ಹಾಲಕ್ಕಿ ಸಮಾಜದ ಸಾಂಸ್ಕೃತಿಕ ಕೊಂಡಿ, ಅಂಕೋಲಾದ ಹಾಡು ಹಕ್ಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಬೊಮ್ಮಗೌಡ ನಿಧನರಾಗಿದ್ದಾರೆ. ಅದಮ್ಯ ಚೇತನಕ್ಕೆ ಕನ್ನಡ ಪ್ಲಾನೆಟ್ ಅಂತಿಮ ನಮನ ಸಲ್ಲಿಸುತ್ತಾ, ಡಾ. ಎಚ್ ಎಸ್ ಅನುಪಮಾ 2011 ನೇ ಇಸವಿಯಲ್ಲಿ ಸುಕ್ರಜ್ಜಿ ಬಗ್ಗೆ ಬರೆದಿರುವ ಅತ್ಯಂತ ಆಪ್ತ ಲೇಖನವನ್ನು ನುಡಿನಮನವಾಗಿ ಪ್ರಕಟಿಸುತ್ತಿದೆ.
ಇದು ಮಹಿಳಾ ಯುಗ. ತನಗಿರುವ ಜೈವಿಕ, ದೈಹಿಕ, ಸಾಮಾಜಿಕ ಅಡೆತಡೆಗಳನ್ನೆಲ್ಲ ಎದುರಿಸಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರಿಗೆ 33% ಮೀಸಲಾತಿ ಕೊಡುವ ಮಾತು ಕೇಳಿಬರುತ್ತಿದೆ. ಮಹಿಳಾ ಸಬಲೀಕರಣವೆಂದರೆ ಆರ್ಥಿಕ-ಶೈಕ್ಷಣಿಕ ಚಟುವಟಿಕೆಗಳಲ್ಲಿ, ಆಡಳಿತದಲ್ಲಿ ಕೈ ಜೋಡಿಸಿ ಯಶಸ್ವಿಯಾದವರಷ್ಟೇ ಅಲ್ಲ. ಶಿಕ್ಷಣ, ಹಣ, ಅಧಿಕಾರದ ಬೆಂಬಲವಿಲ್ಲದಿದ್ದರೂ ತಮ್ಮ ಸುತ್ತಮುತ್ತಲ ಜೀವಗಳನ್ನು, ಅವರ ಬದುಕನ್ನು ಹಸನುಗೊಳಿಸಲು ಅಖಂಡ ಆತ್ಮವಿಶ್ವಾಸದಿಂದ ಹೋರಾಡಿದ ಎಷ್ಟೋ ಜನ ಸಾಧಕರು ನಮ್ಮ ನಡುವೆ ಎಲೆಮರೆಯ ಕಾಯಿಗಳಂತಿದ್ದಾರೆ. ಅಂಥವರಲ್ಲಿ ಅಂಕೋಲಾದ ಸುಕ್ರಿ ಬೊಮ್ಮ ಗೌಡ ಒಬ್ಬರು.
ನೂರಾರು ಹಾಡುಗಳನ್ನು ತನ್ನ ಒಡಲಲ್ಲಿ ಬೆಚ್ಚಗೆ ಕಾದಿಟ್ಟುಕೊಂಡಿರುವ ಸುಕ್ರಿ ನಿಜವಾದ ಸಂಸ್ಕೃತಿ ರಕ್ಷಕಿ. ಅನಕ್ಷರಸ್ಥೆಯಾಗಿ, ನೆನಪಿನ ಶಕ್ತಿಯನ್ನೇ ಬಂಡವಾಳವಾಗಿಟ್ಟುಕೊಂಡು ಸಾವಿರಾರು ಹಾಡು ಹೇಳುವ, ಕಟ್ಟುವ ಆಕೆಯದು ನಿಷ್ಕಳಂಕ. ನಿರ್ಭಿಡೆಯ ಸರಳ ವ್ಯಕ್ತಿತ್ವ. ಬಡತನ, ಮಕ್ಕಳಿಲ್ಲದ ನೋವುಗಳನ್ನು ಹಾಡುವ ಮೂಲಕ ಮರೆಯುವ, ಹಾಡುಗಳನ್ನೇ ತನ್ನೆದೆಯ ಸಂಗಾತಿಗಳನ್ನಾಗಿ ಮಾಡಿಕೊಂಡ ಸುಕ್ರಿ ಪ್ರಶಸ್ತಿ, ಮೊತ್ತಗಳ ಕಡೆ ಗಮನ ಹರಿಸದ ನೇರ, ಸಹಜ ನಡೆನುಡಿಯ ಹೆಣ್ಣುಮಗಳು.
ಸುಕ್ರಿ ಹಾಲಕ್ಕಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ತಮ್ಮ ವೇಷಭೂಷಣಗಳಿಂದ ಥಟ್ಟನೆ ಎಲ್ಲರನ್ನು ಸೆಳೆವ ಹಾಲಕ್ಕಿ ಸುಪರಿಚಿತ ಬುಡಕಟ್ಟು ಸಮುದಾಯ. ಸುಕ್ರಿ ಬಗೆಗೆ ತಿಳಿಯುವ ಮೊದಲು ಅವರ ಸಮುದಾಯದ ಹಿನ್ನೆಲೆಯನ್ನು ಕೊಂಚ ತಿಳಿಯಬೇಕು. ಕರ್ನಾಟಕದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ ಅನೇಕ ಬುಡಕಟ್ಟುಗಳನ್ನು ಹೊಂದಿದೆ. ಹಾಲಕ್ಕಿ ಒಕ್ಕಲಿಗ, ಕರೆಒಕ್ಕಲರು. ಗಾಮೊಕ್ಕಲು, ಸಿದ್ದಿ, ಮರಾಟಿ, ಮರಾಟ ಕುಣಬಿ, ಗೌಳಿ, ಹಸ್ಲರು, ಗೊಂಡ – ಹೀಗೇ ಉತ್ತರ ಕನ್ನಡ ಜಿಲ್ಲೆಯ ಗುಡ್ಡ-ಬೆಟ್ಟ-ಗದ್ದೆ-ತೀರಗಳಲ್ಲಿ ಹರಡಿಕೊಂಡ ಹಲವು ಬುಡಕಟ್ಟು ಸಮುದಾಯಗಳಿವೆ. ಇಂಥವುಗಳಲ್ಲಿ ತನ್ನ ವಿಶಿಷ್ಟ ವೇಷಭೂಷಣಗಳಿಂದ, ಭಾಷೆಯಿಂದ ಥಟ್ಟನೆ ಗಮನ ಸೆಳೆಯುವವರು ಹಾಲಕ್ಕಿ ಒಕ್ಕಲಿಗರು. ಕೆಲವು ಬುಡಕಟ್ಟುಗಳು ಊರಿನಿಂದ, ಇತರ ಜನಸಮುದಾಯಗಳಿಂದ ದೂರವಾಗಿ ಕಾಡುಗಳಲ್ಲಿ ಜೀವಿಸುತ್ತಿದ್ದರೆ ಹಾಲಕ್ಕಿ ಸಮುದಾಯ ತಮ್ಮದೇ ಕೊಪ್ಪ ಹಾಡಿಗಳಲ್ಲಿ ಗುಂಪುಗುಂಪಾಗಿ ಗದ್ದೆ ತೋಟಗಳ ಒಡೆಯರಾಗಿ, ಸಮುದ್ರ ತೀರದ ಉಪ್ಪಿನ ಗದ್ದೆಗಳ ಒಡೆಯರಾಗಿ, ಉಳಿದ ಜನ ಸಮುದಾಯಗಳ ಜೊತೆಗೇ ಬದುಕುತ್ತಿದ್ದಾರೆ. ತುರುಬು ಕಟ್ಟಿಕೊಂಡ, ಮೂಗು, ಕಿವಿ, ಕುತ್ತಿಗೆ, ಕೈಕಾಲುಗಳಿಗೆ ಕಂಚಿನ ಆಭರಣ ತೊಟ್ಟು ಮಣಿಸರ ಮಾಲೆ ಧರಿಸಿದ, ಕುಪ್ಪಸವಿಲ್ಲದ `ಗೇಟಿ’ ಸೀರೆಯುಟ್ಟ ಗೌಡ್ತಿಯರು ತೋಟ, ಗದ್ದೆಗಳಲ್ಲಿ ಕೆಲಸ ಮಾಡುತ್ತಲೋ, ಮಾರುಕಟ್ಟೆಯಲ್ಲಿ ದೇಸಿ ಉತ್ಪನ್ನ ಮಾರುತ್ತಲೋ ಇರುವುದನ್ನು ಕಾಣಬಹುದು. ಹಾಲಕ್ಕಿ ಸಮುದಾಯವೇ ಶ್ರಮಜೀವನಕ್ಕೆ ತಮ್ಮನ್ನು ಒಗ್ಗಿಸಿಕೊಂಡ ಕೃಷಿಕ ಸಮುದಾಯ. ಶ್ರಮವನ್ನು, ಬಡತನದ ದೈನಂದಿನ ಕಷ್ಟವನ್ನು ಮರೆಯಲೋ ಎಂಬಂತೆ ಪ್ರತಿ ನಡೆ, ರೀತಿ, ರಿವಾಜು, ಆಚರಣೆಗಳಿಗೂ ಹಾಡು ಕಟ್ಟಿಕೊಂಡಿರುವ ಸಮುದಾಯ.
