ಬೆಂಗಳೂರು: ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ದಂಧೆಗಳು ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲೂ ಹರಡಿಕೊಳ್ಳುತ್ತಿವೆ. ಹೀಗಾಗಿ ಈ ಆ್ಯಪ್ಗಳನ್ನು ನಿಯಂತ್ರಿಸಲು ಶೀಘ್ರದಲ್ಲೇ ಹೊಸ ಮಾನದಂಡಗಳನ್ನು ರೂಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ಗೆ ಕಡಿವಾಣ ಹಾಕಲು ಹೊಸ ಕಾನೂನು ತರುವುದು ಅನಿವಾರ್ಯವಾಗಿದೆ. ಹಾಗಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸಾರ್ವಜನಿಕರು ಈ ಆಪ್ ಗಳ ದುರಾಸೆಗೆ ಬೀಳಬಾರದು. ನಾಗರೀಕರನ್ನು ರಕ್ಷಿಸುವ ಬಗ್ಗೆ ಸಭೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಆಪ್ ಗಳ ನಿಯಂತ್ರಣಕ್ಕೆ ಈಗಾಗಲೇ ಕಾಯ್ದೆಗಳು ಇವೆ. ಆದರೆ ಕಾಯ್ದೆಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಮತ್ತು ಹೆಚ್ಚುವರಿ ಕಾಯ್ದೆಗಳನ್ನು ಸೇರ್ಪಡೆ ಮಾಡುವ ಸಂಬಂಧ ಚರ್ಚೆ ನಡೆಯುತ್ತಿದೆ. ಗೇಮಿಂಗ್ ಇಂಡಸ್ಟ್ರಿ , ಸಾರ್ವಜನಿಕರು, ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯಿಂದ ಸಲಹೆ ಪಡೆದು ಕರಡು ನಿಯಮಾವಳಿಗಳನ್ನು ರೂಪಿಸಲು ಗೃಹ ಸಚಿವರು ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಸಚಿವ ಖರ್ಗೆ ತಿಳಿಸಿದ್ದಾರೆ.