ನವದೆಹಲಿ: ಮಧ್ಯಪ್ರದೇಶ ರಾಜಸ್ತಾನದಲ್ಲಿ 11 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಔಷಧಿ ‘ಕೋಲ್ಡ್ರಿಫ್’ ಸೇರಿದಂತೆ ಇತರೆ 19 ಔಷಧಿಗಳ ಉತ್ಪಾದನಾ ಘಟಕಗಳಲ್ಲಿ ಕೇಂದ್ರ ಔಷಧ ನಿಯಂತ್ರಣ ಗುಣಮಟ್ಟ ಸಂಸ್ಥೆ (ಸಿಡಿಎಸ್‌ಸಿಒ) ತಪಾಸಣೆ ನಡೆಸಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮತ್ತೊಂದು ಕಡೆ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ಮಾರಾಟವನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.
ಔಷಧ ಗುಣಮಟ್ಟ ವೈಫಲ್ಯಕ್ಕೆ ಕಾರಣವಾಗಬಹುದಾದ ಅಂಶಗಳನ್ನು ಪತ್ತೆಹಚ್ಚಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿಡಿಎಸ್‌ಸಿಒ ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಕಾಂಚೀಪುರಂನಲ್ಲಿರುವ ಶ್ರೀಸನ್ ಫಾರ್ಮಾ ಉತ್ಪಾದನಾ ಘಟಕದಿಂದ ಸಂಗ್ರಹಿಸಲಾದ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದೆ ಎಂದು ತಿಳಿದು ಬಂದಿದೆ.
ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದಂತೆ ಎರಡು ವರ್ಷದೊಳಗಿನ ಮಕ್ಕಳಿಗೆ ‘ಕೋಲ್ಡ್ರಿಫ್’ ಅನ್ನು ಶಿಫಾರಸು ಮಾಡಬಾರದು. ಐದು ವರ್ಷದೊಳಗಿನ ಮಕ್ಕಳಿಗೆ ಈ ಔಷಧಿ ಅಗತ್ಯ ಇರುವುದಿಲ್ಲ. ಅನಿವಾರ್ಯವಾದರೆ ಮಾತ್ರ ನೀಡಬೇಕು ಎಂದು ಸೂಚಿಸಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಘಟನೆಗಳು (ಮಕ್ಕಳ ಸಾವು) ವರದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್‌ಎಸ್) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಳ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದೆ.