ಮಂಗಳೂರು : ಯುವಕನೊಬ್ಬ ವಿನೂತನ ಶೈಲಿಯ ಜೀನ್ಸ್ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಾಗ ಮೂವರು ಪುಂಡರ ಗುಂಪು ಆತನನ್ನು ತಡೆದು ನಿಲ್ಲಿಸಿ ಆತನ ಎರಡು ಕೈಗಳನ್ನು ಹಿಂದಕ್ಕೆ ಕಟ್ಟಿ ಪ್ಯಾಂಟ್ ಗೆ ಗೋಣಿಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿ, ಇದೀಗ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ 21 ವರ್ಷದ ಶಾಹಿಲ್ ಆದುನಿಕ ಶೈಲಿಯ ಪ್ಯಾಂಟ್ ಧರಿಸಿ ನ.21 ರಂದು ಮಧ್ಯಾಹ್ನ ಬೆಳ್ತಂಗಡಿ ನಗರದಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ಆಗಮಿಸಿದ್ದಾರೆ. ಅದೇ ಸಂದರ್ಭದಲ್ಲಿದ್ದ ಮಾರುಕಟ್ಟೆಯಲ್ಲಿದ್ದ ಪಡ್ಡೆ ಯುವಕರ ತಂಡವೊಂದು ಆತನನ್ನು ಸಾರ್ವಜನಿಕವಾಗಿ ಎಲ್ಲರ ಎದುರಿನಲ್ಲೇ ಎರಡು ಕೈಗಳನ್ನು ಹಿಂದಕ್ಕೆ ಹಿಡಿದು ಬಲವಂತದಿಂದ ಹಿಡಿದಿಟ್ಟು ಆತನ ಪ್ಯಾಂಟನ್ನು ಗೋಣಿಚೀಲ ಹೊಲಿಯುವ ಸೂಜಿಯಿಂದ ಹೊಲಿದು ಮೊಬೈಲ್ ನಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್ , ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಸಲೀಂ ಎಂಬವರು ಈ ಕಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಯುವಕ ಶಾಹಿಲ್ ಮನೆಯಲ್ಲಿದ್ದ ವಿಷ ಪದಾರ್ಥವೊಂದನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆಯವರು ಕೂಡಲೇ ಆತನನ್ನು ತಕ್ಷಣ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.