ಸಿದ್ದರಾಮಯ್ಯನವರನ್ನು ಮಂತ್ರಿ ಮಾಡಿದ್ದು ಮಂಜುನಾಥ ಸ್ವಾಮಿಯೂ ಅಲ್ಲಾ, ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರೂ ಅಲ್ಲಾ. ಈ ನಾಡಿನ ಬಹುಸಂಖ್ಯಾತ ದಲಿತರು, ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು. ಸಿದ್ದರಾಮಯ್ಯನವರ ಸಂಪೂರ್ಣ ನಿಷ್ಠೆ ಇರಬೇಕಾಗಿದ್ದು ಈ ಅಹಿಂದ ಸಮುದಾಯಕ್ಕೆ ಹೊರತು ಪುರೋಹಿತಶಾಹಿ ಧರ್ಮಾಧಿಕಾರಿಗಳಿಗಲ್ಲ -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಇದ್ದಕ್ಕಿದ್ದಂತೆ ಸಿದ್ದರಾಮಯ್ಯನವರು ಧರ್ಮಸ್ಥಳದ ಮಂಜುನಾಥ ದೇವರ ದರ್ಶನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರವರ ಜೊತೆಗೆ ಮೇ 25ರಂದು ಹೋದರು. ಡಿಕೆಶಿಯವರು ದೇವರ ಮೇಲೆ ಅಪಾರ ನಂಬಿಕೆ ಇಟ್ಟವರು ಹಾಗೂ ಸಂಕಷ್ಟದಲ್ಲಿ ಸಿಕ್ಕಾಗ, ಪಾಪ ಪ್ರಜ್ಞೆ ಕಾಡಿದಾಗಲೆಲ್ಲಾ ಟೆಂಪಲ್ ರನ್ ಮಾಡಿ ‘ಕಾಪಾಡು ದೇವರೇ’ ಎಂದು ಬೇಡಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಆದರೆ ಸಿದ್ದರಾಮಯ್ಯನವರು ಆ ಕೆಟಗರಿಯವರಲ್ಲ ಎಂದೇ ತಮ್ಮನ್ನು ತಾವು ಬಿಂಬಿಸಿಕೊಂಡು ಬಂದವರು. ‘ದೇವರ ಮೇಲೆ ನಂಬಿಕೆ ಇದೆಯಾದರೂ ದೇವರ ಹೆಸರಲ್ಲಿ ನಡೆಯುವ ಶೋಷಣೆ ಹಾಗೂ ಮೌಢ್ಯಾಚರಣೆಗಳನ್ನು ವಿರೋಧಿಸುತ್ತೇನೆ’ ಎಂದು ಹೇಳಿಕೊಳ್ಳುತ್ತಲೇ ಬಂದವರು. ಮಠ ಮಾನ್ಯ ಧರ್ಮಪೀಠಗಳಿಂದ ಒಂದಿಷ್ಟು ಅಂತರವನ್ನು ಕಾಪಾಡಿಕೊಂಡೇ ಬಂದವರು. ಈಗ ಇದ್ದಕ್ಕಿದ್ದಂತೆ ಎದ್ದು ದಂಡು ಕಟ್ಟಿಕೊಂಡು ಧರ್ಮಸ್ಥಳಕ್ಕೆ ಹೋಗಿದ್ದು ಅಚ್ಚರಿಯ ಸಂಗತಿಯಾಗಿದೆ.
ಚುನಾವಣೆಯ ಸಮಯದಲ್ಲಿ ದೇವಸ್ಥಾನಕ್ಕೆ ಹೋಗಿದ್ದರೆ ಮತರಾಜಕಾರಣದ ರಾಜಕೀಯ ತಂತ್ರಗಾರಿಕೆ ಎನ್ನಬಹುದಾಗಿತ್ತು. ಕರ್ನಾಟಕದಲ್ಲಿ ಮತದಾನ ಮುಗಿದಿದೆ. ದೇಶದಲ್ಲಿ ಕೊನೆಯ ಹಂತದ ಮತದಾನ ಬಾಕಿ ಇದ್ದರೂ ಸಿದ್ದರಾಮಯ್ಯನವರ ಟೆಂಪಲ್ ರನ್ ಅಲ್ಲಿ ಯಾವುದೇ ಪ್ರಯೋಜನಕ್ಕೂ ಬಾರದು. 135 ಶಾಸಕರ ಬೆಂಬಲವಿದ್ದು ಅಧಿಕಾರವೂ ಸುಭದ್ರವಾಗಿದೆ. ಆದರೂ ಈಗ ದೇವಸ್ಥಾನಕ್ಕೆ ಹೋಗಿ ಧರ್ಮಾಧಿಕಾರಿ ಕಾಲಿಗೆ ಬೀಳುವ ಅಗತ್ಯವಾದರೂ ಏನಿತ್ತು? ಪ್ರಗತಿಪರರ ನಿರೀಕ್ಷೆಗಳನ್ನು ಹುಸಿಗೊಳಿಸುವ ನಡೆ ಯಾಕೆ ಬೇಕಿತ್ತು? ಅಧಿಕಾರ ಇಲ್ಲದೇ ಇರುವಾಗಿ ಈ ಸಾಹಿತಿಗಳ ಥಿಂಕ್ ಟ್ಯಾಂಕ್ ಸಲಹೆಗಳನ್ನು ಪಡೆಯುತ್ತಿದ್ದವರು ಮುಖ್ಯ ಮಂತ್ರಿಗಳಾದ ಮೇಲೆ ಟೆಂಪಲ್ ರನ್ ದರ್ಶನಕ್ಕೆ ಯಾರ ಸಲಹೆಯನ್ನೂ ಪಡೆಯಲೇ ಇಲ್ಲ ಯಾಕೆ?
‘ದೇವರ ದರ್ಶನಕ್ಕೆ ತಾನೆ ಹೋದರೆ ಹೋಗಲಿ ಬಿಡಿ ಅದು ಅವರ ವ್ಯಕ್ತಿಗತ ನಂಬಿಕೆ’ ಎಂದು ಹೇಳುವಂತಿಲ್ಲ. ಯಾಕೆಂದರೆ ಸೌಜನ್ಯಾ ಎನ್ನುವ ಯುವತಿಯ ಮೇಲಾದ ಅತ್ಯಾಚಾರ ಹಾಗೂ ಹತ್ಯೆಯ ಪ್ರಕರಣದಿಂದ ಧರ್ಮಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರು ವಿವಾದದ ಕೇಂದ್ರವಾಗಿದ್ದಾರೆ. ಸೌಜನ್ಯ ಕೊಲೆ ಆರೋಪಿಗಳು ಧರ್ಮಾಧಿಕಾರಿಗಳ ರಕ್ತಸಂಬಂಧಿಯಾಗಿದ್ದು ಅವರನ್ನು ರಕ್ಷಿಸಲು ಹೆಗ್ಗಡೆಯವರು ತಮ್ಮ ಪ್ರಭಾವಗಳನ್ನೆಲ್ಲಾ ಬೀರಿದ್ದಾರೆ ಎನ್ನುವ ಸಂದೇಹವೂ ಜನರಿಗಿದೆ. ಸೌಜನ್ಯ ಹತ್ಯೆಯ ವಿರುದ್ಧ ನಡೆದ ಎಲ್ಲಾ ಹೋರಾಟಗಳಲ್ಲೂ ಧರ್ಮಾಧಿಕಾರಿಗಳ ಮೇಲೆಯೇ ಗುಮಾನಿ ವ್ಯಕ್ತವಾಗಿದೆ. ಪೊಲೀಸರ ಸಹಕಾರದಿಂದ ಅಮಾಯಕನೊಬ್ಬನನ್ನು ಕೊಲೆಗಾರ ಎಂದು ಬಿಂಬಿಸಿ ಇಡೀ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದರ ಹಿಂದೆ ಧರ್ಮಾಧಿಕಾರಿಗಳು ಇದ್ದಾರೆ ಎಂದು ಆರೋಪಿಸಲಾಗುತ್ತದೆ. ಅನೇಕ ಸಾಕ್ಷಿಗಳ ಮೇಲೆ ಹಲ್ಲೆ ಮಾಡಲಾಗಿದ್ದು ಹತ್ಯೆಗಳೂ ನಡೆದಿವೆ. ‘ಸೌಜನ್ಯಳಿಗೆ ನ್ಯಾಯ ಸಿಗದಂತೆ ಮಾಡಿದವರು ಯಾರು ಎಂಬುದನ್ನು ಪುರಾವೆಗಳ ಸಮೇತ ಸತ್ಯ ಹೇಳುತ್ತೇನೆ’ ಎಂದು ಹೇಳಿದ್ದ ಮಾಜಿ ಶಾಸಕ ವಸಂತ ಬಂಗೇರರವರ ಅಕಾಲಿಕ ಮೃತ್ಯುವಿನ ಹಿಂದೆ ಧರ್ಮಪೀಠದ ಕೈವಾಡವಿದೆ ಎಂದೂ ಜನರು ಮಾತಾಡಿಕೊಳ್ಳುತ್ತಿದ್ದಾರೆ. ಸೌಜನ್ಯಳ ಹೆತ್ತವರು ಧರ್ಮಾಧಿಕಾರಿಯತ್ತಲೇ ಬೆರಳು ತೋರುತ್ತಿದ್ದಾರೆ.