ಸುಕ್ರಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸಿರಕುಳಿಯಲ್ಲಿ ಶುಕ್ರವಾರ ಹುಟ್ಟಿದಾಕೆ. `ಜಾನಪದ ಕೋಗಿಲೆ’ ಎಂಬ ಬಿರುದಿಗೆ ಅನ್ವರ್ಥ ನಾಮವಾದ ಸುಕ್ರಿ, ದೇವಿ ಮತ್ತು ಸುಬ್ಬ ಗೌಡ ಇವರ ಆರು ಮಕ್ಕಳಲ್ಲಿ ಮೂರನೆಯ ಮಗಳು. ಆಕೆಯ ಅಕ್ಕ ಹೊಸಬಿ, ಅಣ್ಣ ಕರಿಯ ಮತ್ತು ಸಣ್ಣು, ತಂಗಿ ಆಯಮ್ಮ, ತಮ್ಮ ಮಂಗು. ಎಲ್ಲ ಹೆಸರುಗಳೂ ಅವರು ಹುಟ್ಟಿದ ವಾರಕ್ಕೆ ತಕ್ಕುದಾಗಿ ಇಟ್ಟುವಂತೆ. ತುಂಬಿದ ಕುಟುಂಬದಲ್ಲಿ ಹುಟ್ಟಿದ ಸುಕ್ರಿಗೆ ಹೊಟ್ಟೆ ಅರೆಯಾದರೂ ಬಾಯಿ ತುಂಬ ಹಾಡಿಗೆ, ಕೈ ತುಂಬ ಕೆಲಸಕ್ಕೆ ಕಷ್ಟವಿರಲಿಲ್ಲ. ಕೆಲಸವೇ ಮುಖ್ಯವಾಗಿ ಶಾಲೆ ಕಲಿಯಲಿಲ್ಲ. `ಆಗ ಈಗಿನಂಗಲ್ಲ. ಆ ಸುತ್ತು ಎಲ್ಲೂ ಶಾಲಿನೇ ಇರ್ನಿಲ್ಲ. ದೂರದ ಒಂದ್ ಸಾಲಿಗೆ ಹುಡುಗೇರು ಹೋಗ್ತಿರ್ಲಿಲ್ಲ.’ ಶಾಲೆಗೆ ಹೋಗದ ಬಾಲೆ ಸುಕ್ರಿ ತನ್ನ ತಾಯಿ, ಅಜ್ಜಿ ಹಾಗೂ ಕೇರಿಯ ಇನ್ನಿತರ ಹೆಣ್ಣುಮಕ್ಕಳೊಡನೆ ಕೆಲಸ ಗೇಯುವಾಗ ಕಲಿತದ್ದು ಹಾಡು ಹೇಳುವುದನ್ನೇ. ಕಟ್ಟಿಗೆ ತರಲು ಹೋಗುವಾಗ, ಕಳೆ-ನೆಟ್ಟಿ-ಕೊಯ್ಲಿನ ಸಮಯದಲ್ಲಿ ಹೆಂಗಸರು ಹೇಳುತ್ತಿದ್ದ ಹಾಡನ್ನೆಲ್ಲ ಗಮನವಿಟ್ಟು ಕೇಳಿಸಿಕೊಂಡ ಸುಕ್ರಿ ಅವನ್ನೆಲ್ಲ ನಂತರ ಸುಮ್ಮನೆ ಕುಳಿತಾಗ, ನಿಂತಾಗ, ನಡೆವಾಗ, ದನ ಮೇಸುವಾಗ, ಭತ್ತ ಮೆರೆಯುವಾಗಲೆಲ್ಲ ಹೇಳಿ ಮರೆಯದಂತೆ ಮನದಟ್ಟು ಮಾಡುತ್ತಿದ್ದಳು. ಹೀಗೆ ಹಾಡು ಹೇಳಿದರೆ ತನ್ನ ತಾಯಿಗೆ ತುಂಬ ಖುಷಿಯಾಗುತ್ತಿತ್ತೆಂದು ಸುಕ್ರಿ ನೆನೆಯುತ್ತಾರೆ.
ಅತಿ ಬಡತನದಲ್ಲಿ ಹುಟ್ಟಿ ಬೆಳೆದ ಸುಕ್ರಿ ಆ ದಿನಗಳನ್ನು ಹೆಜ್ಜೆಗೊಮ್ಮೆ ನೆನಪಿಸಿಕೊಳ್ಳುತ್ತಾರೆ. ಒಂದು ಹೊರೆ ಕಟ್ಟಿಗೆಗೆ ಬರಿಯ ನಾಕಾಣೆ ಸಿಗುತ್ತಿದ್ದ, ದಿನದ ದುಡಿಮೆಗೆ ಹನ್ನೆರೆಡಾಣೆ ಸಿಗುತ್ತಿದ್ದ ಕಾಲವದು. ಜನರ ಬಳಿ ದುಡ್ಡಿರಲಿಲ್ಲ. ಬರೀ ಒಂದು ಕಾಯಿಕಡಿಗೆ ಒಂದು ದಿನ ಕಳೆ ತೆಗೆದಿದ್ದೂ ಉಂಟಂತೆ. ತನ್ನ ತಾಯಿ ಆರು ಮಕ್ಕಳ ಹೊಟ್ಟೆ ತುಂಬಲು ಪಟ್ಟ ಪಾಡು ನೆನೆಪಿಸಿಕೊಂಡು ಕಣ್ಣು ತುಂಬಿಕೊಳ್ಳುವ ಸುಕ್ರಿಯ ಪ್ರಕಾರ ಆಗಿಗೆ ಹೋಲಿಸಿದರೆ ಈಗಿನದು ಸುಖದ ಜೀವನ. `ಒಡೇರ ಮನೆ ಗದ್ದೆ ಗೇಣಿಗೆ ತಕ್ಕಂಡು ಗೇಯ್ದರೆ ಒಂದೆಕರೆಗೆ ನಾಕು ಖಂಡುಗ ಭತ್ತ ಗೇಣಿ ಕೊಡ್ಬೇಕು. ಲೆವಿ ಕೊಡಬೇಕು. ಎಂಥಾದ್ದು ಉಳೀತದೆ? ಇಡೀ ವರ್ಷ ಗೇಯ್ದರೂ ಮನೆ ಮಂದಿ ಉಪಾಸ ಬಿದ್ದು, ಗಂಜಿಲ್ದೆ ಎಷ್ಟೋ ದಿನ ಮನಗಿದ್ದಿದೆ. ದಿನ್ಕರ ದೇಸಾಯರು ನಮ್ಗೆ ಗದ್ದೆ ಕೊಡ್ಸಿ ಅನ್ನ ಕೊಡ್ಸಾರೆ, ರೈತ್ರ ಕೆಲ್ಸ ಮಾಡಾರೆ’ ಎಂದು ಮನದುಂಬಿ ನೆನೆಯುತ್ತಾರೆ.
