ನಮ್ಮ ಕಡೆಯೆಲ್ಲ ಯಾರಾದರೂ ನಮ್ಮೊಂದಿಗೆ ಅಗೌರವದಿಂದ ವರ್ತಿಸಿದಾಗ ಅದು ಹಿರಿಯರಿಗೆ ದಕ್ಕೆ ತರುವ ನಡವಳಿಕೆ ಎಂದೆನಿಸಿದಾಗಲೆಲ್ಲಾ ‘ಮೆಟ್ಟಿಲೇ ಹೊಡಿತೀನಿ’ ಅನ್ನೋದುಂಟು. ನಾನು ಬೆಳೆದ ಪ್ರದೇಶವಾರುಗಳಲ್ಲಿ ಈ ತರದ ಮಾತುಗಳು ಜಗಳಕ್ಕೂ ಮುಂಚೆ ಅಂದ್ರೆ ಅವನ ಹುಟ್ಟು, ಅವನ ತಂದೆ-ತಾಯಿ ಚಾರಿತ್ರ್ಯವನ್ನು ಬಹಿರಂಗವಾಗಿ ಬಯಲಿಗೆಳೆಯುವ ಸಾಹಸದ ಒಂದು ಹೆಜ್ಜೆ ಹಿಂದಕ್ಕೆ ಈ ತರದ ತುಸು ಮೃದುವಲ್ಲದ ತೀರಾ ಕಟುವಲ್ಲದ ನುಡಿಗಳು ಬರುವುದು ಸಹಜ.
ನಿಜಕ್ಕೂ ಇದು ಬೈಯೋದಕ್ಕಿಂತ ದನಗಳ ಆರೈಕೆಗೆ ಬಳಸುವ ಮಾತು ಅಂದ್ರೆ ನೀವು ನಂಬುತ್ತೀರಾ? ನಿಮಗೆ ಗೊತ್ತು ನಾವು ಲಿಂಗಾಯತರು ಸಾಮಾನ್ಯವಾಗಿ ಕೃಷಿ ಮಾಡುತ್ತೇವೆ. ಈಗಿನ ಹಾಗೆ ಮೊದಲೆಲ್ಲಾ ಯಂತ್ರಗಳ ಬಳಕೆ ಇಷ್ಟು ವ್ಯಾಪಕವಾಗಿರಲಿಲ್ಲ. ಹಾಗಾಗಿ ಕೃಷಿಕರ ಮನೆಯಲ್ಲಿ ಎತ್ತುಗಳು ಇರುತ್ತಿದ್ದವು ಜೊತೆಗೆ ಇನ್ನು ಕೆಲವು ಜಾನುವಾರುಗಳು ಇರುತ್ತಿದ್ದವು. ಅವುಗಳನ್ನೂ ನಮ್ಮಂತೆ ರೋಗಬಾಧೆಗಳು ಕಾಡುತ್ತಿರುತ್ತವೆ. ಹೆಚ್ಚಾಗಿ ಜುಲೈ-ಆಗಸ್ಟ್ ತಿಂಗಳುಗಳಲ್ಲಿ (ಮಳೆ ಜಾಸ್ತಿ ಬರುವ ಸಂದರ್ಭದಲ್ಲಿ ಹಸಿರು ಮೇವು ಸದಾ ಬಾಯಿ ಆಡಿಸುವುದರಿಂದ) ಜಾನುವಾರುಗಳು ಅಸ್ವಸ್ಥವಾಗುವುದಕ್ಕೆ ಬಾಯಿ ಬರೋದು/ಬಾಯಿ ಕೆಟ್ಟು ಹೋಗೋದು ಅಂತಾರೆ. ಅಂದ್ರೆ ಅವುಗಳ ನಾಲಿಗೆಯ ಮೇಲೆ ಮುಳ್ಳುಗಳಂತೆ ಏನೋ ಬಂದಿರುತ್ತವೆ. ಇದು ಒಣಮೇವಿನ ಕೊರತೆಯಿಂದಲೋ ಹವಾಮಾನ ಬದಲಾವಣೆಯಿಂದಲೋ ಗೊತ್ತಿಲ್ಲ. ಈ ತರ ಆದಾಗ ಸಾಕಿದ ಮಾಲೀಕರು ತಾವೇ ಕೈಗೊಳ್ಳುವ ನಾಟಿ ಚಿಕಿತ್ಸೆ ಒಂದು ಬಗೆಯೇ ‘ಮೆಟ್ ಹಚ್ಚಿ ತಿಕ್ಕುವುದು’ (ಅವುಗಳ ಬಾಯಲ್ಲಿ ಉಪ್ಪಿನಕಾಯಿಟ್ಟು ಮೆಟ್ಟಿಂದ ಗಸಗಸ ತಿಕ್ಕುವುದು). ಹಳ್ಳಿಜನ ಮೆಟ್ಟುವ ಚರ್ಮದ ಅತಿ ಬಿರುಸಾದ ಗಟ್ಟಿ ಪಾದರಕ್ಷೆಗಳೇ ಅವು. ಬಾಧೆಗೊಳಗಾದ ದನ ಹುಲ್ಲು ತಿನ್ನೋಕಾಗಲ್ಲ, ನೀರು ಕುಡಿಯೋಕಾಗಲ್ಲ ಮುಳ್ಳು ಬಂದಿರೋ ಕಾರಣಕ್ಕಾಗಿ.
