Sunday, September 8, 2024

ಕರ್ನಾಟಕದಲ್ಲಿ ಮುಂದುವರಿದ ಮಳೆ: ಮತ್ತೆ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ; ಹವಾಮಾನ ಇಲಾಖೆ ಎಚ್ಚರ

Most read

ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದ ಬೀಳುತ್ತಿರುವ ಭರ್ಜರಿ ಮಳೆಯಿಂದಾಗಿ ಒಂದು ಕಡೆ ಸಂತಸ ಸುದ್ದಿಯಾದರೆ ಮತ್ತೊಂದೆಡೆ ಅವಾಂತರವೇ ಸೃಷ್ಟಿಯಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಬಿಟ್ಟುಬಿಡದೇ ಮಳೆ ಸುರಿಯುತ್ತಲೇ ಇದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಇಂದು ಕೂಡ ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಒಂದು ಕಡೆ ಅವಾಂತರಗಳು ಸೃಷ್ಟಿಯಾಗಿದ್ದರೆ, ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಮನೆಗಳು ಮುಳುಗಡೆಯಾಗಿವೆ, ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಗುಡ್ಡ ಕುಸಿತವಾಗಿವೆ. ಜನರು ಹೊರಗಡೆ ಓಡಾಡುವುದೇ ಕಷ್ಟವಾಗಿದೆ. ರಾಜ್ಯದ ಬಹುತೇಕ ಡ್ಯಾಂಗಳು ಭರ್ತಿ ಆಗಿದ್ದು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಸೇತುವೆಗಳು, ಜಮೀನುಗಳು ಜಲಾವೃತವಾಗಿವೆ. ಇಂತಹ ಸಂದರ್ಭದಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈಗಾಗಲೇ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಇನ್ನೂ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಸೇರಿದಂತೆ ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಕೆಲವೆಡೆ ವ್ಯಾಪಕ ಮಳೆಯಾಗಲಿದೆ. ಇನ್ನೂ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಜುಲೈ 26ರಿಂದ ಮೂರು ದಿನ ವ್ಯಾಪಕ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ.

ಜುಲೈ 26 ಮತ್ತು 27ರಂದು ಬೆಳಗಾವಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಹಾಗೂ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್ ನೀಡಲಾಗಿದೆ. ಇನ್ನೂ ಮೂರು ದಿನ ವರುಣನ ಅಬ್ಬರ ಜೋರಾಗಿ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ,

ಸದ್ಯ ಮಳೆ ನಿಲ್ಲದ ಕಾರಣ, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೊಯಿಡಾ, ಹಳಿಯಾಳ ಹಾಗೂ ಯಲ್ಲಾಪುರ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹಾಸನ ಜಿಲ್ಲೆಯಲ್ಲೂ ಮಳೆ ಅಬ್ಬರ ಮುಂದುವರಿದಿದೆ, ಜಿಲ್ಲೆಯ ಹಾಸನ, ಸಕಲೇಶಪುರ, ಬೇಲೂರು, ಆಲೂರು, ಅರಕಲಗೂಡು ಹಾಗೂ ಹೊಳೆ ನರಸೀಪುರ ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಅತ್ತ ಬೆಳಗಾವಿ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಜಿಲ್ಲೆಯ ಗೋಕಾಕ್, ಮೂಡಲಗಿ, ರಾಯಬಾಗ್ ಮತ್ತು ಹುಕ್ಕೇರಿ ತಾಲೂಕಿನಲ್ಲಿ ರಜೆ ಘೋಷಿಸಲಾಗಿದೆ.

ಚಿಕ್ಕಮಗಳೂರಿನ 6 ತಾಲೂಕು, ಕೊಡಗು ಜಿಲ್ಲೆ, ಹಾವೇರಿ ಜಿಲ್ಲೆ, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

More articles

Latest article