ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌; ಮೂವರ ಬಂಧನ, 85 ಲಕ್ಷ ನಗದು ಜಪ್ತಿ

Most read

ಬೆಂಗಳೂರು: ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಧ್ರುವ್‌ ಮಿತ್ತಲ್​​, ರೋಹಿತ್​​​​​ ರಂಜನ್​​​ ಹಾಗೂ ವಿಜಯ್​​​​ ಕುಮಾರ್​​​​ ಬಂಧಿತ ಆರೋಪಿಗಳು. ಇವರಿಂದ ರೂ. 85 ಲಕ್ಷ ನಗದು ಹಾಗೂ ಬೆಟ್ಟಿಂಗ್​ ಟೋಕನ್‌ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್‌ 10 ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ ಸಿ ಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಧ್ಯೆ ಪಂದ್ಯ ನಡೆಯುವಾಗಲೇ ಈ ಮೂವರು ಆರೋಪಿಗಳು ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ನಗರದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ರೋಹಿತ್‌ ರಂಜನ್‌ ಏಪ್ರಿಲ್‌ 10ರಂದು ನಡೆದ ಕ್ರಿಕೆಟ್‌ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿಯಲ್ಲೇ ಕುಳಿತು ಮೊಬೈಲ್‌ ಮೂಲಕವೇ ಪಂಟರ್‌ಗಳಿಗೆ ಪ್ರತಿ ಬಾಲ್‌ ನ ಮಾಹಿತಿ ನೀಡುತ್ತಿದ್ದ. ಆ ಮಾಹಿತಿ ಆಧರಿಸಿ ಪಂಟರ್‌ ಗಳು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.

ಮೈದಾನದಲ್ಲಿ ಕುಳಿತು ವೀಕ್ಷಿಸುವುದಕ್ಕೂ ಅದೇ ಪಂದ್ಯದ ಟಿ.ವಿ ನೇರ ಪ್ರಸಾರದಲ್ಲಿ ನೋಡುವುದಕ್ಕೂ ಕೆಲವು ಸೆಕೆಂಡ್ ಗಳ ಅಂತರವಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಪ್ರತಿ ಬಾಲ್‌ ನ ಮೇಲೆ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಓವರ್‌, ಫೋರ್, ಸಿಕ್ಸ್‌, ನೋ ಬಾಲ್‌, ವೈಡ್‌ ಎಸೆತದ ಮೇಲೂ ಬೆಟ್ಟಿಂಗ್‌ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಮತ್ತೊಬ್ಬ ಆರೋಪಿ ಧ್ರುವ ಮಿತ್ತಲ್​ ಆನ್‌ಲೈನ್​ ಬೆಟ್ಟಿಂಗ್ ನಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಆತನಿಂದ ಎರಡು ಮೊಬೈಲ್​, ಗೇಮಿಂಗ್​ ಆ್ಯಪ್‌ ನಲ್ಲಿದ್ದ ಸುಮಾರು ರೂ.63 ಲಕ್ಷ ಮೌಲ್ಯದ ಟೋಕನ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಕ್ಕೂರಿನ ತನ್ನ ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್ ನಡೆಸುತ್ತಿದ್ದ ವಿಜಯ್‌ ಕುಮಾರ್‌ ಎಂಬಾತನನ್ನೂ ಬಂಧಿಸಲಾಗಿದೆ. ಆತನಿಂದ ರೂ. 10 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

More articles

Latest article