ಒಂದು ಸಿನಿಮಾ ಮಾಡಬೇಕು ಅಂದ್ರು ಕಡಿಮೆ ಅಂದ್ರು ಕೋಟಿ ಮೇಲೆಯೇ ರೀಚ್ ಆಗುತ್ತೆ. ಇನ್ನು ನಟ-ನಟಿಯರ ಸಂಭಾವನೆ ಬಗ್ಗೆ ಕೇಳಬೇಕಾ..? ಕೋಟ್ಯಾಂತರ ರೂಪಾಯಿ ಅಲ್ಲಿಯೇ ಹೋಗಿಬಿಡುತ್ತದೆ. ಸಿನಿಮಾ ಮಾಡಿದ ಮೇಲೆ ಒಂದು ಲೆಕ್ಕ ಆದ್ರೆ ರಿಲೀಸ್ ಮಾಡುವುದಕ್ಕೆ ಇನ್ನೊಂದು ಲೆಕ್ಕ. ಬಜೆಟ್ ಏರುತ್ತಲೇ ಹೋಗುತ್ತದೆ. ನಿರ್ಮಾಪಕರು ಕಷ್ಟವೋ ಸುಖವೋ, ಸಾಲ-ಸೋಲ ಮಾಡಿ ಸಿನಿಮಾ ಮಾಡುತ್ತಾರೆ. ಆದರೆ ಸಿನಿಮಾ ರಿಲೀಸ್ ಆದ್ಮೇಲೆ ಹಾಕಿದ ಬಂಡವಾಳ ವಾಪಸ್ ಬರುವುದು ಅಷ್ಟರಲ್ಲಿಯೇ ಇದೆ. ಹೀಗಾಗಿ ಬಾಲಿವುಡ್ ನಿರ್ಮಾಪಕರೆಲ್ಲ ಸೇರಿಕೊಂಡು ಸ್ಟಾರ್ ಗಳ ಖರ್ಚು- ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಸಿನಿಮಾ ಹೀರೋ-ಹೀರೋಯಿನ್ ಗೆ ಸಂಭಾವನೆ ಕೊಡುವುದು ಸರಿ. ಆದರೆ ಅವರ ಜೊತೆಗೆ ಅರ್ಧ ಡಜನ್ ಜನ ಬರ್ತಾರೆ. ಅಸಿಸ್ಟೆಂಟ್, ಮೇಕಪ್ ಆರ್ಟಿಸ್ಟ್, ಮ್ಯಾನೇಜರ್ ಅಂತೆಲ್ಲಾ ಬಂದವರಿಗೆಲ್ಲ ರಾಜಾತಿಥ್ಯವನ್ನೇ ಮಾಡಬೇಕಾಗಿರುವುದರಿಂದ ಖರ್ಚುಗಳು ಗಗನಕ್ಕೇರಿರುತ್ತದೆ. ಹೀಗಾಗಿ ಅದನ್ನೆಲ್ಲಾ ಸ್ಟಾಪ್ ಮಾಡಲು ನಿರ್ಧರಿಸಿರುವ ನಿರ್ಮಾಪಕರು ಇಂದು ಸಭೆ ನಡೆಸಿದ್ದಾರೆ.
ಹಿಂದಿ ನಿರ್ಮಾಪಕರ ಗಿಲ್ಡ್, ತೆಲುಗು ಹಾಗೂ ತಮಿಳು ನಿರ್ಮಾಪಕರ ಗಿಲ್ಡ್ ಜೊತೆಗೆ ಬಾಲಿವುಡ್ನ ಕೆಲವು ಪ್ರಮುಖ ಟ್ಯಾಲೆಂಟ್ ಏಜೆನ್ಸಿಗಳು ಸೇರಿ ಕೆಲವು ದಿನಗಳ ಹಿಂದಷ್ಟೆ ಸಭೆ ನಡೆಸಿವೆ. ಅನವಶ್ಯಕ ಖರ್ಚು-ವೆಚ್ಚಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಯನ್ನ ಮಾಡಿವೆ. ಸಿನಿಮಾಗಾಗಿ ಅಗ್ರಿಮೆಂಟ್ ಮಾಡಿಕೊಳ್ಳುವಾಗಲೇ ಅನಾವಶ್ಯಕ-ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲು ನಿರ್ಧಾರ ಮಾಡಿ ಮುಂದುವರೆಯಲಿದ್ದಾರೆ. ಇನ್ನೊಂದು ಸುತ್ತಿನ ಮಾತುಕತೆಯ ಬಳಿಕ ಈ ಬಗ್ಗೆ ತೀರ್ಮಾನವಾಗಲಿದೆ.