ಸಿದ್ದರಾಮಯ್ಯನವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ದಿನ ಮಾಜಿ ಶಾಸಕರಾಗಿದ್ದ ವಸಂತ ಬಂಗೇರರ ಕುರಿತು ನುಡಿನಮನ ಕಾರ್ಯಕ್ರಮ ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿತ್ತು. ಬೆಳ್ತಂಗಡಿ ರಸ್ತೆಯ ಮೂಲಕವೇ ಧರ್ಮಸ್ಥಳಕ್ಕೆ ಹೋದ ಸಿಎಂ ಮತ್ತು ಡಿಸಿಎಂ ಅತ್ತ ತಿರುಗಿಯೂ ನೋಡಲಿಲ್ಲ. ಮಗಳ ಸಾವು ಹಾಗೂ ಆ ನಂತರದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಗಳಿಂದ ನೊಂದ ಸೌಜನ್ಯಳ ಕುಟುಂಬದವರಿಗೆ ಸಾಂತ್ವನ ಹೇಳಲಾದರೂ ಸಿದ್ದರಾಮಯ್ಯವರು ಹೋಗಬಹುದಾಗಿತ್ತು. ಹಾಗೆ ಮಾಡಿದರೆ ಧರ್ಮಾಧಿಕಾರಿಯ ಅಸಹನೆಗೆ ಒಳಗಾಗಬಹುದು ಎಂಬ ಆತಂಕಕ್ಕೋ ಇಲ್ಲವೇ ಧರ್ಮಾಧಿಕಾರಿಗಳ ಅಂಧಾಭಿಮಾನಿ ಭಕ್ತಪಡೆಯ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕೋ ನೇರವಾಗಿ ಧರ್ಮಾಧಿಕಾರಿಗಳ ಪಾದಪದ್ಮ ಚರಣ ಕಮಲಗಳತ್ತ ಹೋದರು. ಸೌಜನ್ಯಾ ಪ್ರಕರಣದಲ್ಲಿ ಧರ್ಮಾಧಿಕಾರಿಯ ಬೆನ್ನಿಗೆ ಗಟ್ಟಿಯಾಗಿ ನಿಂತ ಕಾಂಗ್ರೆಸ್ ಮುಖಂಡ ಅಭಯಚಂದ್ರ ಜೈನ್ ಅವರ ಪಾತ್ರವನ್ನೂ ಇಲ್ಲಿ ನಿರಾಕರಿಸುವಂತಿಲ್ಲ. ಅನ್ಯಾಯಕ್ಕೊಳಗಾದವರನ್ನು ಸಂತೈಸುವುದು ರಾಜ್ಯದ ಮುಖ್ಯಮಂತ್ರಿಗಳಾದವರ ಕರ್ತವ್ಯವಾಗಿದ್ದರೂ ಅದನ್ನು ಮರೆತು ದೇವರ ಮೊರೆಹೋದ ಸಿದ್ದರಾಮಯ್ಯವರ ನಡೆ ಪ್ರಶ್ನಾರ್ಹವಾಗಿದೆ.
ಧರ್ಮಸ್ಥಳವೆನ್ನುವುದು ಸೌಜನ್ಯಳ ಸಾವಿನ ಸೂತಕದಲ್ಲಿ ಬೇಯುತ್ತಿದೆ. ಸೌಜನ್ಯಳಿಗೆ ನ್ಯಾಯ ಬೇಕೆಂದೂ ಹಾಗೂ ಕೊಲೆಪಾತಕರಿಗೆ ಶಿಕ್ಷೆಯಾಗಬೇಕೆಂದೂ ಹೋರಾಟಗಳು ನಡೆಯುತ್ತಿವೆ. ಹತ್ಯೆಯ ರಹಸ್ಯವನ್ನು ಬಯಲಿಗೆಳೆಯುತ್ತೇನೆಂದ ಬಂಗೇರರವರಿಗೆ ಶ್ರದ್ಧಾಂಜಲಿ ಸಭೆ ನಡೆಯುತ್ತಿದೆ. ಸೌಜನ್ಯಳಿಗೆ ನ್ಯಾಯ ದೊರೆಯಬೇಕೆನ್ನುವ ಪರವಾಗಿರುವ ಅನೇಕರು ಧರ್ಮಾಧಿಕಾರಿಗಳ ವಿರುದ್ಧ ಕುದಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಧರ್ಮಸ್ಥಳಕ್ಕೆ ಹೋಗುವ ಅಗತ್ಯವಿತ್ತಾ? ಎನ್ನುವ ಪ್ರಶ್ನೆ ಕಾಡುತ್ತದೆ. ಯಾವಾಗಲೂ ಹಿಂದುತ್ವದ ವಿರುದ್ಧ, ಅದರ ಪ್ರತಿಪಾದಕ ಆರೆಸ್ಸೆಸ್ ವಿರುದ್ಧ,,ಸಂಘಪರಿವಾರದ ವಿರುದ್ಧ ತಮ್ಮ ತೀವ್ರ ಪ್ರತಿರೋಧವನ್ನು ದಾಖಲಿಸುತ್ತಲೇ ಬಂದಿರುವ ಮಾನ್ಯ ಸಿದ್ದರಾಮಯ್ಯನವರು ಸಂಘ ಪರಿವಾರದ ವಿಶ್ವಹಿಂದೂ ಪರಿಷತ್ತಿನ ಪ್ರಮುಖ ಅಂಗವೇ ಆಗಿರುವ ವಿರೇಂದ್ರ ಹೆಗ್ಗಡೆಯವರ ಪಾದಾರವಿಂದ ಹುಡುಕಿ ಹೋಗಿದ್ದನ್ನು ಅದು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?. ಸಿದ್ದರಾಮಯ್ಯನವರು ವಿರೋಧಿಸುವ ಬಿಜೆಪಿ ಪಕ್ಷದ ಹೈಕಮಾಂಡ್ ಹೆಗ್ಗಡೆಯವರನ್ನು ರಾಜ್ಯಸಭೆಗೆ ಸದಸ್ಯರನ್ನಾಗಿಸಿದ್ದು ವಿರೋಧ ಪಕ್ಷದ ಪರವಾಗಿರುವ, ಹಿಂದುತ್ವವಾದಿಗಳ ಸಮರ್ಥಕರಾಗಿರುವ ಧರ್ಮಾಧಿಕಾರಿಗಳ ಬಳಿ ಈ ಸೋ ಕಾಲ್ಡ್ ಸಮಾಜವಾದಿಗಳೂ ಹೋಗಿರುವ ಹಿಂದಿರುವ ನೈತಿಕತೆಯಾದರೂ ಏನು?
ಹೌದು.. ಸಮಾಜವಾದಿ ಸಿದ್ಧರಾಮಯ್ಯನವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಅಗೋಚರವಾದ ಬ್ರಾಹ್ಮಣ್ಯವಾದಿ ಬಲೆಗೆ ಬಿದ್ದಿದ್ದಾರೆ ಎಂದೆನಿಸುತ್ತದೆ. ಅಥವಾ ಹಿಂದುತ್ವವಾದ ಎನ್ನುವ ಅಕ್ಟೋಪಸ್ ಹಿಡಿತಕ್ಕೆ ಸಿಕ್ಕಾಕಿಕೊಂಡಿದ್ದಾರೆ ಎನ್ನುವುದು ಇತ್ತೀಚಿನ ಅವರ ನಡವಳಿಕೆಗಳು ಸಾಬೀತು ಪಡಿಸುತ್ತಿವೆ. ಬಿಜೆಪಿ ನಾಯಕರು ರಾಮಮಂದಿರ ಬಗ್ಗೆ ಮಾತಾಡಿದರೆ ನನ್ನ ಹೆಸರಲ್ಲೇ ರಾಮನಿದ್ದಾನೆ ಎಂದು ಸಮರ್ಥಿಸಿಕೊಂಡರು. ಅಯೋಧ್ಯೆಯಲ್ಲಿ ಬ್ರಾಹ್ಮಣ್ಯವಾದಿಗಳು ರಾಮಮಂದಿರ ಕಟ್ಟಿಸಿದರೆ ನಮ್ಮೂರಲ್ಲೂ ರಾಮಮಂದಿರವನ್ನು ಕಟ್ಟಿಸಿದ್ದೇನೆಂದು ಹೇಳಿದರು. ಮೋದಿಯವರು ಅಪೂರ್ಣ ರಾಮಮಂದಿರದಲ್ಲಿ ಬಾಲರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಿದ ದಿನ ಸಿದ್ದರಾಮಯ್ಯನವರು ಇಲ್ಲಿ ಇನ್ನೊಂದು ರಾಮಮಂದಿರ ಉದ್ಘಾಟನೆ ಮಾಡಿದರು. ಅಂದರೆ ತಾನೂ ರಾಮಭಕ್ತ, ರಾಮಮಂದಿರದ ನಿರ್ಮಾತೃ ಎಂದು ಸಾಬೀತು ಪಡಿಸುವ ಪ್ರಯತ್ನವನ್ನು ಸಿದ್ದರಾಮಯ್ಯನವರು ಮಾಡುತ್ತಲೇ ಬಂದರು.
ಹಾಗಾದರೆ ಬಾಯಿ ಬಿಟ್ಟರೆ ಬಸವಣ್ಣನವರ ತತ್ವಗಳನ್ನು ಹೇಳುವ ಸಿದ್ದರಾಮಯ್ಯನವರ ನಡೆ ಮತ್ತು ನುಡಿ ಎರಡೂ ಬೂಟಾಟಿಕೆಯದ್ದಾ? ಬ್ರಾಹ್ಮಣ್ಯ ಸೃಷ್ಟಿಸಿದ ದೇವರುಗಳನ್ನು, ಧಾರ್ಮಿಕ ಮೌಢ್ಯಗಳ ಪ್ರತಿಪಾದಕರಾದ ಪುರೋಹಿತರನ್ನು ವಿರೋಧಿಸಿದ ಬಸವಣ್ಣನವರು ಸ್ಥಾವರ ದೇವಸ್ಥಾನಗಳನ್ನು ತಮ್ಮ ವಚನಗಳಲ್ಲಿ ಖಂಡಿಸಿದರು. ಭಗವಂತ ಮತ್ತು ಭಕ್ತರ ನಡುವೆ ಈ ದಲ್ಲಾಳಿ ಪುರೋಹಿತರ ಅಗತ್ಯವೇ ಬೇಡವೆಂದು ಇಷ್ಟಲಿಂಗಾರಾಧನೆಯನ್ನು ಜಾರಿಗೆ ತಂದರು. ಆದರೆ ಬಸವಣ್ಣನವರ ತತ್ವ ಸಿದ್ದಾಂತಗಳ ಬಗ್ಗೆ ಮಾತಾಡುವ ಸಿದ್ದರಾಮಯ್ಯನವರು ಈಗ ರಾಮಮಂದಿರ ನಿರ್ಮಾಣ, ಉದ್ಘಾಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ನಡೆ ನುಡಿ ಸಿದ್ದಾಂತದ ವಿರೋಧಿತನವಲ್ಲವೇ?. ಈಗ ಧರ್ಮಸ್ಥಳವೆನ್ನುವ ಅಂಧಶ್ರದ್ದೆಯ ಸ್ಥಾವರ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಧರ್ಮಾಧಿಕಾರಿಗಳಿಗೆ ಶರಣಾಗಿದ್ದು ಬಸವ ವಿರೋಧಿ ನಡೆಯಲ್ಲವೇ?
ಹಿಂದುತ್ವವಾದಿ ಫ್ಯಾಸಿಸಂ ಎನ್ನುವುದು ಸುಮ್ಮನೇ ಅಲ್ಲ. ಅದು ಎಲ್ಲರನ್ನೂ ತನ್ನ ಪರಿಧಿಗೆ ಸೇರಿಸಿಕೊಳ್ಳಲು ಕಾಯುತ್ತಿರುತ್ತದೆ. ಯಾರು ವೈದಿಕಶಾಹಿ ಸಿದ್ಧಾಂತವನ್ನು ವಿರೋಧಿಸುತ್ತಾರೋ ಅಂತವರನ್ನು ಯಾವಯಾವುದೋ ರೂಪದಲ್ಲಿ ಸನಾತನವಾದಿ ಸಿದ್ಧಾಂತಕ್ಕೆ ಶರಣಾಗುವಂತೆ ಮಾಡಲಾಗುತ್ತದೆ. ಆರೆಸ್ಸೆಸ್ ಹಾಗೂ ಬಿಜೆಪಿಯ ತೋಡುವ ಖೆಡ್ಡಾಕ್ಕೆ ಸಿದ್ದರಾಮಯ್ಯನವರಂತಹ ಆನೆಯೂ ಬಿದ್ದು ಪಳಗುತ್ತದೆ. ಕಾಂಗ್ರೆಸ್ ಎನ್ನುವುದು ಬಿಜೆಪಿಯ ವಿರೋಧಿ ಪಕ್ಷವೆಂದು ಹೇಳಲಾಗುತ್ತದೆ. ಆದರೆ ಕಾಂಗ್ರೆಸ್ ನಲ್ಲಿರುವ ಬಹುತೇಕರು ಅಂತರಂಗದಲ್ಲಿ ಹಿಂದುತ್ವವಾದಿಗಳೇ ಆಗಿದ್ದಾರೆ. ಕೇಜ್ರಿವಾಲ್ ನಂತಹ ವಿದ್ಯಾವಂತರೂ ಸಹ ಜೈಲಿನಿಂದ ಹೊರಬಂದು ಹನುಮಾನ್ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಸಿದ್ದರಾಮಯ್ಯನಂತಹ ಸಮಾಜವಾದಿ ಸಿದ್ಧಾಂತಿಗಳೂ ಸಹ ಟೆಂಪಲ್ ರನ್ ಮಾಡುತ್ತಾರೆ. ಈ ರೀತಿಯ ನರೇಶನ್ ಸೆಟ್ ಮಾಡುವ ಕೆಲಸವನ್ನು ಬಹಳ ಸೂಕ್ಷ್ಮವಾಗಿ ಹಾಗೂ ವ್ಯವಸ್ಥಿತವಾಗಿ ಹಿಂದುತ್ವವಾದ ಮಾಡುತ್ತದೆ.
