“ಸ್ಮಾರ್ಟ್ ಆಗದ ಸಿಟಿಗಳು”

Most read

ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ ಒಬ್ಬಾಕೆ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರೆ, ಇನ್ನು ಮೂವರು ನೀರಿನೊಂದಿಗೆ ಹರಿಯುತ್ತಿದ್ದ ವಿದ್ಯುತ್ ಆಘಾತಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡು ಬಿಟ್ಟಿದ್ದರು. ಇವೆಲ್ಲದರ ಮಧ್ಯೆ ಜೀವ ಹಿಡಿದುಕೊಂಡು, ಹೋಗಬೇಕಾದಲ್ಲಿ ಅದ್ಹೇಗೋ ಹೋಗಿ ತಲುಪಿದ ಸಾವಿರಾರು ಮಂದಿಯನ್ನು ಮಾತನಾಡಿಸಿದರೆ ಸಾವಿರಾರು ಕತೆಗಳು ಹೊರಬರಬಹುದು. ನೂರಾರುಸಾವಿರಾರು ಮಂದಿಯಲ್ಲಿ ನಾನೂ ಒಬ್ಬನಾಗಿದ್ದರಿಂದ ನೀವೀಗ ಬರಹವನ್ನು ಓದುತ್ತಿದ್ದೀರಿ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ! ಪ್ರಸಾದ್‌ ನಾಯ್ಕ್‌, ದೆಹಲಿ.

ಶಾಪಿಂಗ್ ಮಾಲ್ ಗಳು ಎಲ್ಲಿ ಹೋದರೂ ನೋಡಲು ಒಂದೇ ತೆರನಾಗಿರುತ್ತವೆ ಅಂತ ಮಿತ್ರರೊಬ್ಬರು ನನ್ನ ಬಳಿ ಹೇಳಿದ ನೆನಪು.

ಅದು ಸತ್ಯ ಕೂಡ. ಬ್ರಾಂಡೆಡ್ ಮಳಿಗೆಗಳು ಎಲ್ಲಿಗೆ ಹೋದರೂ ಸಾಮಾನ್ಯವಾಗಿ ಒಂದೇ ರೀತಿ ಕಾಣುತ್ತವೆ. ಮಂಗಳೂರಿನಲ್ಲಿರುವ ಚಿಕ್ಕ ಶಾಪಿಂಗ್ ಮಾಲಿಗೂ, ದುಬೈ ಏರ್ ಪೋರ್ಟಿನೊಳಗಿರುವ ಬೃಹತ್ ಶಾಪಿಂಗ್ ಮಾಲಿಗೂ ಹೆಚ್ಚು ವ್ಯತ್ಯಾಸವೇನಿಲ್ಲ. ಇದು ದಿಲ್ಲಿಯಲ್ಲಿರುವ ಶಾಪಿಂಗ್ ಮಾಲಿಗೂ ಸತ್ಯ. ಲುವಾಂಡಾದಲ್ಲಿರುವ ಶಾಪಿಂಗ್ ಮಾಲಿಗೂ ಇದು ಅನ್ವಯ. ಒಮ್ಮೆ ಶಾಪಿಂಗ್ ಮಾಲ್ ಒಳಕ್ಕೆ ಕಾಲಿಟ್ಟಾಯಿತು ಅಂತಾದರೆ ಅದು ಎಲ್ಲಿಯದಾದರೂ ಅಷ್ಟೇ. ಅವೇ ಛಮಕ್ ಧಮಕ್ ಒಳಾಂಗಣಗಳು. ಅವವೇ ಶೈಲಿಯ ಬ್ರಾಂಡುಗಳು.

