ನವದೆಹಲಿ: ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ನ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ, ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿಯನ್ನು ದೆಹಲಿ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಈ ಮಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ಪೊಲೀಸರು ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಚೈತನ್ಯಾನಂದ ಅವರ ಮೂವರು ಮಹಿಳಾ ಸಹಾಯಕಿಯರನ್ನು ಬಂದಿಸಿದ್ದಾರೆ. ಈ ಸಹಾಯಕಿಯರು ವಿದ್ಯಾರ್ಥಿನಿಯರನ್ನು ಬೆದರಿಸಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ತೆಗೆದುಹಾಕುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಗಸ್ಟ್ 4ರಂದು ಎಫ್‌ಐಆರ್ ದಾಖಲಾಗುತ್ತಿದ್ದಂತೆ ಚೈತನ್ಯಾನಂದ ಆಶ್ರಮದಿಂದ ಪರಾರಿಯಾಗಿದ್ದ. ನಂತರ ಪೊಲೀಸರು ಆಗ್ರಾದ ಹೋಟೆಲ್‌ನಲ್ಲಿ ಅಡಗಿದ್ದ ಚೈತನ್ಯಾನಂದ ಸ್ವಾಮೀಜಿಯನ್ನು ಪತ್ತೆಹಚ್ಚಿ ಬಂಧಿಸಿದ್ದರು.
ಚೈತನ್ಯಾನಂದನ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದ್ದ ರೂ. 8 ಕೋಟಿ ಹಣವನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನೈರುತ್ಯ ದೆಹಲಿಯಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ ಮೆಂಟ್ ನ ಮುಖ್ಯಸ್ಥನಾಗಿದ್ದ ಸರಸ್ವತಿ ತಮ್ಮ ವಸತಿಗೃಹಕ್ಕೆ ಭೇಟಿ ನೀಡುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.