ಬೆಂಗಳೂರು: ರಾಮಮೂರ್ತಿ ನಗರದಲ್ಲಿ ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಹೆಸರಿನಲ್ಲಿ ಅಧಿಕ ಬಡ್ಡಿ ಆಸೆ ತೋರಿಸಿ ಕೇರಳ ಮೂಲದ ದಂಪತಿ ಹಲವರಿಂದ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದಾರೆ ಎಂದು ಹಣ ಕಳೆದುಕೊಂಡವರು ಆರೋಪಿಸಿದ್ದಾರೆ.
ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಸಂಸ್ಥೆಯ ಮಾಲೀಕರಾದ ಎ.ವಿ.ಟಾಮಿ ಮತ್ತು ಅವರ ಪತ್ನಿ ಶಿನಿ ಟಾಮಿ ಪರಾರಿಯಾದ ದಂಪತಿ. ಇವರ ವಿರುದ್ಧ ರಾಮಮೂರ್ತಿನಗರ ನಿವಾಸಿ, ಪಿ.ಟಿ.ಸ್ಯಾವಿಯೊ ಅವರು ದೂರು ನೀಡಿದ್ದಾರೆ. ಈ ದಂಪತಿ ವಿರುದ್ಧ ಚಿಟ್ ಫಂಡ್ ಕಾಯ್ದೆ, ರಾಮಮೂರ್ತಿ ನಗರ ಪೊಲೀಸರು ಎಫ್ ಐ ಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಸುಮಾರು ನೂರಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಎ.ವಿ.ಟಾಮಿ ದಂಪತಿ, ಅಧಿಕ ಬಡ್ಡಿ ಆಸೆ ತೋರಿಸಿ ಹಲವರಿಂದ ಠೇವಣಿ ಮತ್ತು ಚೀಟಿ ರೂಪದಲ್ಲಿ ಹಣ ಸಂಗ್ರಹಿಸಿದ್ದಾರೆ. ಅನೇಕ ಮಂದಿ ಈವರೆಗೆ ಸುಮಾರು ರೂ. 70 ಲಕ್ಷ ಹಣವನ್ನು ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಾಕಿದ್ದೇವೆ. ಇದೇ ರೀತಿ ಹಲವರು ಕೋಟ್ಯಂತರ ರೂಪಾಯಿ ಹಣವನ್ನು ಈ ಸಂಸ್ಥೆಗೆ ಕಟ್ಟಿದ್ದಾರೆ ಎಂದು ಸ್ಯಾವಿಯೊ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಇತ್ತೀಚೆಗೆ ಏಕಾಏಕಿ ಕಚೇರಿ ಬಾಗಿಲು ಹಾಕಿರುವುದು ಕಂಡು ಬಂತು. ಅಕ್ಕಪಕ್ಕದ ಅಂಗಡಿಯವರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಸಿಗಲಿಲ್ಲ. ಇಬ್ಬರ ಮೊಬೈಲ್ ಗಳು ಬಂದ್ ಆಗಿವೆ. ಈ ವಂಚಕ ದಂಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರ ಪ್ರಕಾರ ಟಾಮಿ ದಂಪತಿ ಸುಮಾರು ರೂ.14 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ. ಸದ್ಯ ಇಬ್ಬರೂ ತಲೆಮರೆಸಿಕೊಂಡಿದ್ದು, ಇವರ ಹುಡುಕಾಟ ನಡೆಸಲಾಗಿದೆ.