ಅಯೋಧ್ಯೆಯ ರಾಮಮಂದಿರವು ರಮಾನಂದ ಪಂಥಕ್ಕೆ ಸೇರಿದ್ದೇ ಹೊರತು ಸನ್ಯಾಸಿಗಳು, ಶೈವರು ಅಥವಾ ಶಾಕ್ತರಿಗಲ್ಲ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ (Shri Ram Janmabhoomi Teerth Kshetra Trust) ಚಂಪತ್ ರಾಯ್ (Champat Rai) ಹೇಳಿದ್ದಾರೆ.
‘ಅಮರ ಉಜಾಲಾ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇದು ರಾಮಮಂದಿರವಾಗಿರುವುದರಿಂದ ರಮಾನಂದರ ಸಂಪ್ರದಾಯವನ್ನು ಅನುಸರಿಸಲಾಗುವುದು. ದೇವಾಲಯವು ರಮಾನಂದ ಪಂಥಕ್ಕೆ ಸೇರಿದ್ದು, ಸನ್ಯಾಸಿಗಳಿಗೆ ಶೈವ ಅಥವಾ ಶಾಕ್ತರಿಗೆ ಅಲ್ಲ” ಎಂದು ಅವರು ಹೇಳಿದ್ದಾರೆ.
ಚಂಪತ್ ರಾಯ್ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ (Shankaracharya Nishchalananda Saraswati) ಅವರು, ಜನವರಿ.22ರಂದು ನಡೆಯಲಿರುವ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ತಾವು ಹೋಗುವುದಿಲ್ಲ. ಅಧಿಕಾರ ಸ್ಥಾನದಲ್ಲಿರುವಾಗ ನಿಮ್ಮ ವ್ಯಕ್ತಿತ್ವಕ್ಕೆ ಕುಂದು ತಂದುಕೊಳ್ಳಬೇಡಿ ಎಂದು ಅವರು ಚಂಪತ್ ರಾಯ್ಗೆ ಕಿವಿಮಾತು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಅದ್ದೂರಿ ಕಾರ್ಯಕ್ರಮದ ಬಗ್ಗೆ ನನಗೆ ಅಸಮಾಧಾನವಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳ ಕಾರಣದಿಂದ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗುತ್ತಿದೆ. ಇದನ್ನು ರಾಜಕೀಯ ಪ್ರದರ್ಶನವಾಗಿ ಪರಿವರ್ತಿಸಲಾಗುತ್ತಿದೆ. ಹಾಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರ್ತಿಯನ್ನು ಅನಾವರಣ ಮಾಡುವ ಸಂದರ್ಭದಲ್ಲಿ ನಾವು ದೇವಸ್ಥಾನದ ಹೊರಗೆ ಕುಳಿತು ಚಪ್ಪಾಳೆ ತಟ್ಟುವುದು ಸೂಕ್ತವಲ್ಲ ಎನ್ನಿಸಿದೆ ಎಂದು ಶಂಕರಾಚಾರ್ಯ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಹಿಂದುತ್ವ, ಅಭಿವೃದ್ಧಿಯ ಹೆಸರಿನಲ್ಲಿ ತೀರ್ಥಸ್ಥಳಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ, ಅಂದರೆ ತೀರ್ಥಸ್ಥಳಗಳನ್ನು ಭೋಗ ಸ್ಥಳಗಳಾಗಿ ಪರಿವರ್ತಿಸಲಾಗುತ್ತಿದೆ. ಇದನ್ನೇ ಅಭಿವೃದ್ಧಿ ಎಂದು ಜನರು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾಲ್ವರು ಶಂಕರಾಚಾರ್ಯರು ರಾಮಮಂದಿರ ನಿರ್ಮಾಣದಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ ಎಂದು ದಿವೈರ್ ವರದಿ ಮಾಡಿದೆ. ಇದೊಂದು ರಾಜಕೀಯೆತರ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆಯಾದರೂ ಇದು ಬಿಜೆಪಿ ಪಾಲಿಗೆ ರಾಜಕೀಯ ಕಾರ್ಯಕ್ರಮ ಎಂದು ಗ್ರಹಿಸಲಾಗಿದೆ ಎಂದು ಶೈಕ್ಷಣಿಕ, ಲೇಖಕ ಮತ್ತು ವಿಮರ್ಶಕ ಅಪೂರ್ವಾನಂದ್ ಹೇಳಿದ್ದಾರೆ.ಈ ಕುರಿತು ಕಾಂಗ್ರೆಸ್ ಅಥವಾ ಇತರ ಪಕ್ಷಗಳು ನೇರವಾಗಿ ಹೇಳುತ್ತಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು.