ಚೂರಿ ಫಯಾಜ್ ಕೈಯ್ಯಲ್ಲಿತ್ತು…! ಕೊಲೆ ಮಾಡಿದವರು ಯಾರು ?

Most read

ನಿಜವಾಗಿ ನಮ್ಮಲ್ಲಿ ಆಕ್ರೋಶ ಮಡುಗಟ್ಟಬೇಕಿರುವುದು ಫಯಾಜ್ ಮತ್ತು ನೇಹಾಳನ್ನು ಒಟ್ಟಿಗೆ ಬದುಕಲು ಬಿಡದ ವ್ಯವಸ್ಥೆಯ ಬಗ್ಗೆ! ಇಂತಹ ಜಾತಿ/ಧರ್ಮಾಧರಿತವಾಗಿ ಬದುಕುವ ವ್ಯವಸ್ಥೆಯನ್ನು ಬದಲಿಸದೇ ಇಂತಹ ಸಾವು ನೋವುಗಳನ್ನು ಎನ್ ಕೌಂಟರ್, ಬುಲ್ಡೊಜರ್ ಗಳಿಂದ ನಿಲ್ಲಿಸಲಾಗುವುದಿಲ್ಲನವೀನ್ ಸೂರಿಂಜೆ

“ವಿದ್ಯಾರ್ಥಿನಿ ನೇಹಾಳ ಕೊಲೆ ಮಾಡಿದ ಪಾತಕಿ ಫಯಾಜ್ ಗೆ ಗಲ್ಲು ಶಿಕ್ಷೆ ವಿಧಿಸಿ, ನರಹಂತಕನನ್ನು ಎನ್ ಕೌಂಟರ್ ಮಾಡಿ, ಅವನ ಮನೆಗೆ ಬುಲ್ಡೋಜರ್ ಹತ್ತಿಸಿ, ನಾಳೆ ಬೆಳಗ್ಗಿನ ಸೂರ್ಯೋದಯವನ್ನು ಆತ ನೋಡಬಾರದು” ಈ ರೀತಿ ಹೇಳಿಕೆಗಳನ್ನು ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ನೀಡುತ್ತಿದ್ದಾರೆ. ವಿಪರ್ಯಾಸ ಎಂದರೆ ಬುದ್ಧಿಜೀವಿಗಳು ಕೂಡಾ ಇದೇ ಮಾದರಿಯಲ್ಲಿ ನೇಹಾ ಕೊಲೆಯನ್ನು ಖಂಡಿಸುತ್ತಿದ್ದಾರೆ. ಆದರೆ ಕೊಲೆಯ ಮೂಲ ಕಾರಣದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಫಯಾಜ್ ಕೈಯ್ಯಲ್ಲಿ ಚೂರಿ ಇದ್ದು ಆತ ಚುಚ್ಚಿದ್ದು ನಿಜ. ಆದರೆ ಕೊಲೆಗಾರ ಫಯಾಜ್ ಮಾತ್ರವಲ್ಲ. ನಾವೆಲ್ಲರೂ ಇರುವ ಸಮಾಜವೂ ಈ ಕೊಲೆಯ ಜವಾಬ್ದಾರಿಯನ್ನು ಹೊರಬೇಕು.

ಇದೇ ಮನಸ್ಥಿತಿಯ ಫಯಾಜ್ ಮುಸ್ಲಿಮನಲ್ಲದೇ, ಹಿಂದೂವಾಗಿದ್ದರೂ ನೇಹಾ ಜಾತಿಗಿಂತ ಭಿನ್ನ ಜಾತಿಯವನಾಗಿದ್ದರೂ ಇಂದು ಕೊಲೆಗಾರನಾಗುತ್ತಿದ್ದ. ಯಾಕೆಂದರೆ ಕೊಲೆಯ ಹಿಂದೆ ಪ್ರೀತಿಗೆ ಅಡ್ಡಿಯಾಗಿರುವ ಜಾತಿ/ಧರ್ಮ ಇತ್ತು. ಹಿಂದೂ ಮುಸ್ಲಿಮರು ಪ್ರೀತಿಸಬಾರದು, ಮದುವೆ ಆಗಬಾರದು ಎಂದು ಅಲಿಖಿತ ನಿಯಮಗಳನ್ನು ಹೇರಿರುವ ಸಮಾಜದಲ್ಲಿ ನೇಹಾ ಮತ್ತು ಫಯಾಜ್ ಪ್ರೀತಿಸಿದ್ದರು. ಅವರಿಬ್ಬರು ಪ್ರೀತಿಸುತ್ತಿರುವುದು ಇಡೀ ಕಾಲೇಜಿಗೆ ಗೊತ್ತಿತ್ತು. ಇಬ್ಬರು ಪ್ರೀತಿಸುವ ರೀಲ್ಸ್ ಗಳು ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು.

