ಹೈದರಾಬಾದ್: ತೆಲಂಗಾಣದಲ್ಲಿ ಡಿಜಿಟಲ್ ದಿಗ್ಬಂಧನ ವಿಧಿಸುವ ಮೂಲಕ 65 ವರ್ಷದ ನಿವೃತ್ತ ಸರ್ಕಾರಿ ನೌಕರರೊಬ್ಬರಿಂದ ಸೈಬರ್ ವಂಚಕರು ರೂ.1.5 ಕೋಟಿಗೂ ಹೆಚ್ಚು ಹಣ ಸುಲಿಗೆ ಮಾಡಿದ್ದಾರೆ. ನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ ಫಲವಾಗಿ ರೂ. 70 ಲಕ್ಷ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2024ರ ಡಿಸೆಂಬರ್‌ನಲ್ಲಿ, ಮುಂಬೈನ ಸೈಬರ್ ಕ್ರೈಂ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಮಹಿಳೆಯೊಬ್ಬರನ್ನು ಸುಮಾರು 15 ದಿನಗಳವರೆಗೆ ಡಿಜಿಟಲ್ ಅರೆಸ್ಟ್‌ನಲ್ಲಿ ಇರಿಸಿದ್ದರು ಎಂದು ರಾಚಕೊಂಡ ಪೊಲೀಸರು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ 8ರಂದು ಮಹಿಳೆಗೆ ಕರೆ ಮಾಡಿದ್ದ ವಂಚಕರು, ನಿಮ್ಮ ಗುರುತಿನ ಚೀಟಿಗೆ ಲಿಂಕ್ ಆಗಿರುವ ಸಿಮ್ ಕಾರ್ಡ್ ಅನ್ನು ಸಾರ್ವಜನಿಕರಿಗೆ ಕಿರುಕುಳ ನೀಡಲು ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಲು ಬಳಸಲಾಗಿದೆ. ಅಲ್ಲದೆ, ನಿಮ್ಮ ಸಂಖ್ಯೆಯ ಮೇಲೆ ಹಲವು ಇತರ ಪ್ರಕರಣಗಳಿವೆ ಎಂದು ಆ ಮಹಿಳೆಗೆ ಬೆದರಿಕೆ ಹಾಕಿದ್ದರು. ಕಾನೂನು ಕ್ರಮವನ್ನು ತಪ್ಪಿಸಲು ರೂ.1.5 ಕೋಟಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಮಹಿಳೆಯನ್ನು ಒತ್ತಾಯಿಸಿದ್ದರು. ನಂತರ ತಾನು ಮೋಸ ಹೋಗಿರುವುದನ್ನು ಅರಿತು ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ತನಿಖೆಗೆ ಹಲವು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ರೂ. 70 ಲಕ್ಷ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಮಹಿಳೆಗೆ ಹಣವನ್ನು ಹಿಂದುರುಗಿಸಿದ್ದಾರೆ ಎಂದು ಅವರು ಹೇಳಿದ್ದಾರೆ