ನಮ್ಮ ಮಹಾನಗರಗಳೂ ಕ್ರಮೇಣ ಹೀಗಾಗುತ್ತಿವೆಯೇನೋ ಅಂತ ನನಗೆ ಹಲವು ಬಾರಿ ಅನಿಸಿದ್ದಿದೆ. ಇಂದು ಟ್ರಾಫಿಕ್ ಜಾಮ್ ಎಂದಾಗಲೆಲ್ಲ ನಮಗೆ ಥಟ್ಟನೆ ನೆನಪಾಗುವುದು ಬೆಂಗಳೂರು. ಆದರೆ ಒಮ್ಮೆ ಅಸ್ಸಾಮಿನಲ್ಲಿರುವ ಗುವಾಹಟಿಗೆ ಹೋದಾಗ ಅಲ್ಲೇನು ಕಮ್ಮಿ ಟ್ರಾಫಿಕ್ ಜಾಮ್ ಇದೆ ಅಂತ ನನಗನಿಸಿರಲಿಲ್ಲ. ಇದು ಟ್ರಾಫಿಕ್ ಜಾಮ್ ಬಗ್ಗೆ ಮಾತ್ರವಲ್ಲ. ಇಂದು ಭಾರತದ ಬಹುತೇಕ ಮಹಾನಗರಗಳಿಗೆ ಹೋದರೆ ಯಾವ ಮಹಾನಗರವೂ ದೇಶದ ಉಳಿದ ನಗರಗಳಿಗಿಂತ ಭಿನ್ನವೆಂದು ಅನಿಸುವುದಿಲ್ಲ. ಎತ್ತ ನೋಡಿದರೂ ಅವವೇ ಗಾಜಿನ ಕಂಬಳಿಯನ್ನು ಹೊತ್ತುಕೊಂಡ ಅದ್ದೂರಿ, ಗಗನಚುಂಬಿ ಕಟ್ಟಡಗಳು. ಐಷಾರಾಮಿ ಅಪಾರ್ಟ್‌ಮೆಂಟ್ ಗಳು, ಕಾರ್ಪೊರೇಟ್ ಆಫೀಸುಗಳು, ಶಾಪಿಂಗ್ ಮಾಲ್ ಗಳು ಮತ್ತು ದೈತ್ಯ ಫ್ಲೈ-ಓವರುಗಳು.

ಭಾರತದ ಶಾಂಘೈ ಅಥವಾ ಮಿಲೇನಿಯಮ್ ನಗರಿ ಎಂದೇ ಖ್ಯಾತಿಯುಳ್ಳ ಗುರುಗ್ರಾಮ ಇದಕ್ಕೊಂದು ಒಳ್ಳೆಯ ಉದಾಹರಣೆ ಕೂಡ. ಎಂ.ಜಿ ರಸ್ತೆ ಇಲ್ಲಿಯ ಜನನಿಬಿಡ ಮತ್ತು ಜನಪ್ರಿಯ ಏರಿಯಾಗಳಲ್ಲೊಂದು. ತನ್ನ ಹೆಸರಿನಲ್ಲಿರುವ ಎಂ.ಜಿ.ಯಿಂದಾಗಿ ಬಹಳ ಮಂದಿ ಈ ರಸ್ತೆಯನ್ನು ಮಹಾತ್ಮಾಗಾಂಧಿ ರಸ್ತೆ ಅಂತಲೇ ತಿಳಿದಿದ್ದಾರೆ. ಆದರೆ ಇದರ ನಿಜವಾದ ಪೂರ್ಣರೂಪ ಮೆಹರೌಲಿ-ಗುರುಗ್ರಾಮ ರಸ್ತೆ. ಇರಲಿ, ಅಸಲಿ ಸಂಗತಿ ಇದಲ್ಲ. ಈ ಏರಿಯಾದ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆಯ ಎರಡೂ ಬದಿಗಳಲ್ಲಿ ಏನಿಲ್ಲವೆಂದರೂ ಏಳೆಂಟು ಶಾಪಿಂಗ್ ಮಾಲ್ ಗಳಿವೆ. ಅಂದಹಾಗೆ ಹೆಜ್ಜೆಗೊಂದು ಶಾಪಿಂಗ್ ಮಾಲ್ ಇಡುವ ಅಗತ್ಯವೇನಿದೆ ಎಂಬುದು ನನಗಂತೂ ತಿಳಿದಿಲ್ಲ. ಅಲ್ಲದೆ ಈ ಪ್ರಶ್ನೆಗೆ ಉತ್ತರವನ್ನು ಹೇಳಬಲ್ಲ ಮಂದಿ ಕೂಡ ನನಗೆ ಇದುವರೆಗೂ ಸಿಕ್ಕಿಲ್ಲ.

ಆದರೆ ಈ ಮಾದರಿಯಲ್ಲೇ ಇಂದು ಭಾರತದ ಬಹುತೇಕ ನಗರಗಳು ವಿಕಾಸವಾಗುತ್ತಿವೆ ಎಂಬುದಂತೂ ಒಪ್ಪಿಕೊಳ್ಳಲೇಬೇಕಾದ ಸತ್ಯ. ಹಾಗೆ ನೋಡಿದರೆ ಎಲ್ಲವೂ ವ್ಯವಸ್ಥಿತವಾಗಿರುವಂತೆ ಕಾಣುವ ಮಹಾನಗರಗಳಲ್ಲಿ ತಾವಂದುಕೊಂಡಂತೆ ಎಲ್ಲವೂ ವ್ಯವಸ್ಥಿತವಾಗಿ ನಡೆದರೆ ಅದುವೇ ಒಂದು ದೊಡ್ಡ ಸಾಧನೆ. ದಿನದ ಗುರಿಯನ್ನು ಯಶಸ್ವಿಯಾಗಿ ತಲುಪಿದ ಸಂತೃಪ್ತಿ. ಇಂದು ನಮ್ಮ ಮಹಾನಗರಗಳು ಪಿಕ್ಚರ್-ಪರ್ಫೆಕ್ಟ್ ಆಗಿ ಕಾಣುವುದು ಸಿನೆಮಾಗಳಲ್ಲಿ ಮಾತ್ರ. 2025ರಲ್ಲಿ ಬಿಡುಗಡೆಯಾಗಿರುವ “ಆಪ್ ಜೈಸಾ ಕೋಯಿ” ಚಿತ್ರದಲ್ಲಿ ಕೋಲ್ಕತ್ತಾ ಅದೆಷ್ಟು ಶಾಂತ ಮತ್ತು ಸುಂದರವಾಗಿ ಕಾಣುತ್ತದೆಂದರೆ, ಒಂದೊಂದು ಫ್ರೇಮು ಕೂಡ ಅದ್ಭುತ ಕಲಾಕೃತಿಯಂತೆ ಕಣ್ಮನ ಸೆಳೆಯುತ್ತದೆ. ಸುಂದರ ವರ್ಣಚಿತ್ರದಂತೆ ಸ್ವರ್ಗಸದೃಶ ರೂಪದಲ್ಲಿ ಕಂಡು ಮನಸ್ಸಿಗೆ ಆಹ್ಲಾದವನ್ನು ತರುತ್ತದೆ. ಆದರೆ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸಿನ ಪ್ರಕಾರ ವಿಪರೀತ ಟ್ರಾಫಿಕ್ ಜಾಮ್ ಗಳಾಗುವ ನಗರಗಳಲ್ಲಿ ಕೋಲ್ಕತ್ತಾ ವಿಶ್ವದಲ್ಲೇ ಎರಡನೆಯ ಸ್ಥಾನವನ್ನು ಪಡೆದಿದೆ. ನಮ್ಮ ನಗರಗಳ ಅಸಲಿ ಸ್ಥಿತಿಯು ಅಂಕಿಅಂಶಗಳ ರೂಪದಲ್ಲಿ ಬಂದಾಗ ನಮ್ಮನ್ನು ಬೆಚ್ಚಿಬೀಳಿಸುವುದು ಹೀಗೆ!

2025ರ ಜುಲೈ ತಿಂಗಳ ಎರಡನೇ ವಾರ. ನಿರ್ದಿಷ್ಟವಾಗಿ ಹೇಳುವುದಾದರೆ ಬುಧವಾರ. ಅಂದು ಸಂಜೆ ದೆಹಲಿ ಎನ್.ಸಿ.ಆರ್ ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗಿತ್ತು. ಅದರಲ್ಲೂ ಗುರುಗ್ರಾಮದಲ್ಲಿ ಒಂದು-ಒಂದೂವರೆ ತಾಸುಗಳ ಕಾಲ ಜಡಿಮಳೆ ಹೊಡೆದಿದ್ದೇ ಹೊಡೆದಿದ್ದು. ಹೀಗಾಗಿದ್ದೇ ತಡ. ಮಹಾನಗರದ ಬದುಕು ಹಠಾತ್ತನೆ ಅಸ್ತವ್ಯಸ್ತವಾಗಿ ಬಿಟ್ಟಿತು. ಒಂದರ ಮೇಲೊಂದು ಪೇರಿಸಿಟ್ಟ ಇಸ್ಪೀಟು ಕಾರ್ಡುಗಳು ತಪತಪನೆ ನೆಲಕ್ಕುರುಳಿದಂತೆ! ರಸ್ತೆಗಳು ಸೊಂಟದವರೆಗೆ ನೀರು ತುಂಬಿಕೊಂಡು ಅಕ್ಷರಶಃ ತುಂಬಿ ಹರಿಯುವ ನದಿಯಾಗಿಬಿಟ್ಟವು. ಅಂಡರ್ ಪಾಸುಗಳು ನೀರು ಹೊರಹೋಗದ ಬಾತ್ ಟಬ್ಬಿನಂತಾಗಿ ಸಾವಿನ ಗುಂಡಿಗಳಾಗಿ ಬದಲಾದವು. ಕ್ಯಾಬ್-ಟ್ಯಾಕ್ಸಿಗಳಲ್ಲಿ ಓಡಾಡುತ್ತಿದ್ದ ಜನತೆ ಅನಿರೀಕ್ಷಿತವಾಗಿ ಲೋಹದ ಡಬ್ಬಿಯೊಳಗೆ ಗೃಹಬಂಧನಕ್ಕೊಳಗಾದಂತೆ ಕಂಡರೆ, ಸ್ವಂತ ವಾಹನಗಳಲ್ಲಿ ಹೊರಟಿದ್ದ ಜನಸಾಮಾನ್ಯರು ಒಂದೆಡೆ ತಮ್ಮ ವಾಹನವನ್ನು ಚಲಾಯಿಸಲೂ ಆಗದೆ, ಇನ್ನೊಂದೆಡೆ ಅವುಗಳನ್ನು ಕಂಡಲ್ಲಿ ಬಿಡಲೂ ಆಗದೆ ನಾಯಿಪಾಡು ಅನುಭವಿಸಿದರು. ನಿನ್ನೆ ಮೊನ್ನೆಯವರೆಗೆ ಎಲ್ಲವೂ ಅದ್ಭುತವಾಗಿ ಕಾಣುತ್ತಿದ್ದ, ತಾವು ಅತ್ಯಾಧುನಿಕವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಮಹಾನಗರವು ಹೀಗೆ ತೆರೆದ ಜೈಲಿನಂತಾಗಿ ಬದಲಾಗಲು ಅಂದು ಕಾರಣವಾಗಿದ್ದು ಕೇವಲ ಒಂದು ತಾಸಿನ ಮಳೆ ಮಾತ್ರ!

ಅಂದು ಗುರುಗ್ರಾಮದಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆಯೂ ನಡೆಯಿತು. ಆಕೆ ಗರ್ಭಿಣಿ. ಸಂಜೆ ಅಚಾನಕ್ಕಾಗಿ ಶುರುವಾದ ಜಡಿಮಳೆಯಿಂದಾಗಿ ಗಾಬರಿಯಾದ ಆಕೆ, ನಗರದಲ್ಲಿ ಆಟೋ ಓಡಿಸುತ್ತಿದ್ದ ತನ್ನ ಪತಿಗೆ ಕರೆ ಮಾಡುತ್ತಾಳೆ. ತನ್ನ ಪತಿಯ ಬಳಿ ಆಕೆ ಕೊನೆಯ ಬಾರಿ ಮಾತನಾಡಿದ್ದು ಸಂಜೆ ಐದರ ಹೊತ್ತಿಗೆ. ನಂತರ ಅದೇನು ಮಾಡಿದರೂ ಆತನ ಸಂಪರ್ಕ ಸಾಧ್ಯವಾಗುವುದೇ ಇಲ್ಲ. ಆದರೆ ಮರುದಿನ ಬೆಳಗ್ಗೆ ಪತಿಯ ಸುದ್ದಿಯು ತಲುಪಿದಾಗ ಆತ ಬೇರೊಂದು ಸೆಕ್ಟರಿನಲ್ಲಿ ಹೆಣವಾಗಿ ಸಿಕ್ಕಿರುತ್ತಾನೆ. ಹಿಂದಿನ ದಿನದ ಜಡಿಮಳೆಯಿಂದಾಗಿ ಆತ ಚಲಾಯಿಸುತ್ತಿದ್ದ ಆಟೋ ತೆರೆದ ಒಳಚರಂಡಿಯೊಳಕ್ಕೆ ಉರುಳಿ ಎಲ್ಲವೂ ಅಂತ್ಯವಾಗಿರುತ್ತದೆ.

ಮಳೆಗಾಲದಲ್ಲಿ ದೆಹಲಿಯ ರಸ್ತೆ

27ರ ವಯಸ್ಸಿನ ಶೈಲೇಂದ್ರ ತನ್ನದಲ್ಲದ ತಪ್ಪಿಗೆ ದಾರುಣ ಅಂತ್ಯವನ್ನು ಕಾಣುವುದು ಹೀಗೆ. ಬುಧವಾರ ರಾತ್ರಿ ಮತ್ತು ಗುರುವಾರದ ಬೆಳಗ್ಗಿನ ನಡುವಿನ ಅವಧಿಯಲ್ಲಿ ಶೈಲೇಂದ್ರನ ಪತ್ನಿ ಆತನಿಗೆ ಬರೋಬ್ಬರಿ 200 ಕರೆಗಳನ್ನು ಮಾಡಿರುತ್ತಾಳೆ. ಆದರೆ ಈ ಕರೆಗಳೆಲ್ಲವೂ ದುರಾದೃಷ್ಟವಶಾತ್ ಮಿಸ್ಡ್ ಕಾಲ್ ಪಟ್ಟಿಗೆ ಹೋಗಿ ಅನಾಥವಾಗಿ ಬಿದ್ದಿರುತ್ತವೆ. ಬುಧವಾರ ಸಂಜೆ ಮಾತನಾಡಿದಾಗ ತಾನು ಇನ್ನೇನು ಪ್ರಯಾಣಿಕರೊಬ್ಬರನ್ನು ಡ್ರಾಪ್ ಮಾಡುತ್ತಿದ್ದೇನೆ, ಅವರನ್ನು ಬಿಟ್ಟು ನೇರವಾಗಿ ಮನೆಗೆ ಬರುತ್ತೇನೆ ಎಂದು ಶೈಲೇಂದ್ರ ತನ್ನ ಪತ್ನಿಗೆ ಫೋನಿನಲ್ಲಿ ಹೇಳಿದ್ದ. ಆದರೆ ಆತ ತನ್ನ ಪತ್ನಿಗೆ ನೀಡಿದ್ದ ಆ ಭರವಸೆಯು ಸತ್ಯವಾಗಲೇ ಇಲ್ಲ.

