ಕ್ರಿಕೆಟ್ ಆಟಗಾರ ರಿಂಕು ಸಿಂಗ್‌ ಜತೆ ಸಂಸದೆ ಪ್ರಿಯಾ ಸರೋಜ್ ವಿವಾಹ ಶೀಘ್ರ

Most read

ಅಲಹಾಬಾದ್: ಭಾರತ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್‌ ಅವರು ಸಮಾಜವಾದಿ ಪಕ್ಷದ ಯುವ ಸಂಸದೆ ಪ್ರಿಯಾ ಸರೋಜ್ ಅವರನ್ನು ವರಿಸಲಿದ್ದಾರೆ ಎಂದು ಎರಡೂ ಕುಟುಂಬದ ಮೂಲಗಳು ಖಚಿತಪಡಿಸಿವೆ. ಪ್ರಿಯಾ ಸರೋಜ್ ಅವರ ತಂದೆ ಸಮಾಜವಾದಿ ಪಕ್ಷದ ಶಾಸಕ ತೂಫಾನಿ ಸರೋಜ್ ಅವರು ಈ ವಿಷಯವನ್ನು ತಿಳಿಸಿದ್ದಾರೆ. 

ಎರಡೂ ಕುಟುಂಬಗಳು ಈ ಸಂಬಂಧ ಕುರಿತು ಮಾತುಕತೆ ಪೂರ್ಣಗೊಳಿಸಿವೆ. ನಿಶ್ಚಿತಾರ್ಥ ಮತ್ತು ಮದುವೆ ಕಾರ್ಯಕ್ರಮದ ದಿನಾಂಕವನ್ನು ಮಾತ್ರ ನಿಗದಿ ಪಡಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ರಿಂಕು ಹಾಗೂ ಪ್ರಿಯಾ ಪರಸ್ಪರ ಪರಿಚಿತರಾಗಿ ಪ್ರೀತಿಸುತ್ತಿದ್ದರು. ಈ ಸಂಬಂಧಕ್ಕೆ ಎರಡೂ ಕುಟುಂಬಗಳ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ.

ಪ್ರಿಯಾ ಅವರ ಸ್ನೇಹಿತೆಯ ತಂದೆಯೂ ಕ್ರಿಕೆಟ್‌ ಆಟಗಾರರಾಗಿದ್ದಾರೆ. ಅವರ ಮೂಲಕ ಪ್ರಿಯಾಗೆ ರಿಂಕು ಅವರ ಪರಿಚಯವಾಗಿದೆ. ಸಂಸತ್ ಅಧಿವೇಶನದ ನಂತರ ವಿವಾಹ ನೆರವೇರಲಿದೆ.  ನಿಶ್ಚಿತಾರ್ಥವನ್ನು ಲಖನೌನದಲ್ಲಿ ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿವೆ ಎಂದು ಅವರು ತಿಳಿಸಿದ್ದಾರೆ. ಜ. 22ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟಿ20 ಸರಣಿಯಲ್ಲಿ ರಿಂಕು ಸಿಂಗ್ ಆಡಲಿದ್ದಾರೆ. ಇದಾದ ನಂತರ ಐಪಿಎಲ್‌ ಸರಣಿಯಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಹೀಗಾಗಿ ಈ ಮದುವೆ ಕಾರ್ಯಕ್ರಮಕ್ಕೆ ತೊಡಕಾಗದಂತೆ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮೂರು ಬಾರಿ ಸಂಸದರೂ ಆಗಿದ್ದ ತೂಫಾನಿ ಸಿಂಗ್‌ ತಿಳಿಸಿದ್ದಾರೆ.

ಪ್ರಿಯಾ ಸರೋಜ್ ಅವರು ಜೌನ್ಪುರ ಜಿಲ್ಲೆಯ ಮಚ್ಲಿಶಹರ್‌ ಕ್ಷೇತ್ರದಿಂದ 25ನೇ ವಯಸ್ಸಿಗೆ ಸ್ಪರ್ಧಿಸಿ ಸಮಾಜವಾದಿ ಪಕ್ಷದಿಂದ ಸಂಸದೆಯಾಗಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಹಾಗೂ ನೊಯಿಡಾದ ಅಮಿಟಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಪ್ರಿಯಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಕೆಲ ಸಮಯ ವಕೀಲರಾಗಿದ್ದರು. 2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಂದೆಯ ಪರ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕ ಕ್ಷೇತ್ರ ಪ್ರವೇಶಿಸಿದ್ದರು.

More articles

Latest article