆ ಕೈಗೊಂಡ ಜಾಗೃತಿ ಅಭಿಯಾನಗಳಿಂದಾಗಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. OTP ಮತ್ತು KYC ವಂಚನೆ ಪ್ರಕರಣಗಳೂ ಕೂಡ ಕಡಿಮೆಯಾಗಿವೆ. ಕೇಂದ್ರ ಸರ್ಕಾರ,ರಾಜ್ಯ ಸರ್ಕಾರ ಮತ್ತು ಆನ್ ಲೈನ್ ಪೊಲೀಸ್ ಅಭಿಯಾನಗಳ ಬೃಹತ್ ಜಾಗೃತಿ ಅಭಿಯಾನಗಳ ಕಳೆದ ವರ್ಷ ಭೀತಿಯನ್ನುಂಟುಮಾಡಿದ್ದ ಡಿಜಿಟಲ್ ಅರೆಸ್ಟ್ ಮತ್ತು ಫೆಡ್ ಎಕ್ಸ್ ವಂಚನೆಗಳ ಪ್ರಕರಣಗಳಲ್ಲೂ ಇಳಿಮುಖವಾಗಿದೆ ಎಂದರು.
ಸುಧಾರಿತ ಪೊಲೀಸ್ ತಂತ್ರಗಳು, ಪ್ರಮುಖ ನಗರ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾರ್ವಜನಿಕ ಸುರಕ್ಷತಾ ಜಾಗೃತಿ ಉಪಕ್ರಮಗಳು ಅಪರಾಧ ಇಳಿಕೆಯಾಗಲು ಕಾರಣವಾಗಿವೆ ಎಂದು ಅವರು ತಿಳಿಸಿದ್ದಾರೆ