ಹಿಂದುತ್ವವಾದಿ ಫ್ಯಾಸಿಸಂ ಎನ್ನುವುದು ದೇಶಾದ್ಯಂತ ಜನರಲ್ಲಿ ರಾಮಭಕ್ತಿಯ ಸಮ್ಮೋಹನವನ್ನು ಸೃಷ್ಟಿಮಾಡಿದೆ. ಯಾರು ರಾಮಮಂದಿರದ ವಿರುದ್ಧ, ಶ್ರೀರಾಮನ ವಿರುದ್ಧ ಮಾತಾಡುತ್ತಾರೋ ಅವರೆಲ್ಲಾ ರಾಮದ್ರೋಹಿಗಳು, ಧರ್ಮದ್ರೋಹಿಗಳು ಎನ್ನುವ ಅಪನಂಬಿಕೆಯನ್ನು ಹುಟ್ಟಿಸಲಾಗುತ್ತದೆ. ರಾಮಮಂದಿರ ಉದ್ಘಾಟನೆಗೆ ಕರೆದರೂ ಬರದೇ ಹೋದ ಕಾಂಗ್ರೆಸ್ ಪ್ರಮುಖ ನಾಯಕರನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನವನ್ನೂ ಮೋದಿ ಮಾಡಿದ್ದು ಗೊತ್ತಿರುವ ಸಂಗತಿಯಾಗಿದೆ. ಅಂದರೆ ‘ಹಿಂದೂಗಳಾದವರೆಲ್ಲಾ ರಾಮನನ್ನು ಒಪ್ಪಿಕೊಳ್ಳಬೇಕು, ರಾಮಮಂದಿರವನ್ನು ಸಮರ್ಥಿಸಿಕೊಳ್ಳಬೇಕು. ಆ ಮೂಲಕ ಹಿಂದೂ ಧರ್ಮದ ಅನುಯಾಯಿಯಾಗಿ ತಮ್ಮ ದೈವ ನಿಷ್ಟೆಯನ್ನು ಸಾಬೀತು ಪಡಿಸಬೇಕು’ ಎನ್ನುವುದು ಹಿಂದುತ್ವವಾದಿಗಳ ಒತ್ತಾಯ. ರಾಮನ ಹೆಸರಲ್ಲಿ ಬಹುತೇಕ ದೇಶವಾಸಿಗಳಲ್ಲಿ ಮತೀಯ ಭ್ರಮೆಯನ್ನು ಹುಟ್ಟಿಸಿದ್ದರಿಂದಾಗಿ ಯಾರಿಗೆ ಬೇಕಾದರೂ ಧರ್ಮದ್ರೋಹಿ ಪಟ್ಟ ಕಟ್ಟಿ ಜನರನ್ನು ಅವರ ವಿರುದ್ಧ ಎತ್ತಿ ಕಟ್ಟುವುದು ಸಂಘಿಗಳಿಗೆ ಸುಲಭದ ಕ್ರಿಯೆಯಾಗಿದೆ.
ಈಗ ಸಿದ್ದರಾಮಯ್ಯನಂತಹ ಜನನಾಯಕರಿಗೆ ಇರುವ ಆಯ್ಕೆಗಳು ಎರಡೇ. ಒಂದು ಹಿಂದುತ್ವವಾದಿಗಳ ಧಾರ್ಮಿಕ ಶಡ್ಯಂತ್ರವನ್ನು ವಿರೋಧಿಸುವುದು ಇಲ್ಲವೇ ತಾನೂ ಹಿಂದೂ ಧರ್ಮದ ಅನುಯಾಯಿ, ಹಿಂದೂ ದೇವರ ಅಭಿಮಾನಿ ಎಂದು ಸಾಬೀತು ಪಡಿಸುವುದು. ವಿರೋಧಿಸುವುದೇ ಆದರೆ ಈಗಾಗಲೇ ಬಹುಜನರ ಮೆದುಳಲ್ಲಿ ದೇವರ ಹೆಸರಲ್ಲಿ ಹಿಂದುತ್ವವನ್ನು ತುಂಬಿರುವುದರಿಂದ ಅಂತಹ ಬಹುಸಂಖ್ಯಾತ ಭಕ್ತರ ವಿರೋಧವನ್ನು ರಾಜಕಾರಣಿಯಾದ ಸಿದ್ದರಾಮಯ್ಯನವರು ಕಟ್ಟಿಕೊಂಡು ದಕ್ಕಿದ ಪಟ್ಟವನ್ನು ಬಿಟ್ಟುಕೊಡಲು ತಯಾರಿಲ್ಲ. ಹಾಗಾಗಿ ಅನಿವಾರ್ಯವಾಗಿ ಹಿಂದುತ್ವವಾದಿಗಳು ಹೆಣೆದ ಬಲೆಯಲ್ಲಿ ಬಿದ್ದು “ತಾನೂ ಹಿಂದೂ, ತಾನೂ ರಾಮಭಕ್ತ, ತಾನೂ ರಾಮಮಂದಿರ ಕಟ್ಟಿದ್ದೇನೆ, ಟೆಂಪಲ್ ರನ್ ಮಾಡುತ್ತೇನೆ’ ಎಂದು ಪ್ರತಿಪಾದಿಸುತ್ತಾ ಜನರ ಒಲವನ್ನು ಗಳಿಸಿಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯನವರೂ ಮಾಡುತ್ತಿದ್ದಾರೆ.
ಇದು ಪಕ್ಕಾ ಹಿಂದುತ್ವವಾದಿ ಫ್ಯಾಸಿಸಂ ಹೆಣೆದ ಟ್ರ್ಯಾಪ್. ಅದನ್ನು ವಿರೋಧಿಸುವುದು ನಾಸ್ತಿಕರಿಗೆ, ಪ್ರಗತಿಪರರಿಗೆ, ಕಮ್ಯೂನಿಸ್ಟರಿಗೆ, ಸಿದ್ಧಾಂತ ಬದ್ದ ಹೋರಾಟಗಾರರಿಗೆ ಸುಲಭ. ಆದರೆ ಪಟ್ಟಕ್ಕೇರಲು ಮತದಾರರನ್ನೇ ಅವಲಂಬಿಸಿದ ಸಿದ್ದರಾಮಯ್ಯನಂತವರಿಗೆ ಕಷ್ಟ. ಹೀಗಾಗಿ ಅವರಿಗೆ ನಡೆ ನುಡಿ ಸಿದ್ಧಾಂತವಾಗಲು ಸಾಧ್ಯವಾಗುತ್ತಿಲ್ಲ. “ನನ್ನದು ಕಾಯಕವೇ ಕೈಲಾಸ, ಕೆಲಸವೇ ದೇವರು, ಜನಸೇವೇಯೇ ಜನಾರ್ಧನ ಸೇವೆ, ಜನರಲ್ಲಿಯೇ ನಾನು ದೇವರನ್ನು ಕಾಣುತ್ತೇನೆ, ಜನರಿಗಾಗಿಯೇ ಬದುಕನ್ನು ಮೀಸಲಾಗಿರಿಸುತ್ತೇನೆ” ಎಂದು ನುಡಿದು ನಡೆದಿದ್ದೇ ಆಗಿದ್ದರೆ ಸಿದ್ದರಾಮಯ್ಯನವರನ್ನು ಮೆಚ್ಚಬಹುದಾಗಿತ್ತು. ಜನರೂ ಇಷ್ಟಪಡಬಹುದಾಗಿತ್ತು.
ಆದರೆ..ಯಾವಾಗ ಹಿಂದುತ್ವವಾದಿಗಳ ಮೇಲೆ ಸ್ಪರ್ಧೆಗೆ ಬಿದ್ದವರಂತೆ ರಾಮಮಂದಿರ ನಿರ್ಮಿಸುವ, ಉದ್ಘಾಟಿಸುವ, ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಸಿದ್ದರಾಮಯ್ಯನವರು ಇಳಿದರೋ ಆಗಲೇ ಅವಕಾಶವಾದಿಯಾದರು. ಯಾವಾಗ ಬಸವ ತತ್ವವನ್ನು ಹೇಳುತ್ತಲೇ ಸ್ಥಾವರ ದೇವಸ್ಥಾನಕ್ಕೆ ಹೋಗಿ ಪೂಜೆ ಪುನಸ್ಕಾರ ಕೈಗೊಂಡರೋ ಆಗಲೇ ಬಸವದ್ರೋಹಿಯಾದರು. ಯಾವಾಗ ವಿವಾದಿತ ಧರ್ಮಾಧಿಕಾರಿಯನ್ನು ಖಾಸಗಿಯಾಗಿ ಭೇಟಿಯಾಗಿ ಶರಣಾಗತಿ ಸೂಚಿಸಿದರೋ ಆಗಲೇ ವಿಶ್ವಾಸಾರ್ಹತೆಯನ್ನೂ ಕಳೆದುಕೊಂಡರು. ನಾಡಿನ ಮುಖ್ಯಮಂತ್ರಿಯಾಗಿ ಹತ್ಯೆಗೊಳಗಾದ ಸೌಜನ್ಯಳ ಮನೆಗೆ ಹೋಗಿ ಅವಳ ಕುಟುಂಬಸ್ಥರಿಗೆ ಸಾಂತ್ವನ ಹೇಳದೇ ಧರ್ಮಾಧಿಕಾರಿ ಭೇಟಿಗೆ ಧಾವಿಸಿ ಹೋದರೋ ಆಗಲೇ ಜನರ ನಂಬಿಕೆಗೆ ಹೊರತಾದರು.
