ಮುಂಬೈ: ತಮ್ಮ ಪತಿ, ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ ದುಷ್ಕರ್ಮಿಯು ಆಕ್ರಮಣಕಾರಿಯಾಗಿ ವರ್ತಿಸಿದನಾದರೂ ಯಾವುದೇ ಆಭರಣಗಳನ್ನು ಮುಟ್ಟಲಿಲ್ಲ ಎಂದು ನಟಿ ಕರೀನಾ ಕಪೂರ್ ಪೊಲೀಸರಿಗೆ ಶನಿವಾರ ತಿಳಿಸಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ‘ಸದ್ಗುರು ಶರಣ್’ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಲ್ಲಿರುವ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ನುಗ್ಗಿದ್ದ ದುಷ್ಕರ್ಮಿಯು, ಸೈಫ್ ಅವರ ಮೇಲೆ ಗುರುವಾರ ಮುಂಜಾನೆ ಚಾಕುವಿನಿಂದ ದಾಳಿ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುಷ್ಕರ್ಮಿಯು ನಿವಾಸಕ್ಕೆ ನುಗ್ಗಿರುವುದನ್ನು ಮೊದಲು ಗಮನಿಸಿದ್ದು ಮನೆಗೆಲಸದಾಕೆ ಎಲಿಯಾಮಾ ಫಿಲಿಪ್ಸ್. ಅವರು ಕೂಡಲೇ ಚೀರುತ್ತಾ ಸೈಫ್ ಅವರನ್ನು ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಸೈಫ್ ಮತ್ತು ದುಷ್ಕರ್ಮಿ ನಡುವೆ ಘರ್ಷಣೆ ನಡೆದಿತ್ತು. ಆಗ ಆತ ಚಾಕುವಿನಿಂದ ಆರು ಬಾರಿ ಸೈಫ್‌ಗೆ ಇರಿದಿದ್ದ. ರಕ್ಷಣೆಗೆ ಧಾವಿಸಿದ ಎಲಿಯಾಮಾ ಮತ್ತು ಗೀತಾ ಎಂಬ ಮತ್ತೊಬ್ಬ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಬಂದಿದ್ದ ಕರೀನಾ ಸಹೋದರಿ ಕರೀಷ್ಮಾ ಕಪೂರ್, ಆಘಾತಗೊಂಡಿದ್ದ ಕರೀನಾ ಅವರನ್ನು ತಮ್ಮ ನಿವಾಸಕ್ಕೆ ಕರೆದೊಯ್ದಿದ್ದರು. ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಕರೀನಾ, ಹೊಡೆದಾಟದ ವೇಳೆ ದುಷ್ಕರ್ಮಿಯು ತುಂಬಾ ಆಕ್ರಮಣಕಾರಿಯಾಗಿ ವರ್ತಿಸಿದ. ಆದರೆ, ಬಹಿರಂಗವಾಗಿಯೇ ಇಟ್ಟಿದ್ದ ಆಭರಣಗಳನ್ನು ಮುಟ್ಟಿರಲಿಲ್ಲ ಎಂದು ನಟಿ ಕರೀನಾ ಕಪೂರ್ ಪೊಲೀಸರಿಗೆ ಶನಿವಾರ ತಿಳಿಸಿದ್ದಾರೆ. ಅವರಿಂದ ಮತ್ತಷ್ಟು ಮಾಹಿತಿಯನ್ನು ಪಡೆಯುವುದು ಬಾಕಿ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.