ಅಂದು ಶೈಲೇಂದ್ರ ಮಾತ್ರವಲ್ಲ. ಇನ್ನೂ ನಾಲ್ಕು ಮಂದಿ ಅನಿರೀಕ್ಷಿತ ಅತಿಥಿಯಂತೆ ಬಂದೆರಗಿದ್ದ ಮಳೆಯ ಹೊಡೆತಕ್ಕೆ ಸಿಕ್ಕಿ ಹೆಣವಾಗಿ ಬಿಟ್ಟರು. ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ ಒಬ್ಬಾಕೆ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರೆ, ಇನ್ನು ಮೂವರು ನೀರಿನೊಂದಿಗೆ ಹರಿಯುತ್ತಿದ್ದ ವಿದ್ಯುತ್ ಆಘಾತಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡು ಬಿಟ್ಟಿದ್ದರು. ಇವೆಲ್ಲದರ ಮಧ್ಯೆ ಜೀವ ಹಿಡಿದುಕೊಂಡು, ಹೋಗಬೇಕಾದಲ್ಲಿ ಅದ್ಹೇಗೋ ಹೋಗಿ ತಲುಪಿದ ಸಾವಿರಾರು ಮಂದಿಯನ್ನು ಮಾತನಾಡಿಸಿದರೆ ಸಾವಿರಾರು ಕತೆಗಳು ಹೊರಬರಬಹುದು. ಈ ನೂರಾರು-ಸಾವಿರಾರು ಮಂದಿಯಲ್ಲಿ ನಾನೂ ಒಬ್ಬನಾಗಿದ್ದರಿಂದ ನೀವೀಗ ಈ ಬರಹವನ್ನು ಓದುತ್ತಿದ್ದೀರಿ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ!

ಇಂತಹ ಮಳೆ ಭಾರತದ ಮಹಾನಗರಗಳಿಗೆ ಹೊಸದಲ್ಲ. ಅಲ್ಲದೆ ಇದರ ಜೊತೆಗೆ ಆಗುವ ಜೀವಹಾನಿಗಳೂ ಕೂಡ. ಆದರೆ ನಗರಗಳಲ್ಲಿ ಮರುದಿನದ ರಣಬಿಸಿಲಿಗೆ ನೀರಿನ ಪಸೆಯು ಒಣಗಿದಷ್ಟೇ ಸುಲಭವಾಗಿ ಈ ಸಾವುನೋವುಗಳ ಕತೆಗಳೂ ಜನಮಾನಸದಿಂದ ಮರೆತುಹೋಗುತ್ತವೆ. ಇವತ್ತಿನ ಸುದ್ದಿ ನಾಳೆಗೆ ರದ್ದಿಯಾಗುತ್ತದೆ. ವಿಪರ್ಯಾಸವೆಂದರೆ ಈ ಶತಮಾನದ ಕಿಂಗ್-ಮೇಕರ್ ಗಳೆಂದು ಹೇಳಲಾಗುವ ಸಾಮಾಜಿಕ ಜಾಲತಾಣಗಳಲ್ಲೂ ಇದೊಂದು ಗಂಭೀರ ಚರ್ಚೆಯ ವಿಷಯವಾಗುವುದಿಲ್ಲ. ಅಪರೂಪಕ್ಕೊಮ್ಮೆ ಅಲ್ಲೊಂದು ಇಲ್ಲೊಂದು ಚರ್ಚೆಗಳು ಸಣ್ಣಗೆ ಹುಟ್ಟಿಕೊಂಡರೂ ಅವುಗಳು ತಮ್ಮ ಕಾವನ್ನು ಉಳಿಸಿಕೊಳ್ಳುವುದಿಲ್ಲ.

