ಬೆಂಗಳೂರು: ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಹಸುಗಳನ್ನು ಕದ್ದು ಮಾರಾಟ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಮೂಲದ ಸೋಮಶೇಖರ್ ಬಂಧಿತ ಆರೋಪಿ. ಈತ ಕಳವು ಮಾಡಿದ್ದ ಹಸುಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೃತಹಳ್ಳಿಯಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಸೋಮಶೇಖರ್ ಕೆಲಸ ಮಾಡುತ್ತಿದ್ದ. ಈತ ಪ್ರತಿನಿತ್ಯ ಮಂಡ್ಯದಿಂದ ಬೆಂಗಳೂರಿಗೆ ಕೆಲಸಕ್ಕೆ ಬರುತ್ತಿದ್ದ. ಅಮೃತಹಳ್ಳಿಯ ಸರ್ಕಾರಿ ಶಾಲಾ ಸಮೀಪದ ಖಾಲಿ ಪ್ರದೇಶದಲ್ಲಿ ನಾಲ್ಕು ಹಸುಗಳನ್ನು ಕಟ್ಟಿ ಹಾಕುತ್ತಿದ್ದನ್ನು ಸೋಮಶೇಖರ್ ಗಮನಿಸಿಕೊಂಡಿದ್ದ. ಯಾರೂ ಗಮನಿಸದ ಸಮಯ ನೋಡಿಕೊಂಡು ಹಸುಗಳನ್ನು ಕದ್ದು ಮಾರಾಟ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಹಸುಗಳ ಮಾಲೀಕರು ಹಸುಗಳು ತಪ್ಪಿಸಿಕೊಂಡು ಹೋಗಿರಬಹದು ಎಂದು ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಹಸುಗಳನ್ನು ಕಟ್ಟಿದ್ದ ರಸ್ತೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಆರೋಪಿಯ ಸುಳಿವು ಲಭ್ಯವಾಗಿತ್ತು. ನಂತರ, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹಣ ಗಳಿಸುವ ಉದ್ದೇಶದಿಂದ ಹಸುಗಳನ್ನು ಕದ್ದು ಮಾರಾಟ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.