ಕ್ರಿಕೆಟ್‌ ಬೆಟ್ಟಿಂಗ್‌ ಗಾಗಿ ಕಳ್ಳತನ ಮಾಡುತ್ತಿದ್ದ ಸಾಫ್ಟ್‌ ವೇರ್ ಎಂಜಿನಿಯರ್ ಬಂಧನ

Most read

ಬೆಂಗಳೂರು: ಕ್ರಿಕೆಟ್‌ ಬೆಟ್ಟಿಂಗ್‌ ವ್ಯಸನಕ್ಕೆ ಬಲಿಯಾಗಿ ಲಕ್ಷಾಂತರ ರೂ. ಸಾಲ ಮಾಡಿಕೊಂಡು ಸಾಲ ತೀರಿಸಲು ಕಳ್ಳತನಕ್ಕಿಳಿದಿದ್ದ ಸಾಫ್ಟ್‌ ವೇರ್ ಎಂಜಿನಿಯರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹೊಂಗಸಂದ್ರ ನಿವಾಸಿ ಕೆ.ಎನ್. ಮೂರ್ತಿ (27) ಬಂಧಿತ ಆರೋಪಿ. ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ರೂ.17 ಲಕ್ಷ ಮೌಲ್ಯದ 245 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಮೂಲದ ಆರೋಪಿ, ಬಿಸಿಎ ಪದವೀಧರನಾಗಿದ್ದ ಈತ ಬೇಗೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದ. ಆನ್‌ ಲೈನ್ ಬೆಟ್ಟಿಂಗ್‌ ಗೀಳಿಗಿಳಿದಿದ್ದ ಈತ ಲಕ್ಷಾಂತರ ರೂ. ಕಳೆದುಕೊಂಡಿದ್ದ. ಸಾಲ ತೀರಿಸಲು ನಗರದ ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ತಂದೆ ಅಣ್ಣಪ್ಪ ಶಿವಮೊಗ್ಗ ನಿವಾಸಿ. ಮಗ ಮಾಡಿದ್ದ ರೂ.25 ಲಕ್ಷ ಸಾಲವನ್ನು ಊರಿನಲ್ಲಿದ್ದ ಜಮೀನು ಮಾರಾಟ ಮಾಡಿ ತೀರಿಸಿದ್ದರು. ಉಳಿದ ಸಾಲ ತೀರಿಸಲು ನಗರಕ್ಕೆ ಬಂದು ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೂ ಮಗ ಆನ್‌ಲೈನ್ ಬೆಟ್ಟಿಂಗ್ ಬಿಟ್ಟಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ಬಿನ್ನಿಮಿಲ್ ಅಂಗಾಳಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. 2022ರಿಂದಲೂ ರಾಜಗೋಪಾಲನಗರ, ಸುದ್ದಗುಂಟೆಪಾಳ್ಯ, ಆವಲಹಳ್ಳಿ ಹಾಗೂ ಕೋಣನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಕದ್ದ ಚಿನ್ನಾಭರಣವನ್ನು ಮಡಿವಾಳ, ಪರಪ್ಪನ ಅಗ್ರಹಾರ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ಚಿನ್ನಾಭರಣ ಅಂಗಡಿಗಳಲ್ಲಿ ಅಡವಿಟ್ಟು ಆ ಹಣದಲ್ಲಿ ಮತ್ತೆ ಬೆಟ್ಟಿಂಗ್ ಆಡುತ್ತಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.

More articles

Latest article