ಬೆಂಗಳೂರು: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳಿಗೆ ಮಲೆಯಾಳಿ ಚಾಲಕರನ್ನು ನೇಮಕ ಮಾಡಲಾಗಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತೀಕ್ಷ್ಣ ಶಬ್ದಗಳಲ್ಲಿ ತಿರುಗೇಟು ನೀಡಿದ್ದು, ಕೇಂದ್ರ ಸರ್ಕಾರದ ನೀತಿಯನ್ವಯ ಎಲೆಕ್ಟ್ರಿಕ್ ಬಸ್ ಗಳ ಮಾಲೀಕತ್ವ ಖಾಸಗಿ ಸಂಸ್ಥೆಗಳ ಕೈಯಲ್ಲಿದೆ. ಕೇಳುವುದಿದ್ದರೆ ನಿಮ್ಮ ಪೂಜ್ಯ ಪ್ರಧಾನಿಯವರನ್ನು ಕೇಳಿ ಎಂದು ಚುಚ್ಚಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಅವರು ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿರೋಧ ಪಕ್ಷದ ನಾಯಕ ಅಸ್ವಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತಿರೋ?? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದೆ ಇರುವ ಯಕ್ಷ ಪ್ರಶ್ನೆ ಎಂದು ಗೇಲಿ ಮಾಡಿದ್ದಾರೆ.
ನೀವು ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ಅದರ ಆಯುಷ್ಯ ಕಡಿಮೆ. ನಮ್ಮ ಸತ್ಯದ ಒಂದು ಏಟಿಗೆ ಅದು ಕುಸಿದುಬೀಳುತ್ತಲೇ ಇದೆ. ನೀವು ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ. ಇದು ಮುಂದುವರಿಯಲಿ ಆಲ್ ದಿ ಬೆಸ್ಟ್ ಎಂದು ಅವರು ಲೇವಡಿ ಮಾಡಿದ್ದಾರೆ.
ಪ್ರಪ್ರಥಮವಾಗಿ ಸಾರಿಗೆ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಯು ಕೇಂದ್ರ ಸರ್ಕಾರದ ನೀತಿ ಯೋಜನೆಯಂತೆ ಜಾರಿಯಾಗಿದೆ. ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರಿಗೆ ಸಂಸ್ಥೆಗಳು ನೇರವಾಗಿ ಖರೀದಿಸುವಂತಿಲ್ಲ, ಖಾಸಗಿ ಕಂಪನಿಯವರು ಮಾಲೀಕತ್ವ ಹೊಂದಿರುತ್ತಾರೆ, ಅವರಿಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ನೇರವಾಗಿ ನೀಡುತ್ತದೆ ಹಾಗೂ ಚಾಲಕರನ್ನು ನಿಯೋಜಿಸುವ ಕಾರ್ಯವು ಖಾಸಗಿ ಅವರಿಗೆ ನೀಡಲಾಗಿದೆ.
ಚಾಲಕರ ವೇತನ, ಆಯ್ಕೆ ಯಾವುದರಲ್ಲಿಯೂ ಸಾರಿಗೆ ಸಂಸ್ಥೆಗಳಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ಬಸ್ಸುಗಳ ಕಾರ್ಯಾಚರಣೆ ಹೊಣೆ ಮಾತ್ರ ಸಾರಿಗೆ ಸಂಸ್ಥೆಗಳದ್ದು, ಈ ವಿಷಯವನ್ನು ಹತ್ತು ಹಲವಾರು ಬಾರಿ ನಮ್ಮ ಸಾರಿಗೆ ಸಚಿವರು ಪ್ರತಿಯೊಂದು ವೇದಿಕೆಯಲ್ಲಿಯೂ ಸ್ಪಷ್ಟಪಡಿಸಿರುತ್ತಾರೆ. ತಮಗೆ ಅದು ಅರ್ಥವಾಗದಿರುವುದು ನಿಜಕ್ಕೂ ಶೋಚನೀಯ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಯುವಕರಿಗೆ ಅದರಲ್ಲಿಯೂ ರಾಜ್ಯದ ಯುವಕರಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಲು ಕಾರಣವಾದ ಕೇಂದ್ರ ಸರ್ಕಾರದ ಈ ಯೋಜನೆಯ ಬಗೆಗಿನ ತಮ್ಮ ನೋವು, ದುಃಖ ಮತ್ತು ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ತವಕ ನಿಮ್ಮಲ್ಲಿದ್ದರೆ ದಯವಿಟ್ಟು ನಿಮ್ಮ ಪೂಜ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿ ಉತ್ತರ ಪಡೆಯಿರಿ, ಅಸಂಬದ್ಧ ಟ್ವೀಟ್ ಗಳ ಮೂಲಕ ನಿಮ್ಮ ಅಜ್ಞಾನವನ್ನು ಪ್ರದರ್ಶಿಸಬೇಡಿ.
