ಕಾಶ್ಮೀರದ ಫೂಂಚ್‌ನಲ್ಲಿ ನಡೆದ ಅಪಘಾತ; ಕೊಡಗಿನ ಯೋಧ ದಿವಿನ್‌ ಸಾವು

Most read

ಮಡಿಕೇರಿ: ಈಚೆಗೆ ಜಮ್ಮು ಕಾಶ್ಮೀರದ ಫೂಂಚ್‌ನಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕೊಡಗು ಜಿಲ್ಲೆಯ ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರ ಗ್ರಾಮದ ಸೈನಿಕ ಪಳಂಗೋಟಿ ದಿವಿನ್ (28) ಭಾನುವಾರ ರಾತ್ರಿ ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 28 ವರ್ಷ. ಸೇನಾ ವಾಹನ ಪ್ರಪಾತಕ್ಕೆ ಬಿದ್ದಾಗ ದಿವಿನ್ ಶ್ವಾಸಕೋಶಕ್ಕೆ ಗಂಭೀರ ಹಾನಿಯುಂಟಾಗಿತ್ತು. ನಂತರ ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಿವಿನ್ ತಾಯಿ ಜಯಮ್ಮ ಅವರು ಶ್ರೀನಗರಕ್ಕೆ ತೆರಳಿ ಪುತ್ರನ ಆರೈಕೆಯಲ್ಲಿ ತೊಡಗಿದ್ದರು. ಆದರೆ, ಅವರಿಗೆ ಮಗನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಪೋಷಕರಿಗೆ ಒಬ್ಬರೇ ಮಗನಾಗಿದ್ದ ದಿವಿನ್ ಹತ್ತು ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಇತ್ತೀಚೆಗೆ ಪಿರಿಯಾಪಟ್ಟಣದ ಯುವತಿಯೊಂದಿಗೆ ನಿಶ್ಚಿತಾರ್ಥ ಕೂಡ ನೆರವೇರಿದ್ದು, ಫೆಬ್ರವರಿಯಲ್ಲಿ ವಿವಾಹ ನಿಗದಿಯಾಗಿತ್ತು. ದಿವಿನ್‌ ಒಂದು ವರ್ಷದ ಹಿಂದೆ ಸ್ವಗ್ರಾಮದಲ್ಲಿ ಹೊಸಮನೆಯನ್ನೂ ಕಟ್ಟಿಸಿದ್ದರು. ಇವರ ತಂದೆ ನಿಧನ ಹೊಂದಿದ್ದಾರೆ. ಮಂಗಳವಾರ ಪಾರ್ಥಿವ ಶರೀರ ಕೊಡಗಿಗೆ ಬರುವ ಸಾಧ್ಯತೆ ಇದೆ. ಮಡಿಕೇರಿ ಶಾಸಕ ಡಾ| ಮಂಥರ್‌ ಗೌಡ ಅವರು ದಿವಿನ್‌ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಇವರು ಮರಾಠ ರೆಜಿಮೆಂಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಬುಧವಾರ ಬೆಳಗ್ಗಿನ ಜಾವ ಸೇನೆಯ ಮರಾಠ ರೆಜಿಮೆಂಟಿಗೆ ಸೇರಿದ ವಾಹನದಲ್ಲಿ ಯೋಧ ದಿವಿನ್ ಸೇರಿದಂತೆ 10 ಮಂದಿ ಯೋಧರು ಎಂದಿನಂತೆ ಭದ್ರತೆಗೆ ತೆರಳುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ವಾಹನ ಜಮ್ಮು ಕಾಶ್ಮೀರದ ಪೂಂಚ್‍ ಬಳಿ ಪ್ರಪಾತಕ್ಕೆ ಉರುಳಿತ್ತು. ಈ ದುರಂತದಲ್ಲಿ ಈ ಹಿಂದೆಯೇ ಕರ್ನಾಟಕದ ಮೂವರು ಯೋಧರು ಸೇರಿದಂತೆ ಐವರು ಮೃತಪಟ್ಟಿದ್ದರು. ದಿವಿನ್ ಸೇರಿದಂತೆ 5 ಮಂದಿ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಉದಂಪುರದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.. ಈ ಮೂಲಕ ಅಪಘಾತದಲ್ಲಿ ಮೃತಪಟ್ಟ ಕನ್ನಡಿಗ ಯೋಧರ ಸಂಖ್ಯೆ ನಾಲ್ಕಕ್ಕೆ ಏರಿದೆ.

More articles

Latest article