ನವದೆಹಲಿ: ಕ್ರಿಮಿನಲ್ ಅಪರಾಧಗಳಲ್ಲಿ ಶಿಕ್ಷೆಗೆ ಗುರಿಯಾದವರನ್ನು ಶಾಸನಸಭೆಗಳಿಂದ ಶಾಶ್ವತವಾಗಿ ದೂರ ಇಡಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ವಿರೋಧಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ತಿಳಿಸಿದೆ.
ಈ ರೀತಿಯ ನಿರ್ಬಂಧ ವಿಧಿಸುವ ಅಧಿಕಾರ ಕೇವಲ ಸಂಸತ್ತಿಗೆ ಮಾತ್ರ ಇದೆ ಎಂದು ಹೇಳಿದೆ. ಈ ಸಂಬಂಧವಾಗಿ ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಕ್ರಿಮಿನಲ್ ಅಪರಾಧ ಎಸಗಿದವರು ಜೀವನಪರ್ಯಂತ ಚುನಾವಣೆಗೆ ಸ್ಪರ್ಧಿಸದಂತೆ ಮಾಡಬೇಕು, ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಕೋರಿದ್ದರು.
ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8(1)ರ ಪ್ರಕಾರ, ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೆ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಇದೆ ಎಂದು ಕೇಂದ್ರ ಸರ್ಕಾರ ವಿವರಿಸಿದೆ.
ಈ ಸೆಕ್ಷನ್‌ನಲ್ಲಿ ಹೇಳಿರುವ ಅನರ್ಹತೆಯ ಅವಧಿಗೆ ಮಿತಿ ಇದೆ. ಇದು ಸಂಸತ್ತು ರೂಪಿಸಿದ ನೀತಿ. ಈ ಮಿತಿಯ ಬದಲಿಗೆ, ಜೀವನಪರ್ಯಂತ ನಿರ್ಬಂಧವನ್ನು ಹೇರುವುದು ಸರಿಯಾದ ಕ್ರಮ ಆಗುವುದಿಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದೆ. ಆರು ವರ್ಷಗಳ ನಿರ್ಬಂಧ ಎನ್ನುವುದು ಸಾಂವಿಧಾನಿಕವಾಗಿ ಸರಿಯಾಗಿಯೇ ಇದೆ, ಅದು ಸಂಸತ್ತಿನ ಅಧಿಕಾರಗಳ ಮಿತಿಯಲ್ಲಿಯೇ ಇದೆ. ಯಾವುದೇ ಬಗೆಯ ದಂಡವನ್ನು ವಿಧಿಸುವ ಸಂದರ್ಭದಲ್ಲಿ ಸಂಸತ್ತು ಆ ದಂಡವು ತಪ್ಪಿನ ಪ್ರಮಾಣಕ್ಕೆ ಅನುಗುಣವಾಗಿ ಇದೆಯೇ, ಶಿಕ್ಷೆಯು ತರ್ಕಬದ್ಧವಾಗಿ ಇದೆಯೇ ಎಂಬುದನ್ನು ಪರಿಶೀಲಿಸುತ್ತದೆ ಎಂದು ಕೇಂದ್ರ ಸರ್ಕಾರ ವಿವರಿಸಿದೆ.