ಹೆಚ್ಚಿದ ಸೈಬರ್‌ ವಂಚಕರ ಹಾವಳಿ; ಮೂವರಿಗೆ 30 ಲಕ್ಷ ರೂ ವಂಚನೆ, ದೂರು ದಾಖಲು

Most read


ಬೆಂಗಳೂರು: ಬೆಂಗಳೂರಿನವಿವಿಧ ಸೈಬರ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಸೈಬರ್‌ ವಂಚಕರು ಮೂವರಿಗೆ 30 ಲಕ್ಷ ರೂ ವಂಚಿಸಿರುವ ಪ್ರಕರಣಗಳು ದಾಖಲಾಗಿವೆ. ಸೈಬರ್‌ ಅಪರಾಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಅಪರಾಧಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ದೆಹಲಿ ಪೊಲೀಸರೆಂದು ಹೇಳಿಕೊಂಡ ಸೈಬರ್‌ ವಂಚಕರು, ಮಲ್ಲೇಶ್ವರದಲ್ಲಿ ನೆಲಸಿರುವ 65 ವರ್ಷದ ನಿವೃತ್ತ ಅಧಿಕಾರಿಯೊಬ್ಬರಿಗೆ ವಾಟ್ಸ್‌ಆ್ಯಪ್‌ಮೂಲಕ ವಿಡಿಯೊ ಕರೆ ಮಾಡಿ, ನಿಮ್ಮ ವಿರುದ್ಧ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದರು. ಪ್ರಕರಣದ ಸಂಬಂಧ ತಮ್ಮನ್ನು ವಿಚಾರಣೆ ಮಾಡಬೇಕೆಂದು ಹೆದರಿಸಿ, ಐದು ದಿನಗಳ ಕಾಲ ಡಿಜಿಟಲ್ ಅರೆಸ್ಟ್ ನಲ್ಲಿ ಇಟ್ಟಿದ್ದರು. ಜಾಮೀನು ಹಾಗೂ ನ್ಯಾಯಾಲಯದ ಪ್ರಕ್ರಿಯೆಯ ವೆಚ್ಚಕ್ಕಾಗಿ ತಾವು ನೀಡುವ ಬ್ಯಾಂಕ್ ಖಾತೆಗೆ ರೂ.10 ಲಕ್ಷ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದ್ದರು. ಇವರಿಗೆ ಹೆದರಿಕೊಂಡಿದ್ದ ದೂರುದಾರರು ತಮ್ಮ ಕೆನರಾ ಬ್ಯಾಂಕ್ ಖಾತೆಯಿಂದ ಜ.15ರಂದು ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಮತ್ತೆ ರೂ.3 ಲಕ್ಷ ವರ್ಗಾವಣೆ ಮಾಡುವಂತೆ ವಂಚಕರು ಹೇಳಿದ್ದರು. ಆಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಆ ಅಧಿಕಾರಿ ದೂರು ನೀಡಿದ್ದರು.

ಮತ್ತೊಂದು ಪ್ರಕರಣದಲ್ಲಿ ಎಚ್‌ ಬಿಆರ್‌ ಲೇಔಟ್‌ ನ 57 ವರ್ಷದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯೊಬ್ಬರಿಗೆ ಸೈಬರ್‌ ವಂಚಕರು, 9.76 ಲಕ್ಷ ರೂ. ವಂಚಿಸಿದ್ದಾರೆ. ಇವರು ಫೇಸ್‌ ಬುಕ್‌ ಟ್ರೇಡಿಂಗ್‌ ಗೆ ಸಂಬಂಧಿಸಿದಂತೆ ಅಪರಿಚಿತ ಪೇಜ್‌ ಲಿಂಕ್‌ ಒತ್ತಿ ಅಲ್ಲಿ ಕಂಡು ಬಂದ ದಿ ಚಾರಿಟಿ ವೆಲ್ತ್‌ ಗ್ರೂಪ್‌ ಗೆ ಸೇರ್ಪಡೆಯಾಗಿದ್ದಾರೆ. ಈ ಗ್ರೂಪ್‌ ನಲ್ಲಿ ಎಸ್‌ ಎಂಸಿ ಎಸ್‌ ಟಿಕೆ ಆಪ್‌ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂದು ಮೆಸೇಜ್‌ ಮೂಲಕ ನಂಬಿಸಿದ್ದಾರೆ. ಇವರ ಮಾತು ನಂಬಿದ ಅವರು ಹಂತಹಂತವಾಗಿ 9.76 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಬಳಿಕ ಮೋಸ ಹೋಗಿರುವುದು ತಿಳಿದು ಬಂದು ಸೈಬರ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಮೂರನೇ ಪ್ರಕರಣದಲ್ಲಿ ಕುಂಬಾರಪೇಟೆಯ ಎಸ್‌ ಪಿ ರಸ್ತೆಯಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೂ ಸೈಬರ್‌ ವಂಚಕರು 10.60 ಲಕ್ಷ ರೂ ಮೋಸ ಮಾಡಿದ್ದಾರೆ. ಇವರಿಗೆ ಇನ್‌ಸ್ಟಾಗ್ರಾಂನ ‘ಸೌತ್ ಅನ್ನಾ ಎಕ್ಸ್‌ಚೇಂಜ್’ ಖಾತೆಯ ಮೂಲಕ ಸುರಾಜ್ ಹೆಸರಿನ ವ್ಯಕ್ತಿ ಪರಿಚಯವಾಗಿದ್ದ. ಸ್ವಲ್ಪದಿನಗಳ ನಂತರ, ಕರೆ ಮಾಡಿದ್ದ ಸುರಾಜ್‌, ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಅಮಿಷವೊಡ್ಡಿದ್ದ. ಈತನ ಮಾತು ನಂಬಿದ ಉದ್ಯಮಿ 2024ರ ಫೆಬ್ರುವರಿಯಿಂದ ಮೇ ತಿಂಗಳವರೆಗೆ ಆತ ನೀಡಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ರೂ.10.60 ಲಕ್ಷ ವರ್ಗಾವಣೆ ಮಾಡಿದ್ದರು. ಆದರೆ ಇದುವರೆಗೂ ಅಸಲು ಅಥವಾ ಲಾಭಾಂಶವನ್ನು ವರ್ಗಾಯಿಸಿರಲಿಲ್ಲ. ಆಗ ಉದ್ಯಮಿಗೆ ತಾನು ಸೈಬರ್‌  ವಂಚನೆಗೆ ಒಳಗಾಗಿರುವುದು ಅರಿವಾಗಿ ದೂರು ನೀಡಿದ್ದಾರೆ. ಮೂರೂ ಪ್ರರಕಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article