ಬೆಂಗಳೂರು: ಮಾರ್ಚ್ ನಿಂದ ಪ್ರತಿ ಕಪ್ ಕಾಫಿ ಬೆಲೆ 5 ರೂ. ಹೆಚ್ಚಾಗಲಿದೆ. ಕಾಫಿ ಇಳುವರಿ ಕಡಿಮೆಯಾಗುತ್ತಿರುವುದೇ ಕಾಫಿ ಬೆಲೆ ಹೆಚ್ಚಳಕ್ಕೆ ಕಾರಣ. ಹುರಿದ ಕಾಫಿ ಬೀಜದ ಬೆಲೆ ಫೆಬ್ರವರಿಯಲ್ಲಿ ಪ್ರತಿ ಕೆಜಿಗೆ 100 ರೂ ನಷ್ಟು ಹೆಚ್ಚಳವಾಗಿದ್ದು, ಮತ್ತೆ ಮಾರ್ಚ್ ತಿಂಗಳಲ್ಲೂ ಮತ್ತೆ 100 ರೂ. ಹೆಚ್ಚಳವಾಗಲಿದೆ. ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿ ಅಧಿಕಾರಿಗಳು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾಗುತ್ತಿರುವದೂ ಕಾಫಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. 800-850 ರೂಗಳಿಗೆ ಮಾರಾಟವಾಗುತ್ತಿದ್ದ ಪ್ರತಿ ಕೆಜಿ ಕಾಫಿ ಪುಡಿ ಬೆಲೆ ರೂ. 1,000-1,100 ಕ್ಕೆ ಏರಿಕೆಯಾಗಿದೆ. ಹೀಗಾಗಿ ಹೋಟೆಲ್ ಗಳಲ್ಲಿ ಕಾಫಿ ಬೆಲೆ ಏರಿಕೆ ಅನಿವಾರ್ಯ ಎಂದು ಕಾಫಿ ಬೆಳೆಗಾರ ಪೆರಿಕಲ್ ಎಂ.ಸುಂದರ್ ಹೇಳುತ್ತಾರೆ. ಜನವರಿ 2024ರಲ್ಲಿ ರೊಬಸ್ಟಾ ಕಾಫಿ ಬೆಲೆ ಪ್ರತಿ ಕೆಜಿಗೆ 200 ರೂ ಇದ್ದದ್ದು ರೂ.520 ಕ್ಕೆ ಹೆಚ್ಚಳವಾಗಿದೆ. ಜನವರಿ 2024 ರಿಂದ ಫೆಬ್ರವರಿ 2025ರ ಅವಧಿಯಲ್ಲಿ ಅರೆಬಿಕಾ ಕಾಫಿ ಬೆಲೆ 290 ರಿಂದ 590 ರೂಗಳಿಗೆ
ಏರಿದೆ.
ಕರ್ನಾಟಕದ ಕಾಫಿ ಬೋರ್ಡ್ ಸಿಇಒ ಡಾ.ಕೆ.ಜಿ. ಜಗದೀಶ್ ಅವರ ಪ್ರಕಾರ 2001 ರಿಂದ ಕಾಫಿ ಬೆಲೆ ನಿರಂತರವಾಗಿ ಏರುತ್ತಲೇ ಇದ್ದು, ಇದೀಗ ಶೇ. 80 ರಷ್ಟು ಹೆಚ್ಚಳವಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತವನ್ನು ಅವಲಂಬಿಸಿರುತ್ತದೆ.
ಕಾಫಿ ಬೆಲೆ ಹೆಚ್ಚಳ ಅನಿವಾರ್ಯ, ಹೋಟೆಲುಗಳ ಸಂಘ ಮಾಹಿತಿ:
ಕಾಫಿ ಪುಡಿ ಬೆಲೆ ತಿಂಗಳಿನಿಂದ ತಿಂಗಳಿಗೆ ಹೆಚ್ಚಳವಾಗುತ್ತಿರುವುದರಿಂದ ಮಾರ್ಚ್ ಮೊದಲ ವಾರದಲ್ಲಿ ಬೆಂಗಳೂರಿನ ಎಲ್ಲ ಹೋಟೆಲ್‌ಗಳಲ್ಲಿ ಕಾಫಿ ದರವನ್ನು ಶೇ. 10ರಿಂದ 15ರವರೆಗೆ ಏರಿಕೆ ಮಾಡಲಾಗುವುದು ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಗೌರವ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ ಫಿಲ್ಟರ್ ಕಾಫಿ ಗ್ರಾಹಕರ ಕೈಗೆಟಕುವ ದರದಲ್ಲಿ ಸಿಗುತ್ತದೆ. ಇತ್ತೀಚೆಗೆ ಕಾಫಿ ಪುಡಿಯ ದರ ಏರಿಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲಿನ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ಬೆಂಗಳೂರು ನಗರದಲ್ಲಿರುವ ಹೋಟೆಲ್‌ಗಳಲ್ಲಿ ಕಾಫಿಯ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.