ಚೆಕ್ ಬೌನ್ಸ್ ಪ್ರಕರಣ: ರಾಮ್ ಗೋಪಾಲ್ ವರ್ಮಾಗೆ 3 ತಿಂಗಳ ಜೈಲು ಶಿಕ್ಷೆ

Most read

ಹೈದರಾಬಾದ್: ಚೆಕ್ ಬೌನ್ಸ್ ಪ್ರಕರಣದಲ್ಲಿ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮುಂಬೈನ ಸ್ಥಳೀಯ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜನವರಿ 21ರಂದು ರಾಮ್ ಗೋಪಾಲ್ ವರ್ಮಾ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ, ಅವರು ಗೈರಾಗಿದ್ದರು. ಹೀಗಾಗಿ, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

2018ರಲ್ಲಿ ಮುಂಬೈನಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಆ ಸಮಯದಲ್ಲಿ ಮಹೇಶ್ಚಂದ್ರ ಮಿಶ್ರಾ ಎಂಬುವರು ರಾಮಗೋಪಾಲ್ ವರ್ಮಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಕಳೆದ ಏಳು ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿತ್ತು. ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗುವಂತೆ ರಾಮ್ ಗೋಪಾಲ್ ವರ್ಮಾ ಅವರಿಗೆ ನೋಟಿಸ್ ನೀಡಿದರೂ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಮುಂದಿನ ಮೂರು ತಿಂಗಳಲ್ಲಿ ದೂರುದಾರರಿಗೆ ರೂ. 3.72 ಲಕ್ಷ ಪರಿಹಾರ ನೀಡಬೇಕು. ಒಂದು ವೇಳೆ ಪರಿಹಾರ ನೀಡಲು ವಿಫಲವಾದಲ್ಲಿ  3 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಕಳೆದ ವರ್ಷ ಬಿಡುಗಡೆಗೊಂಡಿದ್ದ ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ವ್ಯೂಹಂ’ ಚಿತ್ರ ಆಂಧ್ರಪ್ರದೇಶದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ನಂತರ, ರಾಮ್‌ಗೋಪಾಲ್‌ ವರ್ಮಾ ಅವರನ್ನು ರಾಜ್ಯದಿಂದ ಉಚ್ಚಾಟಿಸಬೇಕು ಎಂದು ರಾಜ್ಯದ ಹಲವಾರು ರಾಜಕೀಯ ಮುಖಂಡರು ಆಗ್ರಹಪಡಿಸಿದ್ದರು.

ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಸಾವಿಗೆ ಸಂಬಂಧಿಸಿದ ಸನ್ನಿವೇಶಗಳ ಕುರಿತ ಕಥಾವಸ್ತು ಹೊಂದಿದ್ದ ಈ ಚಿತ್ರದಲ್ಲಿ ಮಾನಸ ರಾಧಾಕೃಷ್ಣನ್‌, ಅಜ್ಮಲ್ ಅಮೀರ್‌ ಹಾಗೂ ಸುರಭಿ ಪ್ರಭಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದೇ ವಿಚಾರವಾಗಿ, ಹೈದರಾಬಾದ್‌ನಲ್ಲಿರುವ ತಮ್ಮ ಕಚೇರಿ ಮುಂದೆ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿ ರಾಮ್‌ ಗೋಪಾಲ್ ವರ್ಮಾ ಅವರು ಆಂಧ್ರ ಮುಖ್ಯಮಂತ್ರಿ, ಟಿಡಿಪಿ ವರಿಷ್ಠ ಎನ್‌.ಚಂದ್ರಬಾಬು ನಾಯ್ಡು, ಪುತ್ರ ನಾರಾ ಲೋಕೇಶ್‌ ಹಾಗೂ ಜನ ಸೇನಾ ಪಕ್ಷದ ಸಂಸ್ಥಾಪಕ ಪವನ್‌ ಕಲ್ಯಾಣ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

More articles

Latest article