ಹೊಸದಿಲ್ಲಿ: ಆದಾಯ ತೆರಿಗೆ ನೋಟಿಸ್ ಗಳನ್ನು ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ ಬೆನ್ನಲ್ಲೇ, 1700 ಕೋಟಿ ರುಪಾಯಿಗಳನ್ನು ಪಾವತಿ ಮಾಡುವಂತೆ ಆದಾಯ ತೆರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
2017-18 ಮತ್ತು 2020-21ನೇ ಸಾಲಿನ ತೆರಿಗೆ ಮತ್ತು ದಂಡಗಳು ಸೇರಿಸಿ ಒಟ್ಟು 1700 ಕೋಟಿ ರುಪಾಯಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷ ಇಕ್ಕಟ್ಟಿಗೆ ಸಿಲುಕಿದೆ.
ಈಗಾಗಲೇ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದ ಮೇಲೆ 200 ಕೋಟಿ ರುಪಾಯಿ ಪೆನಾಲ್ಟಿ ವಿಧಿಸಿದ್ದು, ಅದರ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದೆ. ಹೈಕೋರ್ಟ್ ನಲ್ಲಿ ಪಕ್ಷ ಸಲ್ಲಿಸಿದ್ದ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಅದು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾಗಿದೆ.
ಪಕ್ಷವನ್ನು ದುರ್ಬಲಗೊಳಿಸುವ ಉದ್ದೇಶದಿಂದ ನೋಟಿಸ್ ಗಳನ್ನು ಕಳುಹಿಸಲಾಗುತ್ತಿದೆ. ಇದು ಸರ್ಕಾರ ನಡೆಸುತ್ತಿರುವ ಟ್ಯಾಕ್ಸ್ ಭಯೋತ್ಪಾದನೆ. ಕಾಂಗ್ರೆಸ್‌ನ ಮೇಲೆ ಈ ಭಯೋತ್ಪಾದನೆಯನ್ನು ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ಮುಂದಿರುವಾಗ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ಪ್ರಕ್ರಿಯೆ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿ, ಪಕ್ಷ ಸಲ್ಲಿಸಿರುವ ಟ್ಯಾಕ್ಸ್ ರಿಟರ್ನ್ಸ್ ಸರಿಯಾಗಿಲ್ಲ ಎಂದು 200 ಕೋಟಿ ರುಪಾಯಿ ಪೆನಾಲ್ಟಿ ವಿಧಿಸಿತ್ತು. ನಂತರ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು.