ನವದೆಹಲಿ: ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಹಾಗೂ ನಿಗಮ ಮಂಡಳಿಗಳಿಗೆಅಧ್ಯಕ್ಷರು, ಸದಸ್ಯರ ನೇಮಕ ಕುರಿತು ಇಂದು ದೆಹಲಿಯಲ್ಲಿ ವರಿಷ್ಠರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಇಂದೇ ಪಟ್ಟಿಯನ್ನು ಅಂತಿಮಗೊಳಿಸುವ ಸಾದ್ಯತೆಗಳಿವೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕುರಿತಂತೆ ಎರಡು ಹಂತಗಳಲ್ಲಿ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ತೆರಳಿದ್ದಾರೆ. ಶಾಸಕರ ಅಭಿಪ್ರಾಯ ಕುರಿತೂ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಇಂದು ಗುರುವಾರ ಸಂಜೆ ಸಭೆ ನಡೆಸಲಿದ್ದಾರೆ.
ನೂರಕ್ಕೂ ಹೆಚ್ಚು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕೆಲವು ಶಾಸಕರು ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಹಸ್ಯ ಸಭೆಯಲ್ಲೂ ಹಲವು ಶಾಸಕರು ಅನುದಾನ ಕೊರತೆ ಮತ್ತು ಉಸ್ತುವಾರಿ ಸಚಿವರ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ವಿಷಯಗಳನ್ನು ಕುರಿತು ಚರ್ಚೆ ನಡೆಯಲಿದೆ ಎಂದು ಪಕ್ಷ ದಮೂಲಗಳು ಖಚಿತಪಡಿಸಿವೆ.
ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಅಂತಿಮಗೊಳ್ಳಬೇಕಿದೆ. ಈ ಹಿಂದೆಯೇ ನಾಲ್ವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಈ ಪಟ್ಟಿಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಇಂದಿನ ಸಭೆಯಲ್ಲಿ ನಾಲ್ವರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.
ಮೊದಲ ಹಂತದಲ್ಲಿ 34 ನಿಗಮ ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಎರಡನೇ ಹಂತದ ನೇಮಕಾತಿ ಪ್ರಕ್ರಿಯೆ ಆಗಿಲ್ಲ. ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲಾಗುವುದು ಎಂದು ಪಕ್ಷದ ಅಧ್ಯಕ್ಷರು ಘೋಷಿಸಿದ್ದರು. ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಕೆಲವು ಶಾಸಕರಿಗೂ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳಿವೆ. ಆದರೆ ಶಾಸಕರಿಗೆ ಅವಕಾಶ ನೀಡಲು ಡಿ.ಕೆ.ಶಿವಕುಮಾರ್ ಒಪ್ಪುತ್ತಿಲ್ಲ. ಹಾಗಾಗಿ ಕಗ್ಗಂಟಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ರಾಹುಲ್ ಭೇಟಿ ಮಾಡಲಿದ್ದಾರೆ.