ಬೆಂಗಳೂರು: ಬೆಂಗಳೂರಿನ ಪ್ರಸಿದ್ದ ಉದ್ಯಾನವನ ಕಬ್ಬನ್ ಪಾರ್ಕ್ ನಲ್ಲಿ ಪ್ರತಿದಿನ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ವಾಯು ವಿಹಾರದ ಜತೆಗೆ ಸಭೆ, ಚರ್ಚೆ, ಸಂಗೀತ ಚಿತ್ರಕಲೆ ಶೂಟಿಂಗ್, ರೀಲ್ಸ್ ನಡೆಯುತ್ತಿಲೇ ಇರುತ್ತವೆ. ಒಮ್ಮೊಮ್ಮೆ ಇಂತಹ ಚಟುವಟಿಕೆಗಳು ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದೂ ಉಂಟು. ಈ ನಿಟ್ಟಿನಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಕಬ್ಬನ್ ಪಾರ್ಕ್ ನಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕಬ್ಬನ್ ಪಾರ್ಕ್ ನಲ್ಲಿ ವಾಕಥಾನ್, ಮ್ಯಾರಥಾನ್, ಸರ್ಕಾರದ ಇಲಾಖೆಗಳಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು, ನೊಂದಾಯಿತ ಸಂಸ್ಥೆಗಳಿಂದ ಆರೋಗ್ಯ ತಪಾಸಣೆ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಮುಂಜಾನೆ 5.30 ರಿಂದ 9 ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 6 ಗಂಟೆಯವರೆಗೆ ವಾಯುವಿಹಾರ ನಡೆಸಬಹುದಾಗಿದೆ.
ಬರಹಗಾರರು, ಕಲಾವಿದರು ಸಭೆ ನಡೆಸುವುದಾದರೆ 20 ಮಂದಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಬಿಎಸ್ ಎನ್ ಎಲ್ ಕಡೆಯ ಗಜಿಬೊದಿಂದ ಹೈಕೋರ್ಟ್ ಕಟ್ಟಡದವರೆಗೆ 15 ಎಕರೆ ಪ್ರದೇಶದಲ್ಲಿ ವೀಕ್ಷಕರು ವಾಣಿಜ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿದೆ. ವಾಚನ, ಪೇಂಟಿಂಗ್, ಯೋಗ, ಮೆಡಿಟೇಷನ್ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ. ಒಂದು ವೇಳೆ ಇಂತಹ ಚಟುವಟಿಕೆಗಳಿಗೆ 20 ಕ್ಕಿಂತ ಹೆಚ್ಚು ಮಂದಿ ಸೇರುವುದಾದರೆ ಕಬ್ಬನ್ ಪಾರ್ಕ್ ಉಪ ನಿರ್ದೇಶಕರ ಅನುಮತಿ ಪಡೆಯಬೇಕಾಗುತ್ತದೆ. ಫೋಟೊಗಳನ್ನು ತಗೆದುಕೊಳ್ಳಲು ಅವಕಾಶ ಇದೆ ಆದರೆ ಶೂಟಿಂಗ್ ಅಥವಾ ರೀಲ್ಸ್ ಮಾಡುವಂತಿಲ್ಲ.
ಇಲ್ಲಿಗೆ ಭೇಟಿ ನೀಡುವ ವೀಕ್ಷಕರು ಮತ್ತು ಪ್ರವಾಸಿಗರು ಫೋನ್ ಅಥವಾ ಕ್ಯಾಮೆರಾದಲ್ಲಿ ಫೋಟೊಗ್ರಫಿ ಮಾಡಬಹುದು. ಆದರೆ ಪ್ರೀ ವೆಡ್ಡಿಂಗ್ ಶೂಟಿಂಗ್, ಬೇಬಿ ಫೋಟೊ ಶೂಟಿಂಗ್, ಮಾಡೆಲ್ಲಿಂಗ್ ರೀಲ್ಸ್ ಅಥವಾ ಯಾವುದೇ ರೀತಿಯ ವಾಣಿಜ್ಯ ಉದ್ದೇಶದ ವಿಡಿಯೋಗ್ರಫಿ ಮಾಡುವಂತಿಲ್ಲ.
ಪ್ರಕೃತಿ, ಗಿಡ ಮರ, ವೈಲ್ಡ್ ಲೈಫ್ ಫೊಟೊಗ್ರಫಿ ಮಾಡಬೇಕಾದರೆ ತೋಟಗಾರಿಕಾ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಸೈಕ್ಲಿಂಗ್, ಸ್ಕೇಟಿಂಗ್ ಗೆ ಅವಕಾಶ ಇಲ್ಲ. ಪರಿಸರಕ್ಕೆ ಹಾನಿಯುಂಟು ಮಾಡುವ ಬೆಲೂನ್, ಗಾಳಿಪಟ, ಫ್ರಿಸ್ಬೀ ಗಳನ್ನು ಬಳಸಿ ಆಟವಾಡುವಂತಿಲ್ಲ. ಕಬ್ಬನ್ ಪಾರ್ಕ್ ಒಳಗೆ ಆಹಾರ ಸೇವನೆ ಮಾಡಲು ಅವಕಾಶ ಇಲ್ಲ. ಕಂಡ ಕಂಡಲ್ಲಿ ಉಗಿಯುವಂತಿಲ್ಲ.
ಒಂದು ವೇಳೆ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿದರೆ ರೂ. 500 ದಂಡ ವಿಧಿಸುವುದಾಗಿ ಇಲಾಖೆ ತಿಳಿಸಿದೆ. ತಪ್ಪನ್ನು ಪುನರಾವರ್ತಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ಈ ನಿಮಯಮಗಳನ್ನು ಒಂದೆರಡು ವಾರಗಳಲ್ಲಿ ಇದೇ ಮಾರ್ಗಸೂಚಿಗಳನ್ನು ಲಾಲ್ ಬಾಗ್ ಗೂ ವಿಸ್ತರಿಸುವುದಾಗಿ ತೋಟಗಾರಿಕಾ ಇಲಾಖೆ ಜಂಟಿ ಆಯುಕ್ತ ಎಂ. ಜಗದೀಶ್ ಹೇಳುತ್ತಾರೆ.