ಬೆಂಗಳೂರು: ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಹಾಸನದ ಸಿವಿಲ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
13 ಸಾವಿರಕ್ಕೂ ಅಧಿಕ ಪುಟಗಳಿರುವ ಚಾರ್ಜ್ ಶೀಟ್ ನಲ್ಲಿ, ಬಿಜೆಪಿ ಮುಖಂಡ ದೇವರಾಜೇಗೌಡ ಸೇರಿ 39 ಮಂದಿಯ ವಿರುದ್ಧ ಆರೋಪ ದೃಢಪಡಿಸಿ ಸಾಕ್ಷಿ ಒದಗಿಸಲಾಗಿದೆ.
ಕಳೆದ 2024 ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಚುನಾವಣಾ ಏಜೆಂಟ್ ವಕೀಲ ಪೂರ್ಣ ಚಂದ್ರ ಅವರು ಪೊಲೀಸ್ ದೂರು ನೀಡಿದ್ದರು. ಈ ಹಿನ್ನೆಲೆ ಸರ್ಕಾರವು ವಿಶೇಷ ತನಿಖಾ ದಳವನ್ನು ನೇಮಿಸಿ ತನಿಖೆಗೆ ಸೂಚಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 52 ಆರೋಪಿಗಳ ಹೆಸರು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆ ಪೈಕಿ 39 ಜನರ ವಿರುದ್ಧ ಆರೋಪಗಳನ್ನು ದೃಢಪಡಿಸಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಮೊದಲನೇ ಆರೋಪಿ ನವೀನ್, 2ನೇ ಆರೋಪಿ ಪ್ರಜ್ವಲ್ ರೇವಣ್ಣ ಕಾರು ಚಾಲಕ ಕಾರ್ತಿಕ್, 8 ನೇ ಆರೋಪಿಯಾಗಿ ಬಿಜೆಪಿ ಮುಖಂಡ ದೇವರಾಜೇಗೌಡ ಹೆಸರು ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೇರಿದ ಹಲವರ ಹೆಸರುಗಳಿವೆ ಎನ್ನಲಾಗುತ್ತಿದೆ
ತನಿಖೆಯಲ್ಲಿ ಹಲವು ಸ್ಪೋಟಕ ಅಂಶಗಳು ಬಯಲಾಗಿದ್ದು. 277 ಜನ ಸಾಕ್ಷಿಗಳ ಹೇಳಿಕೆಗಳನ್ನು ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ. ಪ್ರಮುಖವಾಗಿ ಪ್ರಜ್ವಲ್ ರೇವಣ್ಣ ಕುರಿತಾದ ಅಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡಲು ಹಾಸನದಲ್ಲಿಯೇ 70 ಪೆನ್‌ಡ್ರೈವ್‌ಗಳನ್ನು ಖರೀದಿಸಿದ್ದರು ಎಂಬುದು ಪತ್ತೆಯಾಗಿದೆ.