ಮಹಾನಗರಗಳಲ್ಲುಂಟಾಗುವ ಈ ಬಗೆಯ ಪ್ರವಾಹಗಳು ಚರ್ಚೆಯಾಗಿದ್ದಕ್ಕಿಂತ ಹೆಚ್ಚಾಗಿ ಹಾಸ್ಯಕ್ಕೆ ವಸ್ತುವಾಗಿದ್ದೇ ಹೆಚ್ಚು. ಅದರಲ್ಲೂ ವಿಶೇಷವಾಗಿ ದಿಲ್ಲಿ-ಗುರುಗ್ರಾಮಗಳ ಬಗೆಗಿನ ಮೀಮ್ ಗಳು ಇಂದಿಗೂ ಬಹಳ ಜನಪ್ರಿಯ. ಚಿಲ್ಲರೆ ಮಳೆಗಳಿಗೂ ಪ್ರವಾಹಗಳು ಹುಟ್ಟಿಕೊಂಡಾಗ ಸಿನಿಕತೆಯ ಧಾಟಿಯಲ್ಲಿ “ಗುರುಗ್ರಾಮವು ವೆನಿಸ್ ಆಗಿ ಬದಲಾಗುವುದು” ಈ ಬಗೆಯ ಮೀಮ್ ಗಳಲ್ಲೇ! “ಎಪ್ಪತ್ತೆಂಬತ್ತು ಕೋಟಿ ಬೆಲೆಬಾಳುವ ಫ್ಲಾಟ್ ಗಳು ಮತ್ತು ನೂರಾರು ಕೋಟಿಯ ಐಷಾರಾಮಿ ಕಾರ್ಪೋರೆಟ್ ಕಟ್ಟಡಗಳನ್ನು ನಿರ್ಮಿಸುವ ಭರದಲ್ಲಿ ಚರಂಡಿ ವ್ಯವಸ್ಥೆ ಮಾಡುವುದೇ ಇಲ್ಲಿಯ ಮಂದಿಗೆ ಮರೆತುಹೋಯಿತು”, ಅಂತ ಒಬ್ಬ ಬರೆಯುತ್ತಾನೆ. “ಇಷ್ಟು ತೆರಿಗೆಗಳನ್ನು ಪಾವತಿಸಿಯೂ, ಕಂತುಗಳನ್ನು ನಿಯಮಿತವಾಗಿ ಕಟ್ಟಿಯೂ, ನಾನಿವತ್ತು ಈಜುತ್ತಾ ಆಫೀಸಿಗೆ ಹೋಗಬೇಕಿದೆ. ಇದರ ಸಹವಾಸವೇ ಸಾಕು”, ಎಂದು ಮತ್ತೊಬ್ಬ ಬರೆಯುತ್ತಾನೆ. ಹೀಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕಿರುವ ಕೆಲ ಸಂಗತಿಗಳು ಬೆರಳೆಣಿಕೆಯ ಸಾಲುಗಳಲ್ಲೇ ನಗೆಚಟಾಕಿಗಳಾಗಿ ಕಳೆದುಹೋಗುತ್ತವೆ. ವಿಷಯದ ಗಾಂಭೀರ್ಯತೆಯು ಈ ಪ್ರವಾಹದಲ್ಲಿ ಅದೆಲ್ಲೋ ದಿಕ್ಕುತಪ್ಪಿರುವ ಕಾಗದದ ದೋಣಿಯಂತೆ ಸುಮ್ಮನೆ ತನ್ನ ಪಾಡಿಗೆ ತೇಲಿಹೋಗುತ್ತದೆ.