“ನನ್ನ ನಡೆಯೊಂದು ಪರಿ, ನುಡಿಯೊಂದು ಪರಿ, ಎನ್ನಗೊಳಗೇನೂ ಶುದ್ಧವಿಲ್ಲ ನೋಡಯ್ಯಾ” ಎಂದು ಬಸವಣ್ಣನವರು ಸಿದ್ದರಾಮಯ್ಯನಂತವರನ್ನು ನೋಡಿಯೇ ವಚನ ಕಟ್ಟಿರಬಹುದು. ಹಿಂದುತ್ವವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಬೇಕೆಂದೇ ಬಹುಸಂಖ್ಯಾತ ಕನ್ನಡಿಗರು ಸಿದ್ದರಾಮಯ್ಯನವರನ್ನು ಬೆಂಬಲಿಸಿದ್ದರು. ಸಿದ್ದರಾಮಯ್ಯನವರನ್ನು ಮಂತ್ರಿ ಮಾಡಿದ್ದು ಮಂಜುನಾಥ ಸ್ವಾಮಿಯೂ ಅಲ್ಲಾ, ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರೂ ಅಲ್ಲಾ. ಈ ನಾಡಿನ ಬಹುಸಂಖ್ಯಾತ ದಲಿತರು, ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು. ಸಿದ್ದರಾಮಯ್ಯನವರ ಸಂಪೂರ್ಣ ನಿಷ್ಠೆ ಇರಬೇಕಾಗಿದ್ದು ಈ ಅಹಿಂದ ಸಮುದಾಯಕ್ಕೆ ಹೊರತು ಪುರೋಹಿತಶಾಹಿ ಧರ್ಮಾಧಿಕಾರಿಗಳಿಗಲ್ಲ. ಇಷ್ಟಕ್ಕೂ ಹಿಂದುತ್ವವಾದಿ ಪಕ್ಷದ ಪರವಾಗಿರುವ, ವಿಶ್ವಹಿಂದೂ ಪರಿಷತ್ತಿನ ನಾಯಕರಾಗಿರುವ, ಬಿಜೆಪಿ ಪ್ರಾಯೋಜಿತ ಸಂಸದರೂ ಆಗಿರುವ ವಿರೇಂದ್ರ ಹೆಗ್ಗಡೆಯವರು ಸಿದ್ದರಾಮಯ್ಯನವರ ಪರವಾಗಲೀ ಇಲ್ಲವೇ ಕಾಂಗ್ರೆಸ್ ಪರವಾಗಲಿ ಮತ ಹಾಕಲು ಯಾರೊಬ್ಬರಿಗೂ ತಿಳಿಸಿಲ್ಲ. ಹೀಗಾಗಿ ರಾಜಕೀಯವಾಗಿ, ಧಾರ್ಮಿಕವಾಗಿ ಸಿದ್ದರಾಮಯ್ಯನವರ ವಿರೋಧಿ ಪಾಳಯದಲ್ಲಿರುವ ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ್ದೇ ಜನದ್ರೋಹ. ಸೌಜನ್ಯ ಕುಟುಂಬದ ಕಣ್ಣೀರು ಒರೆಸದ, ತೀರಿಕೊಂಡ ಬಂಗೇರರವರ ನುಡಿನಮನ ಕಾರ್ಯಕ್ರಮಕ್ಕೂ ಹೋಗಲಾಗದ ಸಿದ್ದರಾಮಯ್ಯನವರ ನಿಲುವು ಹಾಗೂ ಒಲವು ಅದೆಷ್ಟು ಜನಪರ ಹಾಗೂ ಅದೆಷ್ಟು ಹಿಂದುತ್ವವಾದಿ ಪರ ಎನ್ನುವುದು ಈ ಟೆಂಪಲ್ ರನ್ ಪ್ರಕರಣದಿಂದ ಸಾಬೀತಾದಂತಾಯ್ತು. ಅವರ ಮೇಲೆ ವಿಶ್ವಾಸವಿಟ್ಟಿದ್ದವರಿಗೆ ನಿರಾಶೆಯಾಯಿತು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು.