ಮಂಗಳೂರು: ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಅವರನ್ನು ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ಧ ಬಳಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಷ್ಟೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಮಾತನಾಡಿದ ತಿಮರೋಡಿ, ನನ್ನ ಜೀವಕ್ಕೆ ಅಪಾಯ ಸಂಭವಿಸಿದರೆ ಸರ್ಕಾರ ಮತ್ತು ಬಿಜೆಪಿ ನೇರ ಹೊಣೆ ಎಂದು ಗುಡುಗಿದ್ದಾರೆ.
ಇಂದು ಉಜಿರೆಯ ತಿಮರೋಡಿಯಲ್ಲಿರುವ ನಿವಾಸದಿಂದ ಉಡುಪಿ ಜಿಲ್ಲಾ ಪೊಲೀಸರು ತಿಮರೋಡಿ ಅವರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ತಿಮರೋಡಿಯಲ್ಲಿ ಮಹೇಶ್ ಶೆಟ್ಟಿ ಅವರ ಸಾವಿರಾರು ಬೆಂಬಲಿಗರು ಹಾಜರಿದ್ದರು. ತಿಮರೋಡಿ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಖಾಸಗಿ ಕಾರಿನಲ್ಲೇ ತಿಮರೋಡಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಹೊರಟರು. ಆಗ ಸುದ್ದಿಗಾರರೊಂದಿಗೆ ಮತನಾಡುತ್ತಾ ಧರ್ಮಸ್ಥಳ ಹತ್ಯೆಗಳನ್ನು ಕುರಿತು ನಡೆಸುತ್ತಿರುವ ಎಸ್ಐಟಿ ತನಿಖೆಯನ್ನು ಮುಚ್ಚಿಸಲು ನನ್ನನ್ನು ಬಂಧಿಸಲಾಗುತ್ತಿದೆ. ಇದು ಬಿಜೆಪಿ ಮುಖಂಡರ ಪಾಪದ ಕೂಸು. ಅವರು ಸರ್ವ ನಾಶ ಆಗುವುದು ನಿಶ್ಚಿತ ಎಂದು ಆಪಾದಿಸಿದರು. ನಾನು ಎಲ್ಲಿಯೂ ಓಡಿಹೋಗುವುದಿಲ್ಲ. ಪೊಲೀಸರಿಗೆ ಸಹಕರಿಸುತ್ತೇನೆ. ಒಟ್ಟಾರೆ ಸೌಜನ್ಯಾಗೆ ನ್ಯಾಯ ಸಿಗಬೇಕು. ನ್ಯಾಯ ಸಿಗುತ್ತದೆ ಎಂಭ ಭರವಸೆ ನನಗಿದೆ ಎಂದು ಹೇಳಿದರು.
ಪೊಲೀಸರ ಬಂಧನದಲ್ಲಿ ನನ್ನ ಜೀವಕ್ಕೆ ಅಪಾಯ ಸಂಭವಿಸಿದರೆ ಸರ್ಕಾರ ಮತ್ತು ಬಿಜೆಪಿ ಹೊಣೆ ಹೊರಬೇಕಾಗುತ್ತದೆ ಎಂದೂ ಎಚ್ಚರಿಸಿದರು. ನಂತರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟೆಣ್ಣನವರ ಖಾಸಗಿ ಕಾರಿನಲ್ಲಿ ಪೊಲೀಸ್ ಠಾಣೆಗೆ ಹೊರಟರು.
ಬಿಜೆಪಿಯ ಉಡುಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೀವ ಕುಲಾಲ್ ಅವರು ತಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್.ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ತಿಮರೋಡಿ ವಿರುದ್ಧ ದೂರು ಸಲ್ಲಿಸಿದ್ದರು.
ಈ ದೂರನ್ನು ಆಧರಿಸಿ ಬ್ರಹ್ಮಾವರ ಠಾಣೆಯಲ್ಲಿ ಐಪಿಸಿ ಸೆ. 196(1), 352 ಹಾಗೂ 353(2)ರ ಅಡಿ ಆ. 16ರಂದು ಎಫ್ಐಆರ್ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ತಿಮರೋಡಿ ಅವರಿಗೆ ನೋಟಿಸ್ ನೀಡಿದ್ದರೂ ಸ್ಪಂದಿಸಿರಲಿಲ್ಲ. ಆದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.