ಆಸ್ಕರ್ ವಿಜೇತ “ಪ್ಯಾರಸೈಟ್” ಚಿತ್ರದಲ್ಲಿ ಮನೋಜ್ಞವಾದ ದೃಶ್ಯವೊಂದಿದೆ. ಒಂದು ಚಂದದ ಕಾರಿನಲ್ಲಿ ಇಬ್ಬರು ಅದೆಲ್ಲಿಗೋ ಹೋಗುತ್ತಿದ್ದಾರೆ. ಮುಂಭಾಗದಲ್ಲಿ ಕೂತು ಚಾಲಕ ಡ್ರೈವ್ ಮಾಡುತ್ತಿದ್ದಾನೆ. ಈ ಕಾರು ಚಾಲಕ ಸಮಾಜದ ಕೆಳಮಧ್ಯಮ ವರ್ಗಕ್ಕೆ ಸೇರಿದವನು. ಹಿಂದಿನ ಸೀಟಿನಲ್ಲಿ ಮಾಲಕಿ ಆರಾಮಾಗಿ ಕೂತಿದ್ದಾಳೆ. ಹಿಂದಿನ ರಾತ್ರಿಯಷ್ಟೇ ಆ ನಗರದಲ್ಲಿ ಧಾರಾಕಾರ ಮಳೆ ಸುರಿದು ಅದೆಷ್ಟೋ ಮಂದಿ ಬೀದಿಗೆ ಬಿದ್ದಿದ್ದಾರೆ. ದುರಾದೃಷ್ಟವಶಾತ್ ಈ ಡ್ರೈವರ್ ಕೂಡ ಅವರಲ್ಲೊಬ್ಬ. ಆದರೆ ಇದ್ಯಾವುದರ ಬಗ್ಗೆಯೂ ಆಕೆಗೆ ತಿಳಿದಂತಿಲ್ಲ. ಇತ್ತ ಈಗಲೂ ಮಳೆ ಸಣ್ಣಗೆ ಸುರಿಯುತ್ತಿದೆ. ಹಿಂದಿನ ಸೀಟಿನಲ್ಲಿ ಕೂತಿರುವ ಶ್ರೀಮಂತ ಮಹಿಳೆ ಕಿಟಕಿಯಾಚೆಗೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಾ “ಆಹಾ… ಇವತ್ತಿನ ಹವಾಮಾನ ಅದೆಷ್ಟು ಆಹ್ಲಾದಕರವಾಗಿದೆ” ಅಂತ ಉದ್ಗರಿಸುತ್ತಿರುತ್ತಾಳೆ. ಆದರೆ ಅವಳ ಮಾತನ್ನು ಕೇಳಿ ಒಳಗೊಳಗೇ ಅವುಡುಗಚ್ಚುತ್ತಿರುವ ಚಾಲಕನ ರೋಷವು ಫ್ರೇಮಿನಲ್ಲಿ ಕಾಣುವುದು ನಮಗೆ ಮಾತ್ರ.

ದೆಹಲಿ ಮಳೆ

ವಿಚಿತ್ರವೆಂದರೆ ಮಹಾನಗರಗಳಲ್ಲಿರುವ ನಿವಾಸಿಗಳ ನಿರಾಸೆ-ಆಕ್ರೋಶಗಳು ಇಷ್ಟು ವರ್ಷಗಳ ನಂತರವೂ ತಲುಪಬೇಕಾದಲ್ಲಿ ತಲುಪಲು ವಿಫಲವಾಗಿರುವುದು. ಹೀಗಾಗಿ ಈ ಸುದ್ದಿಗಳು ಈಗ ಜುಜುಬಿ ಸುದ್ದಿಯಾಗಿಯಷ್ಟೇ ಉಳಿದುಹೋಗಿವೆ. ಅವುಗಳ ಆಯಸ್ಸು ಕೂಡ ಇಲ್ಲಿ ಬಂದುಹೋಗುವ ಮಳೆಯಷ್ಟೇ ಚಿಕ್ಕದು. ಮಹಾನಗರವೊಂದರಲ್ಲಿ ಹಠಾತ್ತನೆ ಮಳೆಯಾಗುವುದು, ನಗರವಿಡೀ ಅಲ್ಲೋಲಕಲ್ಲೋಲವಾದಂತೆ ಒದ್ದಾಡುವುದು, ಬಂದೆರಗುವ ಬ್ರೇಕಿಂಗ್ ನ್ಯೂಸುಗಳು, ಒಂದಿಷ್ಟು ಸಾವುನೋವಿನ ಸುದ್ದಿಗಳು, ಎಲ್ಲಾ ಮುಗಿದ ನಂತರ ಗಣ್ಯರೊಬ್ಬರು ಬಂದುಹೋಗುವುದು, ಆಯ್ತು ಮುಂದಿನ ಬಾರಿ ನೋಡೋಣವೆಂದು ಪತ್ರಿಕಾಗೋಷ್ಠಿಯಲ್ಲಿ ಹೇಳುವುದು, ನಂತರ ಫಾಲೋ-ಅಪ್ ಗಳಿಲ್ಲದೆ ಇವೆಲ್ಲ ಎಲ್ಲರಿಗೂ ಮರೆತುಹೋಗುವುದು… ಹೀಗೆ ಇಲ್ಲಿ ಪ್ರತಿಯೊಂದು ಸಂಗತಿಯೂ ಪ್ರತಿವರ್ಷವೂ ವ್ಯವಸ್ಥಿತವಾಗಿ, ಅನುಕ್ರಮವಾಗಿಯೇ ನಡೆಯುತ್ತದೆ. ಥೇಟು ಸಿದ್ಧಪಡಿಸಿಟ್ಟ ಚಿತ್ರಕಥೆಯ ನೀಲನಕ್ಷೆಯಲ್ಲೇ ಮೈದಾಳುವ ಸಿನೆಮಾಗಳಂತೆ. ಪ್ರಶ್ನಿಸುವವರು ಪ್ರಶ್ನಿಸುವುದನ್ನು ಮರೆತೇಬಿಟ್ಟಾಗ ಉತ್ತರದಾಯಿಗಳು ನಾಪತ್ತೆಯಾಗುವುದು ಸಹಜ ಕೂಡ!