ಅಲ್ಲಾ! ಈ ಒಕ್ಕಲಿಗರು ಮೂಕ ಬಸವಣ್ಣ, ನಮ್ ಹಿರಿಯಣ್ಣ, ಭೂಮಿ ತಾಯಿ ಚೊಚ್ಚಲ ಮಗ, ಶಿವನ ವಾಹನ ಎಂದು ಬಲವಾಗಿ ನಂಬುವವರೇ ತಾವು ದಿನಾ ಮೆಟ್ಟುವ ಮೆಟ್ಟಿಗೆ/ಚಪ್ಪಲಿಗೆ ಮನೆಯಲ್ಲಿನ ಉಪ್ಪಿನಕಾಯಿ ಹಚ್ಚಿ ಅದರ ಮೂಗುದಾರ ಮಗಾಡ ಹಿಡಿದು ಎಳೆದು ದವಡೆಗೆ ಕೈ ಹಾಕಿ ಬಾಯಿ ಪೊಳ್ಳು ಮಾಡಿ ಉಪ್ಪಿನಕಾಯಿ ಇಟ್ಟು ಮೆಟ್ಟಿನಿಂದ ಗಸಗಸ ತಿಕ್ಕುತ್ತಾರೆ. ಇದರಿಂದ ಮುಳ್ಳು ಮುರಿತವಂತೆ. 1-2 ದಿನ ಹೀಗೆ ಮಾಡಿದಾಗ ಅವು ಪುನಃ ಮೊದಲಿನ ಹಾಗೆ ಚೇತರಿಸಿಕೊಂಡು ನೀರು ಕುಡಿಯೋದು, ಮೇವು ತಿನ್ನೋಕೆ ಶುರು ಮಾಡುತ್ತವೆ.
ಈಗ ನಮ್ಮ ಮನೆಯಲ್ಲಿ ಆದ ಒಂದು ಘಟನೆ ಹೇಳ್ತೀನಿ ಕೇಳಿ!
ಈವಾಗಲಾದರೂ ಅಷ್ಟೇ ನಮ್ಮಜ್ಜ ನಮ್ಮಪ್ಪ ಸಿಟ್ಟು ಬಂದಾಗ “ಮೆಟ್ಟs ಮೆಟ್ಟs ಹಚ್ಚಿ ತಿಕತೀನಿ, ಹೆಡಕs ಹೆಡಕs ಹಿಡದು ಹೊರಗ ಹಾಕ್ತೀನಿ, ಯಾಕ್ ಕಡಿಲ್ಯಾತದೇನು? ತುರ್ಸ ಅಂದೆನ, ಹಲ್ಲ್ ಬಂದಾವೇನ ಮುಕಳ್ಯಾಗ?” ಅಂತೆಲ್ಲ ಹೇಳ್ತಾರೆ. ಇನ್ನೂ ಸುಮಾರು ಇವೆ. ಅವೆಲ್ಲ ಆಫ್ ದಿ ರೆಕಾರ್ಡ್. ಬರಿಯೋಕಾಗಲ್ಲ. ನಮ್ದು ಮೊದಲು ಕೂಡು ಕುಟುಂಬ ಇತ್ತು. ಒಂದೇ ಮನೆ, ಒಂದೇ ತೋಟ, ಒಂದೇ atlas ದೊಡ್ಡ ಸೈಕಲ್ಲು, ಒಂದೇ Suzuki ಬೈಕು, ಒಂದೇ ಎತ್ತಿನ ಗಾಡಿ, ಒಂದೇ ದನದ ಕೊಟ್ಟಿಗೆ. ಅದರಲ್ಲಿ 3 ಆಕಳು, ಎರಡು ಎತ್ತು, ಒಂದು ಹೋರಿ ಕರು.