ಸುಕ್ರಿಗೆ 12 ವರ್ಷವಾದಾಗ ಮದುವೆಯಾಯಿತು. ಆಕೆ ಗಂಡನಾಗುವವನನ್ನು ನೋಡಿರಲಿಲ್ಲ. ಅವಳ ತಾಯ್ತಂದೆಯರೂ ನೋಡಲಿಲ್ಲ. ಅವರೂ ಬಂದು ಹುಡುಗಿಯನ್ನು ನೋಡಲಿಲ್ಲ. ಪರಸ್ಪರರನ್ನು ತಿಳಿದಿದ್ದ ಹಿರಿಯರು ನಿಶ್ಚಯಿಸಿದ ಮದುವೆ ಅದು. `ಆಗ ಹೆಣ್ ಮಕ್ಕಳು ಇರ್ನಿಲ್ಲ. ಹಂಗಾಗಿ ಗಂಡಿಗೆ ಎಷ್ಟ್ ವರ್ಷಾದ್ರೂ ಹೆಣ್ಣೇ ಸಿಕ್ತಿರ್ಲಿಲ್ಲ. ಹೆಣ್ ಬೇಕಾದ್ರೆ ತೆರ ಕೊಡೋರು. ಮೂರು ಖಂಡುಗ ಅಕ್ಕಿ, 10 ಸೀರಿ, 20 ಚೌಕ್ಳಿ ಮುಂಡ, ನೂರು ಕಾಯು, ಒಂದ್ ಬೆಲ್ಲದ ಕೊಡಪಾನ, ಎರಡು ಬಾಳೆ ಹೊರೆ – ಹಿಂಗೇ.. ತಮ್ಮ ಶಕ್ತಿಗೆ ತಕ್ಕಂತೆ ತೆರ ಕೊಟ್ಟು ಹೆಣ್ಣನ್ನು ಒಯ್ಯಬೇಕಾದ ಪರಿಸ್ಥಿತಿ.’ ಇಂಥ ಕಾಲದಲ್ಲಿ 12 ವರ್ಷದ ಸುಕ್ರಿ 40 ವರ್ಷದ ಬೊಮ್ಮ ಗೌಡರನ್ನು ವಿವಾಹವಾಗಿ ಬಡಗೆರೆಗೆ ಹೋದಳು. ಅಲ್ಲಿ ಅವಳಿಗೆ ಅತ್ತೆ ಮಾವರಿರಲಿಲ್ಲ. ಗಂಡ, ಅವನ ಅಣ್ಣ ಅತ್ತಿಗೆ ಮಾತ್ರ. ಮದುವೆಯಾದದ್ದೇ ಗಂಡನ ಮನೆಗೆ ಹೋದಳು. ಅಲ್ಲಿ ಪಾತ್ರೆ, ಕಸ ಬಳಿಯುವುದು, ಕಟ್ಟಿಗೆ, ಒಳಗಿನ ಕೆಲಸ, ಹೊರಗಿನ ಕೆಲಸ ಮಾಡಿಕೊಂಡು ದಿನ ಕಳೆಯುತ್ತಿತ್ತು. ಹೋದ ಆರು ವರ್ಷದ ನಂತರ ದೊಡ್ಡವಳಾಗಿ, ದೊಡ್ಡವಳಾದ ಮರುವರ್ಷವೇ ಮಗುವಾಗಿ 20 ದಿನವಿದ್ದು ತೀರಿಕೊಂಡಿತು. ನಂತರ ಸುಕ್ರಿಗೆ ಮಕ್ಕಳಾಗಲಿಲ್ಲ.
25 ವರ್ಷದವರಾಗಿದ್ದಾಗ ಸುಕ್ರಿ ಮೊದಲ ಬಾರಿ ಮನೆಯಿಂದ ಹೊರಗೆ ಹೊರಟಿದ್ದು. ತವರುಮನೆಯಿಂದ ಬರೀ ಒಂದೂವರೆ ಮೈಲು ದೂರದ ಗಂಡನ ಮನೆಗೆ ಬಂದರೆ ಯಾವ ದಿಕ್ಕು ಬಂದೆ ಎಂದೇ ಗೊತ್ತಾಗಲಿಲ್ಲವಂತೆ. ಮೊದಲ ಸಲ ಆಕಾಶವಾಣಿಯಲ್ಲಿ ಸಂದರ್ಶನ ಮಾಡಿ ನಿಮ್ಮ ಗಂಡನ ಮನೆಗೂ ತವರುಮನೆಗೂ ಎಷ್ಟು ಕಿಲೋಮೀಟರ್ ಎಂದು ಕೇಳಿದರೆ ಅವರಿಗೆ ಏನು ಕೇಳುತ್ತಿದ್ದಾರೆಂದೇ ತಿಳಿಯಲಿಲ್ಲ. ಕಿಲೋಮೀಟರ್ ಎಂಬ ಪದವೇ ಅವರಿಗೆ ಪರಿಚಯವಿರಲಿಲ್ಲ. ಇಂಥ ಮುಗ್ಧ ಹೆಣ್ಣುಮಗಳು ಮೊದಮೊದಲು ತಿರುಪತಿ ಹಾಡು, ಮದುವೆ ಹಾಡು, ತಾರ್ಲೆ ಹಾಡು, ಸುಗ್ಗಿಹಾಡುಗಳಿಂದ ಜನಪ್ರಿಯರಾದರು. ಊರುಕೇರಿಗಳ ಯಾವುದೇ ಕಾರ್ಯವೂ ಸುಕ್ರಿಯ ಹಾಡಿಲ್ಲದೆ ನಡೆಯುವಂತಿಲ್ಲ ಎನ್ನುವಂತಾಯಿತು. ಆಗ ಸುಕ್ರಿಗೆ ಪರಿಚಯವಾದವರು ಮಹಾಲೆ ಸೋದರರು. ಜಾನಪದ ಅಕಾಡೆಮಿ ಸದಸ್ಯರಾಗಿದ್ದ ಗೋವಿಂದ ಮಹಾಲೆಯವರೇ ತನ್ನನ್ನು ಮೊದಲು ಆಕಾಶವಾಣಿಗೆ, ದೂರದರ್ಶನಕ್ಕೆ ಕರೆದೊಯ್ದವರು ಎಂದು ಸುಕ್ರಿ ಕೃತಜ್ಞತೆಯಿಂದ ನೆನೆಯುತ್ತಾರೆ. ಅಂಕೋಲಾ ಅಂಬಾರಕೊಡ್ಲದ ವಿಷ್ಣು ನಾಯ್ಕ (ವಿಷ್ಣು ಮಾಸ್ತರು), ಎನ್. ಆರ್. ನಾಯ್ಕ್, ಶ್ರೀಪಾದ ಶೆಟ್ಟಿ, ಬೆಂಗಳೂರಿನ ಜಾನಪದ ಲೋಕದ ಎಚ್. ಎಲ್. ನಾಗೇಗೌಡ, ಹಿ.ಚಿ.ಬೋರಲಿಂಗಯ್ಯ – ಹೀಗೆ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಂದಿನ ಇಂದಿನ ಹಲವರು ಸುಕ್ರಿಗೆ ಪರಿಚಯವಾದರು. ಅವರಿಗೆಲ್ಲ ತನ್ನ ಸ್ನೇಹಮಯ, ನಿಗರ್ವಿ, ನಿರ್ಭಿಡೆಯ ವ್ಯಕ್ತಿತ್ವದಿಂದ, ತನ್ನಲ್ಲಿದ್ದ ನೂರಾರು ಹಾಡುಗಳ ಸಂಗ್ರಹದಿಂದ ಸುಕ್ರಿ ದೊಡ್ಡ ನಿಧಿಯಂತೆ ಕಾಣಿಸತೊಡಗಿದರೆ; ತಾನು ಕಲಿತ ಹಾಡಿಗೆ ಇಷ್ಟೆಲ್ಲ ಬೆಲೆಯಿದೆಯೇ ಎಂಬ ವಿಷಯ ಸುಕ್ರಿಗೆ ಅಚ್ಚರಿಯನ್ನೂ, ಹೆಮ್ಮೆಯನ್ನೂ ತಂದಿತು.