ಫಯಾಜ್ ಮತ್ತು ನೇಹಾ ಪ್ರೀತಿಸುತ್ತಿರುವುದು ಎರಡೂ ಕುಟುಂಬಗಳಿಗೆ ಗೊತ್ತಿತ್ತು. ಫಯಾಜ್ ನ ತಂದೆಯ ಬಳಿ ನೇಹಾ ತಂದೆ ಈ ಬಗ್ಗೆ ಮಾತನಾಡಿದ್ದರು. ಮಗಳಿಂದ ಫಯಾಜ್ ನನ್ನು ದೂರ ಮಾಡುವಂತೆ ನೇಹಾ ತಂದೆ ಕೇಳಿಕೊಂಡಿದ್ದರು. ಅದಕ್ಕಾಗಿ ಫಯಾಜ್ ನನ್ನು ಅಮ್ಮನ ಮನೆಗೆ ಶಿಫ್ಟ್ ಕೂಡಾ ಮಾಡಿಸಿದ್ದರು. ಈ ಮಧ್ಯೆ ಓದುತ್ತಿದ್ದ ಮಗಳು ನೇಹಾಗೆ ಮದುವೆಗೆ ಗಂಡು ಹುಡುಕಲು ಶುರು ಮಾಡಿದ್ದರು. ನನಗೆ ಓದಬೇಕು. “ಈಗಲೇ ಮದುವೆ ಬೇಡ” ಎಂದು ನೇಹಾ ತನ್ನ ಸೀನಿಯರ್ ಕಾಲೇಜ್ ಮೇಟ್ ಬಳಿ ಹೇಳಿಕೊಂಡಿದ್ದಳು ಕೂಡಾ. ಓದು ಮುಂದುವರೆಯಬೇಕು ಎಂಬ ಆಸೆಯಿಂದ ತಂದೆ ತಾಯಿಯರ ಮಾತಿಗೆ ಕಟ್ಟುಬಿದ್ದು ಫಯಾಜ್ ನನ್ನು ನೇಹಾ ದೂರ ಮಾಡಿದ್ದಳು. ಇದಾದ ಬಳಿಕವೇ ನೇಹಾಳನ್ನು ತೀರಾ ಹಚ್ಚಿಕೊಂಡಿದ್ದ / ಪೊಸೆಸಿವ್ ಆಗಿದ್ದ ಫಯಾಜ್ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ.

ಮುಸ್ಲಿಮ್ ಹುಡುಗರನ್ನು ಲವ್ ಮಾಡುವುದು ಅಪರಾಧ ಎಂಬ ನೆರೇಟಿವ್ ಅನ್ನು ನೇಹಾಳ ತಂದೆ ತಾಯಿಯ ತಲೆಗೆ ತುಂಬಿದವರು ಯಾರು ? ಅಂತರಜಾತಿ ಮದುವೆಯಾದರೆ ಗೌರವಕ್ಕೆ ಕುಂದಾಗುತ್ತದೆ, ಅಂತರಧರ್ಮೀಯ ಮದುವೆಯಾದರೆ ಸಮಾಜ ಒಪ್ಪಲ್ಲ ಎಂದು ನಮಗೇ ಗೊತ್ತಿಲ್ಲದಂತೆ ನಮಗೆ ಬೆದರಿಸಿದವರು ಯಾರು ? ಹಿಂದೂ ಮುಸ್ಲಿಂ ಪ್ರೀತಿಯನ್ನು ಲವ್ ಜಿಹಾದ್ ಎಂದೂ, ಇಂತಹ ಪ್ರೇಮ ಪ್ರಸಂಗ ನಡೆದರೆ ಗಲಾಟೆ ಆಗುತ್ತದೆ ಎಂದೂ ಭಯ ಹುಟ್ಟಿಸಿದವರೆಲ್ಲರೂ ಫಯಾಜ್ ಮಾಡಿರುವ ಕೊಲೆಯ ಸಮಾನ ಪಾಲುದಾರರು.

ನೇಹಾ ಕೊಲೆಯನ್ನು ಕಂಡು ಫಯಾಜ್ ಮೇಲೆ ಕೋಪ ಉಕ್ಕಿ ಬಂದರೆ ಅದು ಒಂದೋ ನಕಲಿ ಅಥವಾ ತಾತ್ಕಾಲಿಕವಷ್ಟೆ. ಕೊಲೆ ಮಾಡಿದರವನ್ನೆಲ್ಲಾ ಎನ್ ಕೌಂಟರ್ ಮಾಡಲಾಗಲ್ಲ. ನಮ್ಮ ಸಮಾಧಾನಕ್ಕೆ ನಾವು ಅಬ್ಬರಿಸಬೇಕಷ್ಟೆ. (ಆರೋಪಿ ಪೊಲೀಸರ ಮೇಲೆ ಸಶಸ್ತ್ರ ದಾಳಿ ಮಾಡಿದರೆ ಮಾತ್ರ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಬಹುದು) ಹಾಗಾಗಿ ನಿಜವಾಗಿ ನಮ್ಮಲ್ಲಿ ಆಕ್ರೋಶ ಮಡುಗಟ್ಟಬೇಕಿರುವುದು ಫಯಾಜ್ ಮತ್ತು ನೇಹಾಳನ್ನು ಒಟ್ಟಿಗೆ ಬದುಕಲು ಬಿಡದ ವ್ಯವಸ್ಥೆಯ ಬಗ್ಗೆ! ಇಂತಹ ಜಾತಿ/ಧರ್ಮಾಧರಿತವಾಗಿ ಬದುಕುವ ವ್ಯವಸ್ಥೆಯನ್ನು ಬದಲಿಸದೇ ಇಂತಹ ಸಾವು ನೋವುಗಳನ್ನು ಎನ್ ಕೌಂಟರ್, ಬುಲ್ಡೊಜರ್ ಗಳಿಂದ ನಿಲ್ಲಿಸಲಾಗುವುದಿಲ್ಲ.

ನವೀನ್‌ ಸೂರಿಂಜೆ

ಪತ್ರಕರ್ತರು

More articles

Latest article