ಬೆಂಗಳೂರು: ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚಿಸುತ್ತಿದ್ದ ಸಿಐಡಿ ಅಧಿಕಾರಿ ಸೇರಿದಂತೆ ಇಬ್ಬರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಸಿಐಡಿ ಸೆಕ್ಷನ್ ಸೂಪರಿಂಟೆಂಡೆಂಟ್ ಆರ್ ಪಿಸಿ ಲೇ ಔಟ್ ನಿವಾಸಿ ಅನಿತಾ (42), ಮಧ್ಯವರ್ತಿ ರಾಮಚಂದ್ರ ಭಟ್ (56) ಬಂಧನಕ್ಕೆ ಒಳಗಾದ ರೋಪಿಗಳು.
ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಸುನಿಲ್ ಎಂಬುವವರು ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಬಲೆ ಬೀಸಿದ ಪೊಲೀಸರು ಅನಿತಾ ಮತ್ತು ರಾಮಚಂದ್ರ ಭಟ್ ಅವರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರಿನ ಕಲ್ಯಾಣ ನಗರದ ನಿವಾಸಿ ಸುನೀಲ್ ಅವರನ್ನು ಸಂಪರ್ಕಿಸಿದ್ದ ರಾಮಚಂದ್ರ ಭಟ್ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ, ನಂತರ ಆತನ ಸಿಐಡಿಯಲ್ಲಿ ಕೆಲಸ ಮಾಡುವ ಅನಿತಾ ಅವರನ್ನು ಪರಿಚಯಿಸಿದ್ದ. ಕೆಲಸ ಕೊಡಿಸುವ ನೆಪದಲ್ಲಿ ಇಬ್ಬರೂ ಹಣ ಪಡೆದು ವಂಚಿಸಿದ್ದನ್ನು ಕನ್ನಡ ಪ್ಲಾನೆಟ್ ವರದಿ ಮಾಡಿತ್ತು. ಇದಾದ ನಂತರ ಈಗ ಬಂಧನವಾಗಿದೆ.
ಸುನಿಲ್ ಗೆ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆ ಕೊಡಿಸುವುದಾಗಿ ಆರೋಪಿಗಳು ಭರವಸೆ ನೀಡಿ ಹಂತಹಂತವಾಗಿ 40 ಲಕ್ಷ ರುಪಾಯಿಗಳನ್ನು ಪಡೆದಿದ್ದರು. ಕೆಲಸ ಆಗದೇ ಇದ್ದಾಗ ಹಣ ವಾಪಾಸ್ ನೀಡುವಂತೆ ಸುನಿಲ್ ಒತ್ತಡ ಹೇರಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಸುನಿಲ್ ಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.