ದಕ್ಷಿಣ ಕನ್ನಡ: ಉಳ್ಳಾಲ (ದಕ್ಷಿಣ ಕನ್ನಡ): ಬೀದರ್ ನಗರದಲ್ಲಿ ಎಟಿಎಂಗೆ ಹಣ ತುಂಬಲು ಬಂದ ವಾಹನದ ದರೋಡೆ ಮಾಡಿರುವ ಘಟನೆ ಹಸಿರಾಗಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಉಳ್ಳಾಲ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ (ಕೋಟೆಕಾರು ಬ್ಯಾಂಕ್) ಮಧ್ಯಾಹ್ನ 11.30ರಿಂದ 12.30ರ ನಡುವಿನ ಅವಧಿಯಲ್ಲಿ ಐದು ಮಂದಿ ಮುಸುಕುಧಾರಿಗಳು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿ ಚಿನ್ನಾಭರಣ ಮತ್ತು ನಗದು ಲೂಟಿ ಮಾಡಿದ್ದಾರೆ. ಇವರು ಸುಮಾರು ರೂ. 12 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನವನ್ನು ಲೂಟಿ ಮಾಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ.
ದರೋಡೆಕೋರರು ತಮ್ಮ ಕೈಗಳಲ್ಲಿ ಬಂದೂಕು, ಕತ್ತಿ, ಚಾಕು ಹಿಡಿದು ಬ್ಯಾಂಕ್ ಪ್ರವೇಶಿಸಿದ್ದರು. ಈ ವೇಳೆ ಬ್ಯಾಂಕ್ ನಲ್ಲಿ ನಾಲ್ಕೈದು ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದರು. ಸಿಬ್ಬಂದಿಗೆ ಬಂದೂಕು ತೋರಿಸಿ ಲಾಕರ್ ಬಾಗಿಲು ತೆಗೆಸಿದ ದರೋಡೆಕೋರರು ಚಿನ್ನ, ನಗದನ್ನು ಚೀಲದಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಕಳವಾದ ಚಿನ್ನಾಭರಣ, ನಗದು ಅಂದಾಜು ರೂ.10-12 ಕೋಟಿ ಇರಬಹುದು ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ದರೋಡೆಕೋರರು ಹಿಂದಿನಲ್ಲಿ ಮಾತನಾಡುತ್ತಿದ್ದರು ಎಂದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ದರೋಡೆಕೋರರ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬ್ಯಾಂಕ್ ನ ಕೆಳಗಿನ ಮಹಡಿಯಲ್ಲಿರುವ ಬೇಕರಿಯಲ್ಲಿದ್ದ ಕೆಲವು ವಿದ್ಯಾರ್ಥಿಗಳು ಸಿಬ್ಬಂದಿ ಕೂಗಿಕೊಳ್ಳುವುದನ್ನು ಕೇಳಿ ಅತ್ತ ಓಡಲು ಪ್ರಯತ್ನಿಸಿದಾಗ, ದರೋಡೆಕೋರರು ಅವರನ್ನು ಬೆದರಿಸಿದ್ದಾರೆ. ವಿದ್ಯಾರ್ಥಿಗಳ ಬಳಿ ಅವರು ಕನ್ನಡದಲ್ಲಿ ಮಾತನಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಬಳಿ ಹಿಂದಿಯಲ್ಲಿ ಮಾತನಾಡಿದ್ದಾರೆ ಎಂದು ಬ್ಯಾಂಕ್ ನೌಕರರು ತಿಳಿಸಿದ್ದಾರೆ. ಕೇವಲ 10 ನಿಮಿಷಗಳಲ್ಲಿ ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು, ಶ್ವಾನದಳ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.