ಕಾಮಿಡಿ ಕಿಲಾಡಿ, ಹಾಸ್ಯನಟ ರಾಕೇಶ್ ಪೂಜಾರಿ ನಿಧನ

Most read

ಉಡುಪಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ರಂಗಭೂಮಿ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ರಾಕೇಶ್ ಪೂಜಾರಿ ಅವರು ತಮ್ಮ ಅದ್ಭುತ ಹಾಸ್ಯ ಪ್ರತಿಭೆಯಿಂದ ಗಮನ ಸೆಳೆದಿದ್ದರು.

33 ವರ್ಷದ ರಾಕೇಶ್‌ ಕಾರ್ಕಳದ ನಿಟ್ಟೆ ಸಮೀಪ ಭಾನುವಾರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಉಡುಪಿ ಮೂಲದ ರಾಕೇಶ್, 2018 ರಲ್ಲಿ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಸನ್ ಎರಡರ ರನ್ನರ್ ಅಪ್ ಆಗಿ ಹೊರಹೊಮಿದ್ದರು. ನಂತರದ ದಿನಗಳಲ್ಲಿ ಅವರು ಹಲವು ಕನ್ನಡ ಮತ್ತು ತುಳು ಚಿತ್ರಗಳಲ್ಲಿ ನಟಿಸಿದ್ದರು. ರಿಯಾಲಿಟಿ ಶೋ ಗಳ ಜತೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್‌ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿದ್ದ ರಾಕೇಶ್ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಮ್ಯಾನರಿಸಂ ಮತ್ತು ಡೈಲಾಗ್‌ ಡೆಲಿವರಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಪೈಲ್ವಾನ್, ಇದು ಎಂಥಾ ಲೋಕವಯ್ಯ,  ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ಮೊದಲಾದ ತುಳು ನಾಟಕಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.

ರಾಕೇಶ್ ನಿಧನಕ್ಕೆ ನಟಿ ರಕ್ಷಿತಾ, ನಟ ಶಿವರಾಜ್ ಕೆ.ಆರ್‌.ಪೇಟೆ ಸೇರಿ ಹಲವಾರು ಮಂದಿ ತಮ್ಮ ಶೋಕ ಸಂದೇಶ ಹಂಚಿಕೊಂಡಿದ್ದಾರೆ. ರಕ್ಷಿತಾ, ‘ಇನ್ನು ಮುಂದೆ ರಾಕೇಶ್ ಜೊತೆ ಮಾತನಾಡಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಕಾರ್ಯಕ್ರಮವಾಗಿತ್ತು. ರಾಕೇಶ್ ಯಾವತ್ತೂ ಉಳಿದವರಿಗಿಂತ ಭಿನ್ನವಾಗಿ ನಿಲ್ಲುತ್ತಿದ್ದ ವ್ಯಕ್ತಿ. ಕ್ಯಾಮೆರಾದ ಹೊರಗಡೆಯೂ ಆತ  ಅತ್ಯಂತ ಪರಿಪೂರ್ಣ ವ್ಯಕ್ತಿ ಎಂದು ನನಗೆ ತಿಳಿದಿತ್ತು. ರಾಕೇಶ್ ನೀವು ಯಾವಾಗಲೂ ನಮ್ಮ ಹೃದಯದಲ್ಲಿ ವಾಸಿಸುತ್ತೀರಿ. ನೀವು ನಮ್ಮೆಲ್ಲರ ಜೀವನದಲ್ಲಿ ತಂದ ಸಂತೋಷಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

More articles

Latest article