ಬೆಂಗಳೂರು: ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ರಾಜೀನಾಮೆ ನೀಡಿಲ್ಲ, ಬದಲಾಗಿ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ. ಇಂದು ಬೆಳಗ್ಗೆ ಪಕ್ಷದ ವರಿಷ್ಠ ರಾಜ್ಯ ಉಸ್ತುವಾರಿ ರಣ್ ದೀಪ್ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ರಾಜಣ್ಣ ಅವರಿಂದ ರಾಜೀನಾಮೆ ಪಡೆದುಕೊಳ್ಳಬಾರದು, ಬದಲಾಗಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲು ಸೂಚನೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿಗಳು ರಾಜಭವನಕ್ಕೆ ಪತ್ರ ಬರೆದಿದ್ದರು. ಆ ಮೂಲಕ ರಾಜಭವನ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ಅಧಿಕೃತವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಅವರೂ ಸಹ ತಮ್ಮ ಪರಮಾಪ್ತ ರಾಜಣ್ಣ ಅವರನ್ನು ಸಂಪುಟದಲ್ಲಿ ಉಳಿಸಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಅಂತಿಮವಾಗಿ ರಾಜೀನಾಮೆ ಪಡೆಯಲು ನಿರ್ಧರಿಸಿದ್ದಾರೆ. ಆದರೆ ಹೈಕಮಾಂಡ್ ಈ ಬೆಳವಣಿಗೆಗೆ ಅವಕಾಶ ನIಡದೆ ವಜಾಗೊಳಿಸಲು ಆದೇಶಿಸಿದೆ.
ಕಾಂಗ್ರೆಸ್ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತ ಕಳ್ಳತನ ವಿರುದ್ಧ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುತ್ತಿದದರೆ ರಾಜಣ್ಣ ಅವರು ನಮ್ಮ ಸರ್ಕಾರದ ಅವಧಿಯಲ್ಲೇ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ ಎಂದು ಹೇಳಿಕೆ ನೀಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಚಿವರು ಮತ್ತು ಕಾಂಗ್ರೆಸ್ ಶಾಸಕರ ಸಭೆ ನಡೆಸಿದ್ದರು. ಈ ಸಭೆಗಳನ್ನೂ ರಾಜಣ್ಣ ಪ್ರಶ್ನಿಸಿ ಹೇಳಿಕೆ ನೀಡಿದ್ದರು.
.