ನಿಮ್ಮ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ ಮೇಲೆ ರೂ.5,900 ಕೋಟಿ ಸಾಲ ಮಾಡಿ ಆ ಹೊರೆಯನ್ನು ನಮ್ಮ ತಲೆ ಮೇಲೆ ಹೊರೆಸಿ ಹೋಗಿದ್ದೀರಿ. ಶಾಂತಿನಗರ ಟಿ.ಟಿ.ಎಂ.ಸಿ ಯನ್ನು ಸಾಲ ಪಡೆಯಲು ಅಡವಿಟ್ಟಿದ್ದು, ತಮ್ಮ ಆಡಳಿತ ಅವಧಿಯಲ್ಲಿಯೇ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲವೆನಿಸುತ್ತದೆ.
ಸಾರಿಗೆ ಸಂಸ್ಥೆಗಳಲ್ಲಿ 14,000 ಹುದ್ದೆಗಳು ಖಾಲಿಯಿದ್ದರೂ, ತಮ್ಮ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ಮಾಡದೆ, ನಮ್ಮ ಅವಧಿಯಲ್ಲಿ ಹೊರಡಿಸಲಾಗಿದ್ದ ನೇಮಕಾತಿ ಪ್ರಕಟಣೆಗಳಿಗೂ ತಡೆತಂದಿರುವುದನ್ನು ಮರೆತು ಬಿಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರ ಬಂದೊಡನೆಯೇ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು, ಈಗಾಗಲೇ 1,650 ಚಾಲಕ/ ನಿರ್ವಾಹಕರು ಹಾಗೂ 250 ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಭರದಿಂದ ಸಾಗಿದೆ. ನಾಲ್ಕು ಸಾರಿಗೆ ನಿಗಮಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 500 ಕ್ಕೂ ಹೆಚ್ಚು ಅನುಕಂಪದ ಆಧಾರದ ಮೇಲೆ ನೇಮಕಾತಿ ಪತ್ರವನ್ನು ಸಿಬ್ಬಂದಿಗಳ ಅವಲಂಬಿತರಿಗೆ ನೀಡಲಾಗಿದೆ.
ಯುವಕರಿಗೆ ನಿರುದ್ಯೋಗ ಭಾಗ್ಯ ಕರುಣಿಸಿ, ಸಾರಿಗೆ ಸಂಸ್ಥೆಗಳನ್ನು ಅವನತಿಯತ್ತ ಕೊಂಡ್ಯೊಯ್ದ ಹೆಗ್ಗಳಿಕೆ ತಮ್ಮದೇ ಅಲ್ಲವೇ? ನಾವು ನುಡಿದಂತೆ ನಡೆಯುವವರು, ತಮ್ಮಂತೆ ಬರೀ ಭಾಷಣದಲ್ಲಿ ಕೋಟಿ ಕೋಟಿ ಉದ್ಯೋಗ ಭಾಗ್ಯ ಕರುಣಿಸಿ, ಯುವಜನರನ್ನು ಶೋಷಿಸುವ ಕಾರ್ಯ ಮಾಡಿಲ್ಲ.
ಸಾರಿಗೆ ಸಂಸ್ಥೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಮಾಡದೇ, ಡಕೋಟ ಬಸ್ಸುಗಳನ್ನು ದಯಪಾಲಿಸಿರುವ ನೀವು ಮಾತನಾಡುವ ಪರಿಗೆ ವಿಷಾದವಲ್ಲದೇ ಮತ್ತೇನು ವ್ಯಕ್ತಪಡಿಸಲು ಸಾಧ್ಯ? ತಮ್ಮ ಬೇಜಾವಬ್ದಾರಿ, ಆಧಾರರಹಿತ, ತಪ್ಪು ಹೇಳಿಕೆಗಳಿಗೆ ಸಂತಾಪ ಸೂಚಿಸುತ್ತಾ ನಿಮಗೆ ನೀವು ನಂಬಿರುವ ದೇವರು ಸತ್ಯ ಹೇಳುವ ಸದ್ಬುದ್ದಿಯನ್ನು ಕರುಣಿಸಲು ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.