ಕೊಪ್ಪಳ: ಖಾಸಗಿ ಲೇವಾದೇವಿಗಳ ಹಾವಳಿಯಿಂದ ಜನ ತತ್ತರಿಸಿದ್ದಾರೆ. ಈ ಹಾವಳಿಗೆ ಕಡಿವಾಣ ಹಾಕಲು ಕರ್ನಾಟಕ ಮೈಕ್ರೊ ಫೈನಾನ್ಸ್ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ–2025 ಜಾರಿಗೆ ರಾಜ್ಯಪಾಲರ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಅದುವರೆಗೂ ಪೊಲೀಸರು ತಮ್ಮ ಅಧಿಕಾರ ಬಳಸಿಕೊಂಡು ಲೇವಾದೇವಿದಾರರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಹಕಾರ ಖಾತೆ ಸಚಿವ ಕೆ.ಎನ್. ರಾಜಣ್ಣ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ನಡೆದ ಸಹಕಾರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಖಾಸಗಿ ಲೇವಾದೇವಿದಾರರ ಕಿರುಕುಳದಿಂದ ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅಂತಹ ಸಂಸ್ಥೆಯ ವಿರುದ್ದ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ಹೊಸ ಕಾನೂನು ಜಾರಿಗೆ ತರುವ ಪ್ರಯತ್ನದ ಜೊತೆಗೆ ಪೊಲೀಸರು ಹಾಲಿ ಇರುವ ಕಾನೂನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು. ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಆರಂಭಿಸಲಾಗುತ್ತಿದ್ದು, ಆ ಸಂಘದ ಅಧ್ಯಕ್ಷನಿಗೆ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.