ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎನ್ನುವ ಹೆಸರಿಗೆ ಪರ್ಯಾಯ ಕನ್ನಡ ಪದಗಳನ್ನು ಸೂಚಿಸಲು ಸಾರ್ವಜನಿಕರಿಗೆ ಕರೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡೆ ಪ್ರಜಾಸತ್ತಾತ್ಮಕವಾಗಿದ್ದು, ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ವಾಗತಿಸುತ್ತದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಈ ಕುರಿತಂತೆ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎನ್ನುವ ಹೆಸರು ಕನ್ನಡದ ಅಸ್ಮಿತೆಯನ್ನು ಸಮರ್ಥವಾಗಿ ಪ್ರತಿಬಿಂಬಿಸಬೇಕಾದಲ್ಲಿ ಅದಕ್ಕೆ ಬೃಹತ್ ಬೆಂಗಳೂರು ಪ್ರಾಧಿಕಾರ ಎಂದು ಕರೆಯುವುದು ಹೆಚ್ಚು ಸಮಂಜಸವಾಗುತ್ತದೆ ಎಂದಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎನ್ನುವ ಪದವನ್ನು ಕನ್ನಡೀಕರಿಸಲು ಹಲವಾರು ಸಲಹೆಗಳು ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, ಒಟ್ಟಾರೆಯಾಗಿ ಅದನ್ನು ಬೃಹತ್ ಬೆಂಗಳೂರು ಪ್ರಾಧಿಕಾರ ಎಂದು ಕರೆಯುವುದೇ ಸಮಂಜಸವೆನ್ನುವ ಅಭಿಪ್ರಾಯ ಒಡಮೂಡಿದೆ ಎಂದಿರುವ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಲುವು ಸಹ ಬೃಹತ್ ಬೆಂಗಳೂರು ಪ್ರಾಧಿಕಾರ ಎಂದೇ ಆಗಿದ್ದು, ಈ ರೀತಿಯಲ್ಲಿ ಹೆಸರನ್ನು ಬದಲಾಯಿಸಿದಲ್ಲಿ ಸರ್ಕಾರವು ಕನ್ನಡದ ಅಸ್ಮಿತೆಯನ್ನು ಗೌರವಿಸಿದಂತಾಗುತ್ತದೆ ಹಾಗೂ ಪ್ರಾಧಿಕಾರವು ಮಾನಸಿಕವಾಗಿ ಎಲ್ಲ ಕನ್ನಡಿಗರಿಗೆ ಆಪ್ತವಾಗುವ ಅವಕಾಶವನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಆದೇಶವನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಉಪ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಮಹಾಪೌರರು ಮತ್ತು ಉಪ ಮಹಾಪೌರರು ಕನ್ನಡದವರೇ ಆಗಿರಲಿ: ಮುಂದಿನ ದಿನಗಳಲ್ಲಿ ಪ್ರಾಧಿಕಾರ(ಜಿಬಿಎ)ದ ವ್ಯಾಪ್ತಿಯ ಪಾಲಿಕೆಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಆಯ್ಕೆಯಾಗುವ ಪಾಲಿಕೆಯ ಮಹಾಪೌರರುಗಳು ಕಡ್ಡಾಯವಾಗಿ ಕನ್ನಡದವರೇ ಆಗಿರುವಂತೆ ಸರ್ಕಾರವು ನೋಡಿಕೊಳ್ಳಬೇಕಿದೆ ಎಂದಿರುವ ಬಿಳಿಮಲೆ, ಕನ್ನಡ ಭಾಷೆ ರಾಜಧಾನಿ ಬೆಂಗಳೂರು ನಗರದಲ್ಲಿ ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಬೇಕಾದಲ್ಲಿ ಸರ್ಕಾರದ ಈ ನಡೆ ಅತ್ಯಾವಶ್ಯಕವಾಗಿದೆ ಎಂದಿದ್ದಾರೆ. ಸರ್ಕಾರವು ಈಗಿನಿಂದಲೇ ಈ ಬಗ್ಗೆ ಗಮನ ಹರಿಸುವುದು ಒಳಿತು ಎಂದು ಅವರು ಸಲಹೆ ನೀಡಿದ್ದಾರೆ.