ಪಣಜಿ: ಗೋವಾದ ಪಣಜಿಯಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಮೆರಿಕ ಮೂಲದ ಯುವತಿ ಅಸ್ವಸ್ಥಗೊಂಡಿದ್ದರು. ವೃತ್ತಿಯಿಂದ ವೈದ್ಯೆಯೂ ಆಗಿರುವ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು, ಯುವತಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವಲ್ಲಿ ಸಫಲರಾಗಿದ್ದಾರೆ.
ಅಮೆರಿಕ ಮೂಲದ ಯುವತಿ ಮತ್ತು ಡಾ.ಅಂಜಲಿ ನಿಂಬಾಳ್ಕರ್ ಇಬ್ಬರೂ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಯುವತಿಗೆ ಇದ್ದಕ್ಕಿದ್ದಂತೆ ಕೈ ಕಾಲುಗಳಲ್ಲಿ ನಡುಕ ಉಂಟಾಗಿ ಮೂರ್ಛೆ ಹೋಗಿದ್ದಳು. ನಾಡಿ ಮಿಡಿತವೂ ನಿಂತುಹೋಗಿತ್ತು.
ಕೂಡಲೇ ಅಂಜಲಿ ಅವರು, ಶ್ವಾಸಕೋಶದ ಮೇಲೆ ಎರಡೂ ಕೈಗಳನ್ನಿಟ್ಟು ಉಸಿರಾಟವನ್ನು ಸರಾಗ ಮಾಡಿದ್ದಾರೆ. ನಂತರ ಆಕೆ ಉಸಿರಾಡಲು ಆರಂಭಿಸಿದ್ದಾಳೆ. ಮತ್ತೆ ಅರ್ಧಗಂಟೆಯಲ್ಲಿ ಯುವತಿ ಮತ್ತೆ ಕುಸಿದುಬಿದ್ದಿದ್ದಾಳೆ. ಆಗಲೂ ಅಂಜಲಿ ನಿಂಬಾಳ್ಕರ್ ಅವರು ಪ್ರಥಮ ಚಿಕಿತ್ಸೆ ನೀಡಿ ಸಹ ಪ್ರಯಾಣಿಕರ ಜೀವ ಉಳಿಸಿದ್ದಾರೆ.
ವಿಮಾನವು ದೆಹಲಿ ತಲುಪುವವರೆಗೂ ಯುವತಿಯ ಪಕ್ಕದಲ್ಲೇ ಕುಳಿತು ಆಕೆಯ ಆರೈಕೆ ಮಾಡಿದ್ದಾರೆ. ವಿಮಾನ ದೆಹಲಿ ಏಋ ಪೋರ್ಟ್ ತಲುಪುತ್ತಿದ್ದಂತೆ ಅಂಬುಲೆನ್ಸ್ ಸಿದ್ಧವಿದೆಯೇ ಎಂಬುದನ್ನ ಖಚಿತಪಡಿಸಿಕೊಂಡು ತಕ್ಷಣ ಆಕೆಯನ್ನ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಅಂಜಲಿ ನಿಂಬಾಳ್ಕರ್ ಅವರ ಪ್ರಯತ್ನಕ್ಕೆ ಸಹ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

