ಪಂಚಾಯತಿ ಮಟ್ಟದಲ್ಲಿ ಸಂವಿಧಾನಿಕ ಮೌಲ್ಯಗಳನ್ನು ಸ್ಥಾಪಿಸಲು ತೀರ್ಮಾನ: ಸಚಿವ ಪ್ರಿಯಾಂಕ್‌ ಖರ್ಗೆ

Most read

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಸಂವಿಧಾನ ದಿನದ ಅಂಗವಾಗಿ  ‘ಅರಿವು ಯಾತ್ರೆ’ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮುದಾಯದಲ್ಲಿ ಸಂವಿಧಾನದ ಮೂಲಭೂತ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಬಾಂಧವ್ಯ, ನ್ಯಾಯ ಮತ್ತು ಗೌರವಗಳನ್ನು ದೈನಂದಿನ ಜೀವನದಲ್ಲಿ ಬೇರೂರಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸುವ ಮೂಲಕ ಸಂವಿಧಾನದ ಆಶಯಗಳ ಕುರಿತು ಗ್ರಾಮೀಣ ಜನಸಮುದಾಯಕ್ಕೆ ಅರಿವು ಮೂಡಿಸಲಾಗುತ್ತಿದೆ.

ಇಲಾಖೆಯ ಸಚಿವ ಪ್ರಿಯಾಂಕ್‌ ಖರ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಈ ಮಾಹಿತಿ ನೀಡಿದ್ದಾರೆ.

ವಿಕಾಸಸೌಧದಲ್ಲಿ ಇಂದು ಅರಿವು ಯಾತ್ರೆಅಭಿಯಾನಕ್ಕೆ ಸಂವಿಧಾನದ ಪ್ರಸ್ತಾವನೆಯನ್ನು ವಾಚನ ಮಾಡುವ ಮೂಲಕ  ಚಾಲನೆ ನೀಡಲಾಯಿತು. ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಪಾಲ್ಗೊಂಡಿದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇತರೆ ಅನುಷ್ಠಾನ ಇಲಾಖೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಅಭಿಯಾನವನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿನ 5,884 ಅರಿವು ಕೇಂದ್ರಗಳಲ್ಲಿ ಇಡೀ ವರ್ಷ ನಡೆಸಲಿದ್ದು, ಅರಿವು ಕೇಂದ್ರಗಳನ್ನು ಸಾಂವಿಧಾನಿಕ ಮೌಲ್ಯಗಳನ್ನು ತಿಳಿಸುವ ಪ್ರಮುಖ ಕೇಂದ್ರಗಳನ್ನಾಗಿ ರೂಪಿಸಲು ವಿನ್ಯಾಸಗೊಳಿಸಲಾಗಿದೆ.

ಈ ಆಂದೋಲನದ ಪ್ರಮುಖ ಉದ್ದೇಶಗಳು:

ಪ್ರತಿ ಗ್ರಾಮ ಪಂಚಾಯತಿ ಮತ್ತು ವಾರ್ಡ್ ಮಟ್ಟದಲ್ಲಿ ಸಂವಿಧಾನಿಕ ಮೌಲ್ಯಗಳನ್ನು ಸಾಂಸ್ಥಿಕಗೊಳಿಸುವುದು.

  ಗೌರವ, ಸಮಾನತೆ, ಬಾಂಧವ್ಯವನ್ನು ಪಾಲಿಸುವ ಮತ್ತು ಗ್ರಾಮ ಸಭೆಗಳಂತಹ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ನಾಗರಿಕರ ಬಲವನ್ನು ನಿರ್ಮಿಸುವುದು.

ಸಮಾಜದ ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಬಾಂಧವ್ಯವು ಅತಿ ಮುಖ್ಯವೆಂಬುದನ್ನು ಒತ್ತಿಹೇಳುವುದು.

  ಹಕ್ಕುಗಳು ಮತ್ತು ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ನಾಗರಿಕನಿಗೂ ಸಮರ್ಪಕವಾಗಿ ಲಭ್ಯವಾಗುವಂತೆ ಮಾಡುವುದು

ಕರ್ನಾಟಕವನ್ನು ಪ್ರಗತಿಪರ ಸುಧಾರಣೆಗಳಲ್ಲಿ ರಾಷ್ಟ್ರೀಯ ಮಾದರಿಯಾಗಿ ರೂಪಿಸುವುದು

ಅಭಿಯಾನದ ಪ್ರಾರಂಭಿಕ ಹಂತದಲ್ಲಿ 5,884 ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರು, ನರೇಗಾ ಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು.

More articles

Latest article