ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಪಡಿಸಿದೆ.
ಅಮಿತ್ ಶಾಅವರ ಹೇಳಿಕೆಯನ್ನು ವಿರೋಧಿಸಿ ಇಂದು ಸಂಸತ್ ಆವರಣದಲ್ಲಿ ಕಾಮಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡಯಿತು. ನಂತರ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಬಳಿ ಮಲ್ಲಿಕಾರ್ಜುನ ಖರ್ಗೆ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಅಮಿತ್ ಶಾ ಅವರ ರಾಜೀನಾಮೆಗೆ ನಾವು ಒತ್ತಾಯಿಸುತ್ತಿದ್ದೇವೆ. ಅವರು ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸಂಸದ ನೀರಜ್ ಡಾಂಗಿ ಮಾತನಾಡಿ, ತನ್ನ ಹೇಳಿಕೆಗೆ ಸಂಬಂಧಿಸಿದಂತೆ ಅಮಿತ್ ಶಾ ಕ್ಷಮೆ ಯಾಚಿಸಬೇಕು. ಅಂಬೇಡ್ಕರ್ ಹೆಸರು ಬಳಸುವುದು ಫ್ಯಾಷನ್ ಆಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಮೂಲಕ ಬಾಬಾ ಸಾಹೇಬರು ಮತ್ತು ದೇಶದ ದಲಿತರಿಗೆ ಅವಮಾನ ಮಾಡಿದ್ದಾರೆ. ವಂಚಿತ ಮತ್ತು ಶೋಷಿತ ವರ್ಗದವರನ್ನು ಅವಮಾನಿಸಿದ್ದಾರೆ. ಇದೇ ವರ್ಗ ಅವರನ್ನು 240ರಿಂದ 40ಕ್ಕೆ ಇಳಿಸಲಿದೆ. ಅಮಿತ್ ಶಾ ತನ್ನ ಹೇಳಿಕೆ ಮೂಲಕ ಬಿಜೆಪಿ ನಾಯಕರಿಗೆ ಯಾವ ರೀತಿಯ ಚಿಂತನೆ ಇದೆ ಎಂದು ಇಡೀ ದೇಶಕ್ಕೆ ತಿಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಶಾ ಅವರು ಸಾರ್ವಜನಿಕವಾಗಿ ಮತ್ತು ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಒತ್ತಾಯಿಸುತ್ತೇನೆ. ಅಂಬೇಡ್ಕರ್ ಅವರ ಬಗ್ಗೆ ಹೇಳಿಕೆ ನೀಡುವ ಮೂಲಕ ಸಾಂವಿಧಾನಿಕ ಹುದ್ದೆ ಹೊಂದುವ ಅರ್ಹತೆಯನ್ನು ಅಮಿತ್ ಶಾ ಕಳೆದುಕೊಂಡಿದ್ದಾರೆ. ಅವರು ಗೃಹ ಸಚಿವರ ಹುದ್ದೆಗೆ ರಾಜೀನಾಮೆ ನೀಡಲೇಬೇಕು ಎಂದು ಡಾಂಗಿ ಆಗ್ರಹಪಡಿಸಿದರು.
ರಾಹುಲ್ ಗಾಂಧಿ ಪ್ರತಿಕ್ರಿಯಿಸಿ ಮನುಸ್ಮೃತಿಯಲ್ಲಿ ನಂಬಿಕೆ ಇರುವವರು ಅಂಬೇಡ್ಕರ್ ಅವರ ಜೊತೆ ಭಿನ್ನಾಭಿಪ್ರಾಯ ಹೊಂದಿರುವುದು ನಿಜ ಎನ್ನುವುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತ್ ಶಾ ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆಯ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ಭಾರೀ ದ್ವೇಷವಿದೆ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ. ಬಾಬಾ ಸಾಹೇಬರ ಹೆಸರು ಕೇಳಿದರೆ ಕೆರಳುವಷ್ಟು ದ್ವೇಷ ಬಿಜೆಪಿ ನಾಯಕರಿಗಿದೆ. ಇವರ ಪೂರ್ವಜರು ಬಾಬಾ ಸಾಹೇಬರ ಪ್ರತಿಕೃತಿಯನ್ನು ಸುಟ್ಟು ಹಾಕಿದರು. ಬಾಬಾ ಸಾಹೇಬರು ನೀಡಿದ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತಾನಾಡುತ್ತಿದ್ದರು. ಯಾವಾಗ ಜನರು ಇವರಿಗೆ ತಕ್ಕ ಪಾಠ ಕಲಿಸಿದರೋ, ಈಗ ಬಾಬಾ ಸಾಹೇಬರ ಹೆಸರು ಹೇಳುವವರ ವಿರುದ್ದ ದ್ವೇಷ ಕಾರುತ್ತಿದ್ದಾರೆ. ಇದು ನಾಚಿಕೆಗೇಡು, ಅಮಿತ್ ಶಾ ದೇಶದ ಕ್ಷಮೆ ಯಾಚಿಸಬೇಕು ಅವರು ಒತ್ತಾಯಿಸಿದ್ದಾರೆ.