ಬೆಂಗಳೂರು: ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ನಿಧನಕ್ಕೆ ಸಂತಾಪದ ಮಹಾಪೂರವೇ ಹರಿದುಬರುತ್ತಿದ್ದು, ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ದ್ವಾರಕೀಶ್ ಅವರು ನಟ, ನಿರ್ದೇಶಕರಾಗಿ ಬಹುಕಾಲ ಸೇವೆಗೈದವರು. ದ್ವಾರಕೀಶ್ ನಿಧನದ ಸುದ್ದಿ ತಿಳಿದು ದುಃಖವಾಯಿತು. ದ್ವಾರಕೀಶ್ ಅವರ ಸಿನಿಮಾಗಳಲ್ಲಿ ಡಾ.ರಾಜ್, ವಿಷ್ಣುವರ್ಧನ್ ನಟಿಸಿದ್ದರು. ಹಾಸ್ಯಭರಿತ ನಟನೆಯಿಂದ ಛಾಪು ಮೂಡಿಸಿದ್ದ ದ್ವಾರಕೀಶ್ ನಿಧನದಿಂದ ಚಿತ್ರರಂಗ ಬಡವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ದೀರ್ಘಕಾಲದ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಹಾಸ್ಯ ಕಲಾವಿದರಾಗಿ ದ್ವಾರಕೀಶ್ ಚಿತ್ರರಂಗ ಪ್ರವೇಶಿದ್ದರು. ನಂತರ ನಿರ್ಮಾಪಕವಾಗಿ ಗುರುತಿಸಿಕೊಂಡಿದ್ದರು. ಅವರ ಜೊತೆಗೆ ಕಳೆದ ಕ್ಷಣದ ನೆನಪು ಮತ್ತೆ ಕಾಡುತ್ತಿದೆ. ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಸೂಪರ್ ಸ್ಟಾರ್ ರಜನಿಕಾಂತ್ ದುಃಖ ವ್ಯಕ್ತಪಡಿಸಿದ್ದಾರೆ.
ದ್ವಾರಕೀಶ್ ಅಂಕಲ್ ಅವರನ್ನು ನಾನು ಚಿಕ್ಕ ವಯಸ್ಸಿನಿಂದ ನೋಡಿದ್ದೇನೆ. ನಮ್ಮ ತಂದೆ-ತಾಯಿ ಜೊತೆ, ಕುಟುಂಬದ ಜೊತೆ ಒಡನಾಟ ಇತ್ತು. ದೂರದ ಬೆಟ್ಟ ಸಿನಿಮಾದಿಂದ ಅವರ ಸಂಪರ್ಕ ಇತ್ತು. ದ್ವಾರಕೀಶ್ ಪ್ರೊಡಕ್ಷನ್ ಎಂದರೆ ಒಂದು ಆಡಂಬರದ ಪ್ರೊಡಕ್ಷನ್. ಅವರ ನಿರ್ಮಾಣದ ಆಯುಷ್ಮಾನ್ ಭವ ಎಂಬ ಸಿನಿಮಾದಲ್ಲಿ ನಾನು ಮಾಡಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದ ನಟ ಶಿವರಾಜ ಕುಮಾರ್ ನುಡಿದಿದ್ದಾರೆ.
ದ್ವಾರಕೀಶ್ ಅಗಲಿಕೆ ಬಹಳ ನೋವುಂಟು ಮಾಡಿದೆ. ಚಿತ್ರರಂಗಕ್ಕೆ ಅವರ ಸೇವೆ ಅವಿಸ್ಮರಣೀಯ. ದ್ವಾರಕೀಶ್ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಕಲಾವಿದನಾಗಿ ದ್ವಾರಕೀಶ್ ಅಗಾಧವಾದ ಸೇವೆ ಸಲ್ಲಿಸಿದ್ದಾರೆ. ನಟ ದ್ವಾರಕೀಶ್ ಅವರ ನಿಧನ ಸುದ್ದಿ ಕೇಳಿ ಬೇಸರವಾಗಿದೆ. ಕನ್ನಡ ಚಿತ್ರರಂಗದಲ್ಲಿ ಅನೇಕ ಹೊಸ ಮೈಲುಗಲ್ಲು ಸಾಧಿಸಿ, ಚಿತ್ರರಂಗಕ್ಕೆ ಅಡಿಪಾಯ ಹಾಕಿಕೊಟ್ಟವರು ನಟ ದ್ವಾರಕೀಶ್. ನಟ ದ್ವಾರಕೀಶ್ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
40ಕ್ಕೂ ಹೆಚ್ಚು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗವನ್ನು ಬೆಳೆಸಿದ ದ್ವಾರಕೀಶ್ ಅವರು ನಮ್ಮನ್ನಗಲಿದ್ದಾರೆ. ಅತ್ಯುತ್ತಮ ನಟ, ನಿರ್ದೇಶಕರೂ ಆಗಿದ್ದ ದ್ವಾರಕೀಶ್ ನಿಧನದೊಂದಿಗೆ ಕನ್ನಡ ಚಿತ್ರರಂಗದ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ. ಹಿರಿಯ ಜೀವಕ್ಕೆ ಅಭಿಮಾನದ ನಮಗಳು. ನಿಮ್ಮ ಸ್ಮರಣೆ ಸದಾ ಇರುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ದುಃಖ ವ್ಯಕ್ತಪಡಿಸಿದ್ದಾರೆ.
ದ್ವಾರಕೀಶ್ ಅವರ ಹಠಾತ್ ಅಗಲಿಕೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಚಿವರುಗಳಾದ ಶಿವರಾಜ್ ತಂಗಡಗಿ, ಸಂತೋಶ್ ಲಾಡ್, ಹಿರಿಯ ನಟಿ ಬಿ.ಸರೋಜಾದೇವಿ, ನಟ ಶಶಿಕುಮಾರ್, ಮಾಜಿ ಸಚಿವರ ಅಶ್ವತ್ಥ್ ನಾರಾಯಣ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.