`ಮನಸಿನಾಗೆ ಅದೇನೇನ್ ಮಾಡಬೇಕಂತಿದೆಯೋ, ಏನೇನ್ ಮಾಡಕಾಗುತ್ತೋ, ಅದನೆಲ್ಲ ಮಾಡ್ಬೇಕು. ಏನೂ ಇಟ್ಕಬಾರ್ದು’ ಎನ್ನುವುದು ಸುಕ್ರಿಯ ತತ್ವ. ಸುಕ್ರಿ ಮಾಡುತ್ತಿರುವುದೂ ಅದನ್ನೇ. ಈ ಎಪ್ಪತ್ತರ ಮಾಗಿದ ವಯಸ್ಸಿನಲ್ಲಿಯೂ ದಿನಕ್ಕೊಂದು ಉದ್ಘಾಟನೆ, ಪ್ರಾರ್ಥನೆ, ಪ್ರಶಸ್ತಿ, ಆಕಾಶವಾಣಿಗೆ ಹಾಡು, ಮನವಿ ಪತ್ರ ಸಮರ್ಪಣೆ, ಪ್ರತಿಭಟನೆ ಎಂದು ಎಲ್ಲೆಡೆ ತಿರುಗಾಡುವ ಸುಕ್ರಿಗೆ ಈ ಮನೋಭಾವವೇ ಆಂತರ್ಯದ ಶಕ್ತಿಯಾಗಿ ಪೊರೆಯುತ್ತಿದೆ. ಎಚ್.ಎಲ್.ನಾಗೇಗೌಡರನ್ನು ಮನತುಂಬಿ ನೆನೆಯುವ ಸುಕ್ರಿ, `ದಂಟಿನ ಮೇಲೆ ಹೋಗೂ ತನ್ಕ ಕರೆದಲ್ಲಿ ಹೋಗಿ ಬರಬೇಕು. ನಾಲ್ಕು ಜನ್ರ ಹೆಗಲ ಮ್ಯಾಲೆ ಹೋಗೂ ತನಕ ಹಾಡು ಹಾಡ್ಬೇಕು’ ಎಂದು ಅವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ.
ಯಾವ ಮೆರವಣಿಗೆ, ಯಾತ್ರೆ, ಜ್ಯೋತಿ ಉತ್ತರ ಕನ್ನಡಕ್ಕೆ ಬಂದರೂ ಅಲ್ಲಿ ಸುಕ್ರಿ ಇರಬೇಕು. ಸುಕ್ರಿಗೆ `ಬ್ರ್ಯಾಂಡ್ ಅಂಬಾಸಿಡರ್’ ಸ್ಟೇಟಸ್ ಸಿಕ್ಕಿದೆ. ಉತ್ತರ ಕನ್ನಡವಷ್ಟೇ ಅಲ್ಲ, ಕರ್ನಾಟಕ ಜಾನಪದ ಕ್ಷೇತ್ರಕ್ಕೂ ಸುಕ್ರಿ ಪರಿಚಿತರೇ. ಅವರ ವೇಷಭೂಷಣಗಳಷ್ಟೇ ಅವರ ನಿರ್ಭಿಡೆಯ, ನಿಸ್ಸಂಕೋಚದ, ಸರಳ, ನೇರ ನಡೆನುಡಿ ಅಧ್ಯಯನಕಾರರಿಗೆ ವರವೆನ್ನಬಹುದು. ಎಷ್ಟೋ ಜಾನಪದ ಕಲಾವಿದರು ಪಂಡಿತರ, ಯೂನಿವರ್ಸಿಟಿ ದಿಗ್ಗಜರ ಮುಂದೆ ಸಂಕೋಚಗೊಂಡು ಬಾಯಿಗೆ ಬೀಗ ಹಾಕಿಕೊಂಡು ಬಿಡುತ್ತಾರೆ. ಆದರೆ ಸುಕ್ರಿ ಹಾಗಲ್ಲ. ಅವರ ಮುಂದೆ ರೆಕಾರ್ಡರ್ ಇಟ್ಟರೆ ಅಥವಾ ನೂರಾರು ಜನ ಕುಳಿತರೆ ಮುಗಿಯಿತು, ರಾತ್ರಿ ಕಳೆದು ಬೆಳಗಾಗುವ ತನಕ ಹಾಡುತ್ತಾರೆ. ಅದರ ಅರ್ಥ ವಿವರಿಸುತ್ತಾರೆ. ಬರೆದುಕೊಳ್ಳುವ ಕೈಗೆ ನೋವು ಬರಬಹುದು, ರೆಕಾರ್ಡ್ ಮಾಡಿಕೊಳ್ಳುವ ಯಂತ್ರದ ಸಾಮರ್ಥ್ಯ ಮುಗಿಯಬಹುದು, ಆದರೆ ಸುಕ್ರಿಯ ಚೇತನ ದಣಿವರಿಯದಂಥದು. `ಆಮ್ಯಾನೆ ಊಟ ಮಾಡಣ. ಮದ್ಲು ಈ ಹಾಡ್ ಬರ್ಕಳಿ’ ಎನ್ನುತ್ತಾರೆ.
