ಇಮೇಜ್ ಸರ್ಚ್ ಅನಾಲಿಟಿಕ್ಸ್ ಸಾಫ್ಟ್‌ವೇರ್ ಬಳಕೆ: ಎಸ್‌ ಬಿಐ ಬ್ಯಾಂಕ್‌ ಗೆ ರೂ. 8 ಕೋಟಿ ವಂಚಿಸಿ ಪರಾರಿಯಾಗಿದ್ದ ಮಹಿಳೆ ಬಂಧನ

Most read

ನವದೆಹಲಿ: ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯೊಂದರಿಂದ 8 ಕೋಟಿ ರೂ. ಹಣವನ್ನು ಸಾಲ ಪಡೆದು, ಸಾಲ ಕಟ್ಟದೆ ವಂಚನೆ ಮಾಡಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆಯನ್ನು ಸಿಬಿಐ ಬಂಧಿಸಿದೆ. ಮಣಿ ಎಂ. ಶೇಖರ್ (48) ಬಂಧಿತ ಮಹಿಳೆ. ಈಕೆಯನ್ನು ಇತ್ತೀಚೆಗೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಜುಲೈ 12ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಬಿಐ ಮಣಿ ಅವರನ್ನು ಘೋಷಿತ ಅ‍ಪರಾಧಿ ಎಂದು ಘೋಷಿಸಿತ್ತು.

ಮಣಿ ಹಾಗೂ ಅವರ ಪತಿ ಶೇಖರ್ ಗೃಹ ಉದ್ಯಮ ಆರಂಭಿಸುವುದಾಗಿ 2003 ರಿಂದ 2005ರ ಅವಧಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎಸ್‌ ಬಿ ಐ ಬ್ಯಾಂಕ್‌ ನಿಂದ ಸಾಲ ಪಡೆದಿದ್ದರು. ಆದರೆ ಅವರು ಸಾಲ ಪಡೆದು ಪರಾರಿಯಾಗಿದ್ದರು. ನಂತರ ಮಣಿ, ಶೇಖರ್ ಹಾಗೂ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಗಳ ವಿರುದ್ಧ ಸಿಬಿಐ ನ್ಯಾಯಾಲಯಕ್ಕೆ 2005ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಒಂದು ದಿನ ಮಾತ್ರ ವಿಚಾರಣೆಗೆ ಹಾಜರಾಗಿದ್ದ ಶೇಖರ್ ಹಾಗೂ ಮಣಿ ನಾಪತ್ತೆಯಾಗಿದ್ದರು. ಅಂದಿನಿಂದ ಮಣಿ ಹಾಗೂ ಶೇಖರ್‌ ಗಾಗಿ ಸಿಬಿಐ ಪೊಲೀಸರು ಹುಡುಕಾಟ ನಡೆಸಿದ್ದರೂ ಸಾದ್ಯವಾಗಿರಲಿಲ್ಲ. ಅವರ ಬಗ್ಗೆ ಸುಳಿವು ನೀಡಿದವರಿಗೆ ರೂ.1 ಲಕ್ಷ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು.

ಸಿಬಿಐ ತನ್ನಲ್ಲಿ ದಾಖಲಾದ ಪ್ರಕರಣಗಳ ತನಿಖೆಗಳ ಸಹಾಯಕ್ಕಾಗಿ ಅತ್ಯಾಧುನಿಕ ಇಮೇಜ್ ಸರ್ಚ್ ಅನಾಲಿಟಿಕ್ಸ್ ಸಾಫ್ಟ್‌ವೇರ್ ಅನ್ನು ಬಳಸಿಕೊಳ್ಳಲು ಆರಂಭಿಸಿತ್ತು. ಇದೇ ಸಾಫ್ಟ್‌ ವೇರ್ ಬಳಸಿ ಪೊಲೀಸರು ಮಣಿ ಹಾಗೂ ಶೇಖರ್ ಅವರ ಹಳೆಯ ಇಮೇಜ್‌ ಗಳನ್ನು ಇಟ್ಟುಕೊಂಡು ಇಂಟರ್‌ ನೆಟ್‌ ನಲ್ಲಿ ಹುಡುಕಾಟ ನಡೆಸಿದಾಗ ಅವರು ಕಣ್ಣಿಗೆ ಬಿದ್ದಿದ್ದರು.

ಇಮೇಜ್ ಸರ್ಚ್ ತಂತ್ರಜ್ಞಾನ ಕೊಟ್ಟ ಶೇ. 90 ರಷ್ಟು ಸಾಮ್ಯತೆಯ ಸುಳಿವು ಆಧರಿಸಿ ಸಿಬಿಐ ಪೊಲೀಸರು ಅವರನ್ನು ಪತ್ತೆ ಮಾಡಿದರು. ಇಂಧೋರ್‌ ನಲ್ಲಿ ಮಣಿ ದಂಪತಿ ತಮ್ಮ ಹೆಸರು ಮತ್ತು ಗುರುತು ಮರೆಮಾಚಿ ಜೀವನ ನಡೆಸುತ್ತಿದ್ದರು. ಅಲ್ಲಿಂದ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ ಎಂದು ಸಿಬಿಐ ವಕ್ತಾರರು ಹೇಳಿದ್ದಾರೆ.

ಮಣಿ ಹಾಗೂ ಶೇಖರ್ ತಮ್ಮ ಹೆಸರಿನ, ಗುರುತಿನ ಎಲ್ಲ ದಾಖಲೆಗಳನ್ನು ನಾಶಗೊಳಿಸಿ ಯಾರಿಗೂ ಸಂದೇಹ ಬರದಂತೆ ಹೊಸ ದಾಖಲೆಗಳನ್ನು ಸೃಷ್ಟಿಸಿಕೊಂಡು ಇಂಧೋರ್‌ ನಲ್ಲಿ ನೆಲೆಸಿದ್ದರು. ಗೀತಾ ಕೃಷ್ಣಕುಮಾರ್ ಗುಪ್ತಾ (ಮಣಿ), ಕೃಷ್ಣಕುಮಾರ್ ಗುಪ್ತಾ (ಶೇಖರ್) ಎಂದು ಹೆಸರು ಬದಲಿಸಿಕೊಂಡು ರಿಯಲ್ ಎಸ್ಟೇಟ್ ಮಾಡುತ್ತಾ ಜೀವನ ಮಾಡುತ್ತಿದ್ದರು ಎಂದು ಸಿಬಿಐ ತಿಳಿಸಿದೆ. 2008 ರಲ್ಲಿ ಶೇಖರ್ ಅನಾರೋಗ್ಯದಿಂದ ತೀರಿಕೊಂಡಿರುವುದಾಗಿ ಮಣಿ ತಿಳಿಸಿದ್ದಾರೆ.

More articles

Latest article