ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸಾಫ್ಟ್ ವೇರ್ ಎಂಜಿನಿಯರ್ ವೊಬ್ಬರನ್ನು ಮತ್ತೊಬ್ಬ ಸಾಫ್ಟ್ ವೇರ್ ಎಂಜಿನಿಯರ್ ಕಾರು ಗುದ್ದಿಸಿ ಕೊಲೆ ಮಾಡಿರುವ ಪ್ರಕರಣ ಕನಕಪುರ ರಸ್ತೆಯ ವಸಂತಪುರ ಕ್ರಾಸ್‌ನಲ್ಲಿ ಘಟನೆ ನಡೆದಿದೆ. 29 ವರ್ಷದ ಟೆಕ್ಕಿ ಸಂಜಯ್ ಕೊಲೆಯಾದ ದುರ್ದೈವಿ. ರಾಜರಾಜೇಶ್ವರಿ ನಗರದ ಪ್ರತೀಕ್ ಎಂಬಾತ ಕಾರು ಗುದ್ದಿಸಿ ಕೊಲೆ ಮಾಡಿದ ಆರೋಪಿ.
ಸಂಜಯ್ ತನ್ನ ಸಹದ್ಯೋಗಿ ಕಾರ್ತಿಕ್ ಜತೆ ಸಿಗರೇಟ್ ಸೇದಲು ಕಚೇರಿಯಿಂದ ಹೊರಬಂದಿದ್ದರು. ರಸ್ತೆ ಬದಿಯ ಸೈಕಲ್ ಶಾಪ್ ನಲ್ಲಿ ಸಿಗರೇಟ್ ತೆಗೆದುಕೊಂಡು ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರತೀಕ್ ಕಾರಿನಿಂದ ಇಳಿಯದೇ, ಸಂಜಯ್ ಗೆ ಸಿಗರೇಟ್ ತಂದುಕೊಡುವಂತೆ ಹೇಳಿದ್ದ. ಇದರಿಂದ ಕೋಪಗೊಂಡ ಸಂಜಯ್ ಮತ್ತು ಕಾರ್ತಿಕ್ ಆತನ ಜತೆ ಗಲಾಟೆ ಮಾಡಿದ್ದರು.
ಇಬ್ಬರನ್ನೂ ಅಂಗಡಿಯವರೇ ಸಮಾಧಾನ ಮಾಡಿ ಕಳುಹಿಸಿದ್ದರು. ಕೋಪಗೊಂಡ ಪ್ರತೀಕ್ ಮುಂದೆ ಹೋಗಿ ರಸ್ತೆ ಬದಿ ಕಾರನ್ನು ನಿಲ್ಲಿಸಿಕೊಂಡಿದ್ದ. ಸಂಜಯ್ ಮತ್ತು ಕಾರ್ತೀಕ್ ಸಿಗರೇಟ್ ಸೇದಿ ಬೈಕ್‌ನಲ್ಲಿ ಮುಂದೆ ಬರುತ್ತಿದ್ದಂತೆ ಪ್ರತೀಕ್ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ, ಸಂಜಯ್ ಸ್ಥಳದಲ್ಲೇ ಸಾವನ್ನಪ್ಪಿ ಕಾರ್ತಿಕ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಇದು ಅಪಘಾತ ಎಂದು ತಿಳಿದಿದ್ದ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಸತ್ಯ ತಿಳಿದು ಬಂದಿದೆ. ಸುಬ್ರಮಣ್ಯಪುರ ಪೊಲೀಸರು ಆರೋಪಿ ಪ್ರತೀಕ್ ನನ್ನು ಬಂಧಿಸಿದ್ದಾರೆ.