ಸುಕ್ರಿ ತಿರುಗದ ಊರಿಲ್ಲ. ಭಾಗವಹಿಸದ ಸ್ಪರ್ಧೆಗಳಿಲ್ಲ. ಒಂದಾದ ಮೇಲೊಂದರಂತೆ ಸ್ಪರ್ಧೆಗಳಲ್ಲಿ ಸುಕ್ರಿಯ ಹಾಲಕ್ಕಿ ತಂಡ ಭಾಗವಹಿಸಿದೆ. ಹಾಲಕ್ಕಿ ಸುಗ್ಗಿ ಕುಣಿತ, ತಾರ್ಲೆ ಕುಣಿತ, ಗುಮಟೆ ಪಾಂಗ್‍ಗಳಷ್ಟೇ ಅಲ್ಲದೆ, ಹಾಲಕ್ಕಿ ಹಾಡುಗಳ ಸ್ಪರ್ಧೆಯಲ್ಲಿ ತಂಡವಾಗಿ ಭಾಗವಹಿಸಿದ್ದಾರೆ. ಹೀಗೆ ಹಾಲಕ್ಕಿ ಸಮುದಾಯದ ಪರಿಚಿತ ಹಾಗೂ ಎದ್ದು ಕಾಣುವ ವ್ಯಕ್ತಿಯಾಗಿ ಮನೆಮನೆಗೂ ಪರಿಚಯವಾದರು. ಬೆಂಗಳೂರು, ಮಣಿಪುರ, ವಾರಣಾಸಿ, ದೆಹಲಿ, ಪಂಢರಾಪುರ, ಪಾಲ್ಘಾಟ್, ಚೆನ್ನೈ, ತಿರುಪತಿಯನ್ನೆಲ್ಲ ಹಾಡಿನ ನೆಪದಲ್ಲಿ ಕಂಡು ಬಂದಾಕೆ ಅವರು. ದೆಹಲಿಗೆ ನಾಲ್ಕು ಬಾರಿ ಹೋಗಿ ಬಂದಿದ್ದಾರೆ. ಸಾರಾಯಿ ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಡಿಸಿ, ಎಸ್‍ಪಿ, ಇನ್ನಿತರ ಆಫೀಸರ್‌ಗಳೆದುರು ಧೈರ್ಯವಾಗಿ ಮಾತನಾಡಿದ್ದಾರೆ. `ನಿಮಗೇನ್ ಹೇಂತಿ ಮಕ್ಕಳಿಲ್ವಾ? ಅಕ್ಕ ತಂಗೇರು ಇಲ್ವಾ? ನಿಂ ಮಕ್ಳು ಮರಿ ಹಿಂಗೇ ಕುಡಕುಡದು ಸಾಯ್ತೇ ಬಿದ್ರೆ ಸುಮ್ನಿರ್ತಿರಾ ನೀವು?’ ಎಂದು ಅವರಿಗೇ ದಬಾಯಿಸಿದ್ದಾರೆ. ಸಾರಾಯಿ ವಿರೋಧಿ ಆಂದೋಲನ ಜೋರಾಗಿ ಕೊಟ್ಟೆ (ಪ್ಯಾಕೆಟ್) ಸಾರಾಯಿಯೇನೋ ಬ್ಯಾನ್ ಆಯಿತು. ಆದರೆ ಈಗ ಕಳ್ಳಭಟ್ಟಿ ಹಾವಳಿ. `ಜನ ಕಷ್ಟದ ದುಡಿಮೆ ಮಾಡಿ ಕುಡಿತಕ್ಕೆ ದುಡ್ಡು ಸುರಿಯುತ್ತಿದ್ದಾರೆ. ಈಚೀಚೆಗೆ ಸಾರಾಯಿ ವಿರೋಧಿ ಹೋರಾಟಕ್ಕೆ ಹೆಣ್ಣುಮಕ್ಕಳು ಮೊದಲಿನಂತೆ ಬರುತ್ತಿಲ್ಲ. ಗಂಡಸರಂತೂ ಮೊದಲೇ ಬರುವುದಿಲ್ಲ. ಊರೂರಿನ ಸಾರಾಯಿ ಅಂಗಡಿ ಮುಚ್ಚಿದರೂ ಬೆಲ್ಲದ ಕೊಳೆ, ಗೇರು ಹಣ್ಣಿನ ಸಾರಾಯಿ ಮಾಡಿಮಾಡಿ ಕುಡಿಯುತ್ತಿದ್ದಾರೆ’ ಎನ್ನುವುದು ಸುಕ್ರಿಯ ಅಳಲು.
