ಹೂಡಿಕೆ ಹೆಸರಿನಲ್ಲಿ 2 ಕೋಟಿ ರೂ. ವಂಚನೆ; ಸೈಬರ್ ಠಾಣೆಯಲ್ಲಿ ದೂರು ದಾಖಲು

Most read

ಬೆಂಗಳೂರು: ತಾವು ಹೇಳಿದಂತೆ ಹೂಡಿಕೆ ಮಾಡಿದರೆ ಅಪಾರ ಲಾಭ ಗಳಿಸಬಹುದು ಎಂದು ನಂಬಿಸಿ ಬೆಂಗಳೂರಿನ ನಿವಾಸಿಯೊಬ್ಬರಿಗೆ 1.92 ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣವೊಂದು ಕೇಂದ್ರ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದೆ.

2021ರಲ್ಲಿ ಅಪರಚಿತ ವ್ಯಕ್ತಿಯೊಬ್ಬ ತಾನಾಗಿಯೇ ದೂರುದಾರರಿಗೆ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದರು. ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಈ ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿದ ದೂರುದಾರರು ಆರೋಪಿ ಕಳುಹಿಸಿದ್ದ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ರೂ.1.50 ಕೋಟಿ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪುನಃ ಅದೇ ವ್ಯಕ್ತಿ 2024ರಲ್ಲಿ ದೂರುದಾರರಿಗೆ ಕರೆ ಮಾಡಿ, 2021ರಲ್ಲಿ ನೀವು ಹೂಡಿಕೆ ಮಾಡಿದ್ದ 1.50 ಕೋಟಿ ರೂ.ಗೆ 5.89 ಕೋಟಿ ರೂಪಾಯಿ ಲಾಭ ಬಂದಿದೆ. ಈ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲು ಐಟಿ ಸೇರಿದಂತೆ ವಿವಿಧ ಶುಲ್ಕಗಳನ್ನು ಪಾವತಿಸಲು ರೂ.42.37 ಲಕ್ಷ ಪಾವತಿಸಬೇಕು ಎಂದು ತಿಳಿಸಿದ್ದರು.

ದೂರುದಾರರು ರೂ. 5.89 ಕೋಟಿ ಸಿಗುತ್ತದೆ ಎಂಬ ಆಸೆಯಿಂದ ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 42.37 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಆದರೂ ಇವರ ಖಾತೆಗೆ ಒಂದೇ ಒಂದು ರೂ.ಜಮೆ ಆಗಿರಲಿಲ್ಲ. ಆರೋಪಿಗೆ ಕರೆ ಮಾಡಿದರೆ ಅವರು  ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಆಗ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ನಂತರ ಅವರು ಮೋಸ ಮಾಡಿರುವ ಅಪರಿಚಿತ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article