ಇತ್ತೀಚೆಗೆ ವ್ಯಕ್ತಿಯೊಬ್ಬ ಸೋಫಾ ಕವರಿನೊಳಗಿರುವ ಹತ್ತಿಯ ಮುದ್ದೆಗಳನ್ನು ತೆಗೆಯುವ ಶೈಲಿಯಲ್ಲಿ, ಬರಿಗೈಯಿಂದಲೇ ಟಾರ್ ರಸ್ತೆಯೊಂದನ್ನು ಬಗೆಯುತ್ತಿದ್ದ. ಹೊಸದಾಗಿ ನಿರ್ಮಿಸಲಾಗಿದ್ದ ರಸ್ತೆಯೊಂದರ ತುಣುಕುಗಳು, ನೆಲದ ಮೇಲೆ ಈಗಷ್ಟೇ ಅಂಟಿಸಲಾಗಿದ್ದ ಹಸಿ ಡಾಂಬರಿನಂತೆ ಏಳುವ ಈ ವೀಡಿಯೋ ಭಾರೀ ವೈರಲ್ ಆಗಿತ್ತು ಮತ್ತು ಜನಾಕ್ರೋಶಕ್ಕೂ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಪ್ರತಿಯೊಂದು ಮುಗಿದ ಕಾಮಗಾರಿಯ ಬಳಿಯಲ್ಲೂ ದೊಡ್ಡದೊಂದು ಬೋರ್ಡು ಹಾಕಿ ಇದನ್ನು ಮಾಡಿಸಿರುವ ಇಲಾಖೆಯ ಹೆಸರು, ಗುತ್ತಿಗೆದಾರರ ಹೆಸರು, ಗುಣಮಟ್ಟದ ಪರಿವೀಕ್ಷಣೆ ಮಾಡಿದ ಸಂಸ್ಥೆಯ ಹೆಸರು, ತಗುಲಿದ ವೆಚ್ಚ… ಇತ್ಯಾದಿ ಪ್ರಾಥಮಿಕ ವಿವರಗಳನ್ನು ಅದರಲ್ಲಿ ಕಡ್ಡಾಯವಾಗಿ, ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಹಾಕುವ ವ್ಯವಸ್ಥೆಯಾಗಬೇಕೆಂಬ ಕೂಗೂ ಎದ್ದಿತು. ಒಟ್ಟಿನಲ್ಲಿ ಜನಸಾಮಾನ್ಯರ ಈ ಪ್ರಶ್ನೆಗಳನ್ನು ಗಂಭೀರ ಒತ್ತಡವಾಗಿ ಪರಿವರ್ತಿಸುವವರೆಗೂ ಇಂತಹ ಅವಾಂತರಗಳು ಮುಗಿಯುವಂಥದ್ದಲ್ಲ.

ಹಳ್ಳಿಗಳು ನಗರಗಳಾಗುತ್ತಿರುವ ಮತ್ತು ನಗರಗಳು ಮಹಾನಗರಗಳಾಗುತ್ತಿರುವ ಅಭಿವೃದ್ಧಿಯ ಮಾಡೆಲ್ಲುಗಳು ಏಕರೂಪದಲ್ಲಿದ್ದಾಗ ಪ್ರಕ್ರಿಯೆಯಲ್ಲಿರುವ ಕುಂದುಕೊರತೆಗಳನ್ನು ಕಾಲಕಾಲಕ್ಕೆ ಸರಿಪಡಿಸುವುದು ಜಾಣತನ. ಎಲ್ಲಕ್ಕಿಂತ ಹೆಚ್ಚಾಗಿ ಇವುಗಳು ಮೂಲಸೌಕರ್ಯದ ಮಾತಾಗಿರುವುದರಿಂದ ಭವಿಷ್ಯದ ದೂರದೃಷ್ಟಿಯೂ ಹೌದು. ಮಾತೆತ್ತಿದರೆ ಹಳ್ಳಿಗಳಿಗೆ ತೋರಿಸಲಾಗುತ್ತಿರುವ ಸ್ಮಾರ್ಟ್ ಸಿಟಿಗಳ ಕನಸು ಇದಿಷ್ಟೇ ಎಂಬ ಭಾವವು ಯಾರ ಮನದಲ್ಲೂ ಬರಬಾರದಲ್ಲ!

ಪ್ರಸಾದ್ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತುಮತ್ತುಮುಸ್ಸಂಜೆ ಮಾತುಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article