ಸುಕ್ರಿ ರಾಜಕೀಯದಲ್ಲೂ ಭಾಗವಹಿಸಿದ್ದಾರೆ. ಐದು ವರ್ಷ ಪಂಚಾಯ್ತಿ ಸದಸ್ಯೆಯಾಗಿದ್ದವರು. ಒಂದು ಅವಧಿಗೆ ಅಧ್ಯಕ್ಷೆಯಾಗಿದ್ದವರು. `ಯಾರ್ಗೂ ಹೆದರ್‍ಬಾರ್ದು. ಧೈರ್ಯವಾಗೆ ನಮ್ಮೂರ್ಗೆ, ನಂ ಜನಕೆ, ಬಡವ್ರಿಗೆ ಏನ್ ಬೇಕಾಗದೆ ಅದ್ನ ಕೇಳಿ ಮಾಡಸ್ಕಬೇಕು’ ಎನ್ನುವುದು ಆಕೆಯ ಮಾತು. `ದೊಡ್ಡೋರ್ನೆ ದೊಡ್ಡ ಮಾಡ್ತಿರಿ. ಬಡವ್ರನ್ನ ದೊಡ್ಡ ಮಾಡುದು ಯಾವಾಗೆ?’ ಎಂಬ ಪ್ರಶ್ನೆಯೆಸೆದು ತಮ್ಮೂರಿನ 45 ಹುಲ್ಲಿನ ಮನೆಗಳಿಗೆ ಆಶ್ರಯ ಮನೆ ಮಂಜೂರು ಮಾಡಿಸಿಕೊಂಡರು. `ಇಡೀ ಊರ್ನಾಗೆ ನಾನೊಬ್ಳು ಸಾವ್‍ಕಾರ್ತಿ ಆದ್ರೆ ಸಾಕಾ? ಉಳಿದವ್ರು ನಮ್ಮನೆಗೆ ಬೇಡುಕೆ ಬರಬೇಕಾ? ಸಣ್ಣ ಕೊಳ್ಳದಾಗಿನ ಮೀನು ಸಣ್ಣ ಕೊಳ್ಳದಾಗೇ ಇದ್ರೆ ಸಮುದ್ರದ ಮೀನೆಲ್ಲ ಸೊಕ್ಕಿ ಬೆಳೀತಾವೆ. ಕೊಳ್ಳದ ಮೀನ್ಗೂ ಸಮುದ್ರ ತೋರ್ಸಿ’ ಎನ್ನುವ ಸುಕ್ರಿಯ ಮೊದಲ ಕಾಳಜಿ ಸರ್ವೋದಯವಷ್ಟೇ ಅಲ್ಲ, ಅಂತ್ಯೋದಯವಾಗಬೇಕೆನ್ನುವುದು. ಪ್ರಶಸ್ತಿಗಳನ್ನು ತೆಗೆದುಕೊಂಡಾದ ಮೇಲೆ ಯಾರ ಕಡೆಯೂ ಇರಬಾರದು, ಎಲ್ಲರ ಸಲುವಾಗಿ ಹೋರಾಟ ಮಾಡಬೇಕೆಂದು ಈಗ ರಾಜಕೀಯ ತ್ಯಜಿಸಿರುವುದಾಗಿಯೂ, `ಮತ್ತೂ ಜನ ಇವ್ರಲ್ಲ, ಅವ್ರು ಮುಂದೆ ಬಂದು ಕೂರ್ಲಿ’ ಎಂದೂ ಹೇಳುತ್ತಾರೆ.
ಪ್ರಶಸ್ತಿಗಳು ಒಂದಾದ ಮೇಲೊಂದು ಅವರನ್ನು ಹುಡುಕಿಕೊಂಡು ಬಂದಿವೆ. 1988ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ನವೆಂಬರ್ 1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1999ರಲ್ಲಿ `ಜಾನಪದ ಶ್ರೀ’ ಪ್ರಶಸ್ತಿ, ದೊರೆಯಿತು. ಜನವರಿ 2008ರಲ್ಲಿ ಹಂಪಿ ವಿಶ್ವ ವಿದ್ಯಾಲಯ `ನಾಡೋಜ’ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಶಸ್ತಿಗಳಾಗಲೀ, ಪ್ರಶಸ್ತಿಗಾಗಿ ಬಂದ ಮೊತ್ತವಾಗಲೀ ಸುಕ್ರಿಯನ್ನು ಬದಲಿಸಿಲ್ಲ. ತನಗೆ ಪ್ರಶಸ್ತಿ, ಹಣ, ಗೌರವ ಸಂದಾಯವಾದ ಖುಷಿಯಲ್ಲೇ ತನ್ನ ಸಮುದಾಯದವರ ಕಷ್ಟ, ನೋವೂ ಅವರನ್ನು ಬಾಧಿಸುತ್ತದೆ. ಅವಕಾಶ ಸಿಕ್ಕಾಗಲೆಲ್ಲ ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಹಾಗೆಂದು ಸ್ಥಳೀಯ ಪ್ರತಿನಿಧಿ-ಅಧಿಕಾರಿಗಳಿಂದ ಹಿಡಿದು, ಹಿಂದುಳಿದ ವರ್ಗಗಳ ಆಯೋಗಕ್ಕೂ ಮನವಿ ನೀಡಿದ್ದಾರೆ. ಸೋನಿಯಾ ಗಾಂಧಿಗೂ ಹೇಳಿ ಬಂದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕಾಗಿ ಬಂದಾಗ ಅವರು ಊಟ ಮಾಡುತ್ತಿದ್ದ ವೇಳೆ ಅವರ ಜೊತೆಯೇ ಮಾತನಾಡಿದ್ದಾರೆ.
