ಚಿಕ್ಕಮಗಳೂರು: ನಂದಿನಿ ಹಾಲು ಉತ್ಪನ್ನಗಳ ಮಾದರಿಯಲ್ಲಿ ಕಾಫಿ ಬ್ರ್ಯಾಂಡ್ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ಈ ಯೋಜನೆ ಸಾಕಾರವಾದರೆ ಕಾಫಿ ಬೆಳೆಗಾರರಿಗೆ ಅನುಕೂಲವಾಗಲಿದೆ.
ಈಗಾಗಲೇ ಅಂಧ್ರಪ್ರದೇಶ ಕಾಫಿ ಉದ್ಯಮಕ್ಕೆ ಉತ್ತೇಜನ ನೀಡಲು ಅರೋಕೋ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದರಿಂದ ಬೆಳೆಗಾರರಿಗೆ ಅನುಕೂಲವಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ತನ್ನದೇ ಆದ ಕಾಫಿ ಬ್ರ್ಯಾಂಡ್ ಪರಿಚಯಿಸಿದರೆ ಕಾಫಿ ಬೆಳೆಗಾರರಿಗೆ ಸಹಾಯಕವಾಗುವುದರ ಜತೆಗೆ ನಿದ್ಯೋಗಿ ಯುವಕರಿಗೆ ಅನುಕೂಲವಾಗಲಿದೆ ಎನ್ನುವುದು ಸರ್ಕಾರದ ಉದ್ದೇಶ.
ದೇಶದಲ್ಲಿ ಕಾಫಿ ಉತ್ಪಾದನೆಯಲ್ಲಿ ರಾಜ್ಯದ ಕೊಡುಗೆ ಶೇ. 71 ರಷ್ಟಿದೆ. ಆದರೂ ರಾಜ್ಯದಲ್ಲಿ ಕಾಫಿ ಪ್ರತಿನಿಧಿಸುವ ಬ್ರ್ಯಾಂಡ್ ಇರಲಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಎರಡು ಸಭೆಗಳಾಗಿದ್ದು, ಸುಧೀರ್ಘ ಚರ್ಚೆ ನಡೆದಿದೆ. ಮತ್ತೊಂದು ಸುತ್ತಿನ ಸಭೆಯಲ್ಲಿ ಕಾಫಿ ಬ್ರ್ಯಾಂಡ್ ಸ್ಥಾಪನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಹೇಳಿದ್ದಾರೆ.
ಇದರಿಂದ ಕಾಫಿ ಬೆಳೆಗಾರರಿಗೆ ಆರ್ಥಿಕ ಸಬಲೀಕರಣ, ಗ್ರಾಹಕರಿಗೆ ಗುಣಮಟ್ಟದ ಕಾಫಿ, ರೈತರಿಗೆ ಉತ್ತಮ ಬೆಲೆ, ದಲ್ಲಾಳಿಗಳ ಹಾವಳಿಯಿಂದ ಮುಕ್ತಿ, ಕಾಫಿ ಉದ್ಯಮಕ್ಕೆ ಉತ್ತೇಜನ ದೊರಕಲಿದೆ ಎಂದು ನಿರೀಕ್ಷಿಸಲಾಗಿದೆ.