ಕಾವೇರಿ ಸಂಪರ್ಕ ; 110 ಹಳ್ಳಿಗಳ ವ್ಯಾಪ್ತಿಯಲ್ಲಿ ಮನೆ ಬಾಗಿಲಿಗೆ ತೆರಳಿ ಅರ್ಜಿ ವಿತರಿಸಲು ಸೂಚನೆ

Most read

ಬೆಂಗಳೂರು : 110 ಹಳ್ಳಿಗಳ ವ್ಯಾಪ್ತಿಯಲ್ಲಿ ಮನೆ ಬಾಗಿಲಿಗೆ ತೆರಳಿ ಕಾವೇರಿ ಕುಡಿಯುವ ನೀರು ಸಂಪರ್ಕದ ಬಗ್ಗೆ ಮಾಹಿತಿ ನೀಡುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್‌ ಪ್ರಸಾತ್‌ ಮನೋಹರ್‌ ಸೂಚನೆ ನೀಡಿದರು.

ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನಿರ್ದೇಶನದಂತೆ, ಜಲಮಂಡಳಿ ಅಧ್ಯಕ್ಷರು ಇಂದು ನಗರದ ಪೂರ್ವ ವಲಯದಲ್ಲಿರುವ ಚಳ್ಳಗೇರೆ, ಚನ್ನಸಂದ್ರ ಭಾಗದಲ್ಲಿ ಜಲಮಂಡಳಿಯ ವತಿಯಿಂದ ಆಯೋಜಿಸಲಾಗಿರುವ ಕಾವೇರಿ ಸಂಪರ್ಕ ಅಭಿಯಾನದ ಸ್ಥಳಗಳಿಗೆ ಭೇಟಿ ನೀಡಿ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿದರು.

110 ಹಳ್ಳಿಗಳಿಗೆ ಸಮರ್ಪಕ ನೀರು ಒದಗಿಸಲು ಬೆಂಗಳೂರು ಜಲಮಂಡಳಿ ಸಜ್ಜಾಗಿದೆ. ಈಗಾಗಲೇ ಹೆಚ್ಚುವರಿ ನೀರು ನಗರಕ್ಕೆ ಸರಬರಾಜು ಆಗುತ್ತಿದೆ. ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜನರು ಸಂಪರ್ಕ ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಬೇಸಿಗೆ ಸಂಧರ್ಭದಲ್ಲಿ ಕೊಳವೆ ಬಾವಿಗಳಲ್ಲಿ ನೀರಲ್ಲದೇ ಉಂಟಾಗಿದ್ದಂತಹ ಸಮಸ್ಯೆಗಳು ಮತ್ತೊಮ್ಮೆ ಮರುಕಳಿಸದೇ ಇರಲು ಜನರು ಕುಡಿಯುವ ನೀರಿನ ಸಂಪರ್ಕ ಪಡೆದುಕೊಳ್ಳಬೇಕು. 110 ಹಳ್ಳಿಗಳ ವ್ಯಾಪ್ತಿಯ ಎಲ್ಲಾ ವಲಯಗಳಲ್ಲೂ ಮನೆ ಮನೆಗೂ ಕಾವೇರಿ ನೀರು – ಕುಡಿಯುವ ನೀರು ಸಂಪರ್ಕ ಅಭಿಯಾನ ಪ್ರಾರಂಭಿಸಲಾಗಿದೆ. ಜನರು ಆನ್‌ಲೈನ್‌ ಮೂಲಕ ಅಥವಾ ಅಭಿಯಾನ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಮುಂದಿನ ದಿನಗಳಲ್ಲಿ ಜಲಮಂಡಳಿಯ ವತಿಯಿಂದ ಕಾವೇರಿ ಕುಡಿಯುವ ನೀರು ಸಂಪರ್ಕ ಅಭಿಯಾನದ ಭಿತ್ತಿಪತ್ರ, ಅರ್ಜಿ ಹಾಗೂ ಠೇವಣಿ ಶುಲ್ಕದ ವಿವರಗಳನ್ನು ಒಳಗೊಂಡಿರುವ ಮಾಹಿತಿಯನ್ನು ಮನೆ ಬಾಗಿಲಿಗೆ ನೀಡಲು ನಿರ್ಧರಿಸಲಾಗಿದೆ. ನಮ್ಮ ಮಂಡಳಿಯ ನೌಕರರು ಮನೆ ಬಾಗಿಲಿಗೆ ತೆರಳಿ ಇವುಗಳನ್ನು ನೀಡಿ ಅಭಿಯಾನ ನಡೆಯುತ್ತಿರುವ ಸ್ಥಳ, ದಿನಾಂಕ ಹಾಗೂ ಸಮಯದ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

More articles

Latest article