ಒಂದು ಸಲ ನಾ ನೋಡಿದ್ದರಲ್ಲಿ ಇದು ಜಾಸ್ತಿ ನೆನಪು. ನಮ್ಮ ದನಗಳಿಗೆ ಒಂದಾದ್ಮೇಲೆ ಒಂದಕ್ಕೆ ಬಾಯಿ ಬರುತ್ತಾ ಇದ್ದವು. ಆಗಿನ್ನೂ ಸಣ್ಣವನಿದ್ದೆ. ಒಂದು ದಿನ ಮಧ್ಯಾಹ್ನ ಒಂದು ಆಕಳು ನೀರು ಕುಡಿಲಿಲ್ಲ. ಎರಡು ದಿನದಿಂದ ಹುಲ್ಲು, ಗುಗ್ಗರಿ, ನುಚ್ಚು ಯಾವುದು ಸರಿಯಾಗಿ ತಿನ್ನುತ್ತಿರಲಿಲ್ಲ. ನೀರು ಕುಡಿಸುವಾಗ ನಮ್ಮಜ್ಜ (ಯಾರೇ ಒಕ್ಕಲಿಗರು ಆದ್ರೂ ಹೀಗೆ) ಕುಡಿ! ಕುಡಿ! ನೀರ್ ಠ್ಣಾs ಠ್ಣಾs ಎಂದು ಗೊಟರು ಶಬ್ದ ಹಾಕಿದರು. ಅದು ಏನು ಮಾಡಿದರೂ ನೀರು ಕುಡಿಯಲೇ ಇಲ್ಲ. ಸ್ವಲ್ಪ ಹೊತ್ತು ಅದನ್ನೇ ನೋಡಿ “ಶೀಫು ಆಯಿ ಬಳಿ ಹೋಗಿ ಒಂದ್ ವಾಟ್ಗಾ ಉಪ್ಪಿನಕಾಯ್ ತಗೊಂಡ್ಬಾ ಅಂದ. ನಾನು ಯಾಕ್ ಮುತ್ತ್ಯಾ? ಅಂದೆ. ದನಕ್ಕ ಬಾಯಿ ಬಂದದ ಅಂದ. ಆತು ಅಂದು ಅಡುಗೆ ಮನೆಗೆ ಹೋಗಿ ತಗೊಂಡು ಬಂದೆ. ನೀವು ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ. ನಮ್ಮಜ್ಜ ದಿನಾ ‘ತಂದಿ ಬಸವಣ್ಣಪ್ಪ, ತಾಯಿ ಗೌರವ್ವ’ ಅಂತ ಅವುಗಳಿಗೆ ಭಕ್ತಿಯಿಂದ ನಮಸ್ಕಾರ ಮಾಡೋನು. ಅವತ್ತು ಆಕಳು ಬಾಯಿ ತೆರೆಯದಿದ್ದಕ್ಕೆ ಏನೆಲ್ಲಾ ಬೈದ; ಯಪ್ಪಾ! ಆ ಜಾಗದಲ್ಲಿ ಈಗಿನ ಹೆಣ್ಮಕ್ಳು ಯಾರಾದ್ರೂ ಇದ್ದಿದ್ರೆ ನನ್ನ ತೇಜೋವಧೆ ಮಾಡಿದ ಈ ಮುದುಕ ಅಂತ ಕೋರ್ಟ್ ನಲ್ಲಿ ಕೇಸ್ ಹಾಕ್ತಿದ್ರು. ಅದರಲ್ಲಿ ಒಂದು ಬೈಗುಳ ಮಾತ್ರ ಹೇಳ್ತೀನಿ ಕೇಳಿ “ಅಲಾ! ಹಡಸು ತಳಿ ನಿನ್ ಗುದ್ದ ಕೆಡವಿ ನೀರ್ ತುಂಬೊರಿಲ್ಲ್ ಅದಕ್ಕ ಮಾಡಾತಿ” ಇಷ್ಟೇ ಕಡೆಗೆ ನಮ್ಮಜ್ಜ -ಕಾಕಾ ಸೇರಿ ಅದನ್ನ ಕೆಳಗೆ ಕೆಡವಿ ಬಾಯಿಗೆ ಹಚ್ಚಿ ತಿಕ್ಕಿದ್ರು ಮೆಟ್ಟ. ಎರಡು ದಿನದಲ್ಲಿ ಆಕಳು ಹುಷಾರಾಯಿತು.
ಪ್ರಸಾದ ಗುಡ್ಡೋಡಗಿ
ಬಿ.ಎ. ದ್ವಿತೀಯ ವರ್ಷ, ಕರ್ನಾಟಕ ಕಾಲೇಜು ಧಾರವಾಡ