ಹೀಗೆ ತನ್ನ ಸಮುದಾಯದ ಹಾಡುಗಳ, ಸಂಸ್ಕೃತಿಯ ಜೀವಂತ ಪ್ರತೀಕವಾಗಿರುವುದಷ್ಟೇ ಅಲ್ಲ, ಸಾರಾಯಿ ವಿರೋಧಿ ಆಂದೋಲನ, ರಾಜಕಾರಣದಲ್ಲೂ ಸಕ್ರಿಯವಾಗಿರುವ ಸುಕ್ರಿಗೆ ತಾನು ಹೆಣ್ಣು ಎಂಬ ಅಂಶ ಯಾವತ್ತೂ ಕೆಲಸಕ್ಕೆ ಅಡ್ಡಬರಲಿಲ್ಲ ಎನ್ನುತ್ತಾರೆ. ಅವರ ಪ್ರಕಾರ ಹೆಣ್ಣು ಪುರುಷನಷ್ಟೇ ಶಕ್ತಳು. ಅದನ್ನು ಅವಳೂ ನಂಬಬೇಕು. ಹೀಗೆ ನಂಬಿಕೆ ಮೂಡಿಸುವ ಒಂದು ಉಪಕರಣವಾಗಿ ಮಹಿಳಾ ಮೀಸಲಾತಿ ಬಳಕೆಯಾಗಬೇಕು. ಎಲ್ಲ ಅವಕಾಶಗಳೂ ಮುಕ್ತವಾಗಿದ್ದು, ಅದಕ್ಕೆ ಹೆಣ್ತನವೆಂಬುದು ತೊಡಕಾಗದಿದ್ದರೆ, ಮಹಿಳೆ ಕೂಡಾ ಕುಟುಂಬದ ಗೌರವ, ನಿರ್ಧಾರದ ಗಳಿಗೆಗಳಲ್ಲಿ ಪಾಲ್ಗೊಳ್ಳುವಂತಾದರೆ ಅದು ನಿಜವಾದ ಸಬಲೀಕರಣ. ಹೆಣ್ಣು ಬರೀ ವ್ಯಕ್ತಿಯಾಗದೇ ಸಮಾಜದ ಭಾಗವೂ ಆಗಬೇಕು. ತಾನು ಬಿಡುಗಡೆ ಪಡೆಯುತ್ತಲೇ ತನ್ನ ಸುತ್ತಮುತ್ತ ಉಂಡುಡುವುದರಲ್ಲೇ ತೃಪ್ತಿ ಕಾಣುವವರನ್ನು ಎಚ್ಚರಿಸಿ ಬದುಕಬೇಕು. ಈ ಹಿನ್ನೆಲೆಯಲ್ಲಿ ಸುಕ್ರಿಯಂಥವರು ಎಲ್ಲ ಸಮುದಾಯದವರಿಗೂ ಸ್ಪೂರ್ತಿಯ ಪ್ರತೀಕವಾಗಿ ಕಾಣುತ್ತಾರೆ.
ಆಕೆಯಂತೇ, ಆಕೆಯಷ್ಟೇ ಹಾಡು ಹೇಳುವ ಇನ್ನೂ ಎಷ್ಟೋ ಜನ ಅವರ ಸಮುದಾಯದಲ್ಲಿರಬಹುದಾದರೂ ಸುಕ್ರಿ ಹಲವು ಕಾರಣಗಳಿಗೆ ಮುಖ್ಯವಾಗುತ್ತಾರೆ. ಯಾವ ಹಿಂಜರಿಕೆ, ಕೀಳರಿಮೆಯಿಲ್ಲದೆ ತನ್ನ ಭಾಷೆಯ, ಸಮುದಾಯದ ಹಾಡುಗಳನ್ನು ಆಸ್ತಿಯೋ ಎಂಬಂತೆ ಎದೆಗೆ ಹತ್ತಿರವಾಗಿ ಕಾಪಾಡಿಕೊಂಡು ಬಂದಿರುವುದರಿಂದ; ಸುತ್ತಮುತ್ತಲ ಶಾಲೆಯ ಮಕ್ಕಳಿಗೆ ಆ ಹಾಡುಗಳನ್ನು ಹೇಳಿಕೊಡುತ್ತಿರುವುದರಿಂದ; ಬರಿಯ ಹಾಡಷ್ಟೇ ಅಲ್ಲ, ಹಾಡು ಹೇಳುವಿಕೆ ತನಗೆ ದೊರಕಿಸಿದ ಅನನ್ಯತೆಗೆ, ಪ್ರಸಿದ್ಧಿಗೆ ಕಳೆದು ಹೋಗದೇ ಆ ಪ್ರಭಾವವನ್ನು ಸಮಾಜಮುಖಿ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವ ಕಾರಣದಿಂದ ಆಕೆ ಮುಖ್ಯವಾಗುತ್ತಾರೆ. ಹೋಳಿಹುಣ್ಣಿಮೆಯ ಆಸುಪಾಸು ಹಾಲಕ್ಕಿ ತರುಣರು ಸುಗ್ಗಿ ವೇಷ ಕಟ್ಟಿ ತಂಡೋಪತಂಡವಾಗಿ ತಿರುಗಲು ಹೊರಡುವವರು ಹಳೆಯ ಸಂಪ್ರದಾಯದ ಹಾಡುಗಳನ್ನು ಬಿಟ್ಟು ಈಗ ಹೊಸ ಕ್ಯಾಸೆಟ್ ಹಾಡುಗಳಿಗೆ ಹೆಜ್ಜೆ ಹಾಕತೊಡಗಿದ್ದಾರೆ. ಸುಕ್ರಿ ತಮ್ಮ ಸಮುದಾಯದವರಿಗೆ ಮರೆತ ಹಾಡುಗಳನ್ನು ನೆನಪು ಮಾಡಿಕೊಡುವ, ತಮ್ಮ ಸಂಸ್ಕೃತಿಯ ಬಗೆಗೆ ಹೆಮ್ಮೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಆ ಹಾಡುಹಕ್ಕಿ ಇನ್ನಷ್ಟು ಮೊಟ್ಟೆಗಳಿಗೆ ಕಾವುಕೊಟ್ಟು ಮರಿಮಾಡಿ ಹಾರಿಸಬೇಕಾಗಿದೆ. ಇದೇ ಜಾನಪದ ಆಸಕ್ತರ ಹಾರೈಕೆಯಾಗಿದೆ.
(2011ರಲ್ಲಿ ಬರೆದದ್ದು)
ಡಾ. ಎಚ್.ಎಸ್.ಅನುಪಮಾ
ಫೋ: 9480211320
ಇದನ್ನೂ ಓದಿ – ಪದ್ಮಶ್ರೀ ಪುರಸ್ಕೃತೆ ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ನಿಧನ