ಪತ್ನಿ ಸಮಾಧಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಸಮಾಧಿ; ಸಾವಿರಾರು ಮಂದಿ ಸಮ್ಮುಖದಲ್ಲಿ ನಡೆದ ಅಂತ್ಯಕ್ರಿಯೆ

Most read

ದಾವಣಗೆರೆ: ನಿನ್ನೆ ನಿಧನರಾದ ಹಿರಿಯ ಕಾಂಗ್ರೆಸ್‌ ಮುಖಂಡ, ಶಾಸಕ, ಉದ್ಯಮಿ ಶಾಮನೂರು ಶಿವಶಂಕರಪ್ಪ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ ನೆರವೇರಿತು. ದಾವಣಗೆರೆಯಲ್ಲಿರುವ ಶಾಮನೂರು ಒಡೆತನದ ಕಲ್ಲೇಶ್ವರ ಮಿಲ್ ಆವರಣದಲ್ಲಿ ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಸಂಸ್ಕಾರ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಸಚಿವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ವಿವಿಧ ಪಕ್ಷಗಳ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದು, ಅಂತಿಮ ನಮನ ಸಲ್ಲಿಸಿದರು.

ವೀರಶೈವ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿತು. ಮಣ್ಣು ಬಳಸದೆ ಸಂಪೂರ್ಣವಾಗಿ  ವಿಭೂತಿ, ರುದ್ರಾಕ್ಷಿ, ಬಿಲ್ವಪತ್ರೆ ಬಳಸಲಾಗಿತ್ತು. ಸಿದ್ಧಗಂಗಾ ಮಠದಿಂದ 100 ವಿಭೂತಿಗಟ್ಟಿಗಳನ್ನೂ ಕಳಿಸಿಕೊಡಲಾಗಿತ್ತು.

ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಲ್ಲೇಶ್ವರ ಮಿಲ್ ಆವರಣಕ್ಕೆ ತರಲಾಯಿತು. ನಗರದ ಎಂಸಿಸಿ ಬಡಾವಣೆಯ ಅವರ ನಿವಾಸದಿಂದ ಮಧ್ಯಾಹ್ನ 12.20ಕ್ಕೆ ಹೊರಟ ಪಾರ್ಥಿವ ಶರೀರದ ಅಂತಿಮ ಯಾತ್ರೆ 1.30ಕ್ಕೆ ಹೈಸ್ಕೂಲ್ ಮೈದಾನ ತಲುಪಿತು. ಮಧ್ಯಾಹ್ನ 2.45ಕ್ಕೆ ಆರಂಭವಾದ ಅಂತಿಮ ಯಾತ್ರೆ ರೇಣುಕಾ ಮಂದಿರ ಸರ್ಕಲ್, ಅರುಣ ಸರ್ಕಲ್, ಹೊಂಡದ ಸರ್ಕಲ್, ದುರ್ಗಾಂಬಿಕಾ ದೇವಾಸ್ಥಾನ, ಹಗೆದಿಬ್ಬಸರ್ಕಲ್, ಕಾಳಿಕಾಂಬ ದೇವಸ್ಥಾನ ರಸ್ತೆ, ಗ್ಯಾಸ್ ಕಟ್ಟೆ ಸರ್ಕಲ್, ಬಕ್ಕೇಶ್ವರ ದೇವಸ್ಥಾನದ ಮುಂಭಾಗ, ಹಾಸಭಾವಿ ಸರ್ಕಲ್, ಗಣೇಶ ದೇವಸ್ಥಾನ, ಅರಳಿ ಮರ ಸರ್ಕಲ್, ವೆಂಕಟೇಶ್ವರ ಸರ್ಕಲ್ ಮೂಲಕ ಸಂಜೆ 4.30ಕ್ಕೆ ಕಲ್ಲೇಶ್ವರ ಮಿಲ್ ಆವರಣಕ್ಕೆ ತರಲಾಯಿತು. ಪುತ್ರರಾದ ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಅಂತಿಮ ವಿಧಿವಿಧಾನ ಪೂರೈಸಿದರು. ಬಿದಿರು ಪಲ್ಲಕ್ಕಿಯಲ್ಲಿ ಪಾರ್ಥೀವ ಶರೀರ ಅಂತ್ಯಕ್ರಿಯೆಯ ಸ್ಥಳ ತಲುಪುತ್ತಿದ್ದಂತೆ ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ಜರುಗಿದವು.

ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ, ಸರ್ಕಾರದಿಂದ ಗೌರವ ಸಲ್ಲಿಸಲಾಯಿತು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

More articles

Latest article