ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನಲ್ಲಿ ನೇರ ನೇಮಕಾತಿ ಮತ್ತು ಪದೋನ್ನತಿಗಳನ್ನು ನೀಡುವಲ್ಲಿ ವಿಶೇಷವಾಗಿ ಸಂವಿಧಾನದ ಆಶಯದಂತೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಕಲ್ಯಾಣ ಕರ್ನಾಟಕದ ಮೀಸಲಾತಿ 371-ಎ ನಿಯಮಗಳಂತೆ ಪಾರದರ್ಶಕವಾಗಿ ನೇರ ನೇಮಕಾತಿ ಮತ್ತು ಪದೋನ್ನತಿಗಳನ್ನು ನೀಡಿರುವುದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.
ವಿಧಾನ ಪರಿಷತ್ತಿನ ಸಚಿವಾಲಯದಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಇತ್ತೀಚಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಐ.ಎ.ಎಸ್ ಅಧಿಕಾರಿ ಹೇಮಲತಾ ಇವರ ಅಧ್ಯಕ್ಷತೆಯಲ್ಲಿ ಪರಿಷ್ಕರಿಸಿ ನೇರ ನೇಮಕಾತಿ ಮತ್ತು ಪದೋನ್ನತಿಗೆ ಹುದ್ದೆಗಳನ್ನು ನಿಯಮಾನುಸಾರ 50:50 ಅನುಪಾತದಲ್ಲಿ ನಿಗದಿಪಡಿಸಿ ಅದರ ಆಧಾರದ ಮೇಲೆ ನೇರ ನೇಮಕಾತಿಗೆ ಮೀಸಲಾಗಿದ್ದ ಹುದ್ದೆಗಳಿಗೆ ಪರಿಷತ್ತಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆ.ಇ.ಎ) ಮೂಲಕ ಆಯ್ಕೆ ಮಾಡಲು ನಿರ್ಧರಿಸಿ, ಅತ್ಯಂತ ಪಾರದರ್ಶಕವಾಗಿ ಲಿಖಿತ ಪರೀಕ್ಷೆ ನಡೆಸಿ 1:5 ಅನುಪಾತದಲ್ಲಿ ಮೆರಿಟ್ ಪಟ್ಟಿ ಪಡೆದು 1:1 ಅನುಪಾತ ಆಯ್ಕೆ ಪಟ್ಟಿ ತಯಾರಿಸುವಲ್ಲಿ ಅನುಮಾನ ಗೊಂದಲಗಳಿಗೆ ಆಸ್ಪದ ನೀಡದಂತೆ ಮತ್ತು ಪಾರದರ್ಶಕವಾಗಿ ನಡೆಸುವ ದೃಡಸಂಕಲ್ಪದಿಂದ ಸಭಾಪತಿ ಹೊರಟ್ಟಿಯವರು ಅವರು 1:5 ಅನುಪಾತದ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲಯನ್ನು ವೃತ್ತಿ ಪರತೆಯಿಂದ ಕೈಗೊಳ್ಳಲು ಹೊರ ರಾಜ್ಯದ ಕೇಂದ್ರ ಸರ್ಕಾರ ಸ್ವಾಮ್ಯದ ಸ್ವಾಪ್ಟವೇರ್ ಟೆಕ್ನೋಲಾಜಿ ಪಾರ್ಕ ಆಫ್ ಇಂಡಿಯಾ (ಎಸ್.ಟಿ.ಪಿ.ಐ) ಅಧಿಕಾರಿಗಳನ್ನು ನಿಯೋಜಿಸಿ ತಂತ್ರಾಂಶ ಅಭಿವೃದ್ಧಿ ಸಾಮರ್ಥ್ಯ ಮತ್ತು ಗಣಕಯಂತ್ರ ಬಳಕೆ ಸಾಮರ್ಥ್ಯ ಪರೀಕ್ಷೆ ನಡೆಸಿರುವುದು ಮತ್ತು ಲಿಪಿಕ ಹುದ್ದೆಗಳಿಗೆ ಸಂಬಂಧಿಸಿದಂತೆ ನಿರ್ದೇಶಕರು, ಭಾಷಾಂತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ಇವರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿ ಲಿಖಿತ ಪರೀಕ್ಷೆ ಅಂಕಗಳನ್ನು ಮಾತ್ರ ಆಧಾರವಾಗಿಟ್ಟು ಅಂತಿಮ ಆಯ್ಕೆ ಪಟ್ಟಿ ತಯಾರಿಸುವ ಮೂಲಕ ನಡೆಸಿರುವುದು ಕಂಡು ಬಂದಿದೆ. ಮೇಲಿನ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳುವಾಗ ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಸಿರುವುದು ಅತ್ಯಂತ ಪಾರದರ್ಶಕವಾಗಿ ಮತ್ತು ವೃತ್ತಿಪರತೆಯಿಂದ ಅಂತಿಮ ಅಂಕಪಟ್ಟಿ ಸಿದ್ಧಪಡಿಸಿದ್ದು ಅದಕ್ಕೆ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ನೇಮಕಾತಿ ಆದೇಶ ಪತ್ರಗಳನ್ನು ನೀಡಿರುವುದು ಅತ್ಯಂತ ಪ್ರಶಂಸನೀಯ ಮತ್ತು ಇತರೆ ಸರ್ಕಾರಿ ಇಲಾಖೆಗಳಿಗೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿಗಳು ಸಭಾಪತಿಯವರಿಗೆ ಅಭಿನಂದನೆ ತಿಳಿಸಿದರು.
ಸದರಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದವರು ಹೆಚ್ಚಿನವರು ಗ್ರಾಮೀಣ ಪ್ರತಿಭೆಗಳು ಮತ್ತು ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ರ‍್ಯಾಂಕ್ ವಿಜೇತರು ಸೇರಿರುವದು ಅಭಿನಂದನೀಯ ಮತ್ತು ಒಬ್ಬ ಮಹಿಳಾ ಅಭ್ಯರ್ಥಿಯ ಇಬ್ಬರೂ ಪೋಷಕರು ಅಂಧರಾಗಿದ್ದು, ಅವರ ಮಗಳು ಆಯ್ಕೆಯಾಗಿರುವದಾಗಿ ಹೊರಟ್ಟಿಯವರು ಮುಖ್ಯಮಂತ್ರಿಗಳಿಗೆ ತಿಳಿಸಿದರು. ಪ್ರತಿಯಾಗಿ ಮುಖ್ಯಮಂತ್ರಿಗಳು ಅಭ್ಯರ್ಥಿಯ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸಿ ಶುಭ ಕೋರಿ ಹೊರಟ್ಟಿ ಅವರಂತಹ ಸಭಾಪತಿಗಳು ಇದ್ದಲ್ಲಿ ಇಂತಹ ಆಯ್ಕೆಗಳು ಆಗಬಹುದಾಗಿದೆ ಎಂದು ಹೆಮ್ಮೆಯಿಂದ ತಿಳಿಸಿದರು.
ಇದೇ ರೀತಿ ಹಲವಾರು ಆಡಳಿತಾತ್ಮಕ ಕಾರಣಗಳಿಂದ ವರ್ಷಗಟ್ಟಲೇ ಪದೋನ್ನತಿಯಿಂದ ವಂಚಿತರಾಗಿರುವ ಪರಿಷತ್ ಅಧಿಕಾರಿಗಳು ಹಾಗೂ ನೌಕರರಿಗೆ ವಿಶೇಷವಾಗಿ ಸಂವಿಧಾನದ ಆಶಯದಂತೆ ಅನುಚ್ಛೇದ-16ರಲ್ಲಿ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು, ಅನುಚ್ಛೇದ 371-ಎ ರಡಿ ಕಲ್ಯಾಣ ಕರ್ನಾಟಕ ಮೀಸಲಾತಿಯಡಿ ಪದೋನ್ನತಿ ನೀಡುವಲ್ಲಿ ಪದೇ-ಪದೇ ಆಡಳಿತಾತ್ಮಕ ಗೊಂದಲಗಳನ್ನು ಸೃಷ್ಠಿಸಿ ಪದೋನ್ನತಿ ಪ್ರಕ್ರಿಯೆ ಮುಂದೂಡುತ್ತಿರುವದನ್ನು ಗಮನಿಸಿ ಪ್ರಥಮ ಬಾರಿಗೆ ಇಲಾಖೆಯೇತರ ಉನ್ನತ ಅಧಿಕಾರಿ ಗೌರವ ಗುಪ್ತಾ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಆPಅ) ರಚಿಸಿ ಅತ್ಯಂತ ಪಾರದರ್ಶಕವಾಗಿ ಮತ್ತು ನ್ಯಾಯಯುತವಾಗಿ ಪದೋನ್ನತಿ ಆದೇಶಗಳನ್ನು ಸಿ.ಆ.ಸು.ಇ ಸುತ್ತೋಲೆಗಳ ಪ್ರಕಾರ ಸುಮಾರು 42 ಅಧಿಕಾರಿಗಳು/ಸಿಬ್ಬಂದಿಗಳಿಗೆ ಪದೋನ್ನತಿ ನೀಡಿರುತ್ತಾರೆ.

